ತಿಳಿರು ತೋರಣ
ಅವರ ನೂರನೆಯ ಹುಟ್ಟುಹಬ್ಬದ ಆಚರಣೆಯಲ್ಲಿ ಆವತ್ತು ಅಲ್ಲಿ ಭಾಗಿಯಾಗಿದ್ದ ನಮಗೆಲ್ಲ ಒಂದು ರೀತಿಯ ವಿಶೇಷ ಧನ್ಯತೆ. ಕೈಕುಲುಕಿ ನಮಸ್ಕರಿಸಿ ಶುಭಾಶಯ ತಿಳಿಸಿ ಆಶೀರ್ವಾದವನ್ನೂ ಪಡೆದು, ಅವರೊಡನೆ ಫೋಟೊ ತೆಗೆಸಿಕೊಳ್ಳುವ ಸಂಭ್ರಮ. ಅದಕ್ಕೆ ಕಾರಣವೂ ಇದೆ.
ಸಾಮಾನ್ಯವಾಗಿ ನಾವು ಶತಾಯುಷಿಗಳ ಬಗ್ಗೆ ಅಲ್ಲಿಇಲ್ಲಿ ಸುದ್ದಿಮಾಧ್ಯಮಗಳಲ್ಲಿ ಓದಿ/ಕೇಳಿ ತಿಳಿದುಕೊಂಡಿರುತ್ತೇವೆಯೇ ಹೊರತು ಸಂಭ್ರಮಾಚರಣೆಯಲ್ಲಿ ಖುದ್ದಾಗಿ ಪಾಲ್ಗೊಳ್ಳುವ ಸಂದರ್ಭ-ಅವಕಾಶ ಸಿಗುವುದು ಕಡಿಮೆ.
ಉದಾಹರಣೆಗೆ -'ನಡೆದಾಡುವ ದೇವರು' ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು 111 ವರ್ಷ ಬಾಳಿದ್ದರು... 'ತಿರುಕ' ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು 105 ವರ್ಷ ಬಾಳಿದ್ದರು... ಸ್ವಾತಂತ್ರ್ಯ ಯೋಧ ಎಚ್.ಎಸ್.ದೊರೆಸ್ವಾಮಿ 103 ವರ್ಷ, ಪ್ರಬಂಧಕಾರ ಪ್ರೊ.ಎ.ಎನ್. ಮೂರ್ತಿರಾಯರು 102 ವರ್ಷ, ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು 101 ವರ್ಷ ಬಾಳಿದವರು... ಅಂತೆಲ್ಲ ಖ್ಯಾತನಾಮರ ಬಗ್ಗೆ ನಮಗೆ ಕೇಳಿಯಷ್ಟೇ ಗೊತ್ತಿರುತ್ತದೆ.
ನಿಘಂಟುತಜ್ಞ ಜಿ.ವೆಂಕಟಸುಬ್ಬಯ್ಯ, ಸಾಲುಮರದ ತಿಮ್ಮಕ್ಕ, 'ಸೆಂಚುರಿ ಗೌಡ' ಎಂದೇ ಹೆಸರಾಗಿದ್ದ ಕಲಾವಿದ ಸಿಂಗ್ರಿ ಗೌಡ ಮುಂತಾದ ಹೆಸರುಗಳೂ ಸ್ಮೃತಿಪಟಲದಲ್ಲೊಮ್ಮೆ ಹೀಗೇ ಹಾದು ಹೋಗು ತ್ತವೆ. ವ್ಯಕ್ತಿಗತವಾಗಿ ನನಗಾದರೆ ನಮ್ಮೂರಲ್ಲೇ ಆಗಿಹೋದ ಶತಾಯುಷಿ ರಾಮಚಂದ್ರ ಚಿಪ ಳೂಣಕರ್ ಸಹ ನೆನಪಾಗುತ್ತಾರೆ. ಅದುಬಿಟ್ಟರೆ ಹೆಚ್ಚಾಗಿ ಮಹಾ ಚುನಾವಣೆಗಳ ವೇಳೆ ಸಂಜೆ ಪ್ರದೇಶಸಮಾಚಾರದಲ್ಲಿ "104 ವರ್ಷಗಳ ವೃದ್ಧೆಯೊಬ್ಬರು ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಮತಚಲಾಯಿಸಿದರು" ರೀತಿಯ ಸುದ್ದಿಗಳಲ್ಲಷ್ಟೇ ಒಬ್ಬಿಬ್ಬರು ಅಜ್ಞಾತ ಶತಾಯುಷಿಗಳು ನಮ್ಮ ಕಲ್ಪನೆಗೆ ನಿಲುಕುತ್ತಾರೆ, ಪರಂತು ಪ್ರತ್ಯಕ್ಷವಲ್ಲ.
ಆದರೆ, ಮೊನ್ನೆ ಜೂನ್ 13ರಂದು ಶನಿವಾರ ಅಮೆರಿಕದ ನ್ಯೂಜೆರ್ಸಿಯಲ್ಲಿ ನಾವೊಂದಿಷ್ಟು ಜನ ಅನಿವಾಸಿ ಭಾರತೀಯರು ಸಂಭ್ರಮಿಸಿದ್ದು, ಅಪರೂಪದ್ದೊಂದು ಅವಕಾಶವನ್ನು ನಮ್ಮದಾ ಗಿಸಿದ್ದು, ಅಮೆರಿಕನ್ನಡಿಗನೊಬ್ಬನ ನೂರನೆಯ ಜನ್ಮದಿನ ಆಚರಣೆಯಲ್ಲಿ ಖುದ್ದಾಗಿ ಭಾಗವ ಹಿಸುವುದರ ಮೂಲಕ! ನಿಜಕ್ಕೂ ಒಂಥರ ರೋಮಾಂಚನದ ಅನುಭವವದು.
Srivathsa Joshi Column: ಪ್ರೇಕ್ಷಕರೇ ಪ್ರದರ್ಶಕರಾಗುವ ಕಲೆ ಮೆಕ್ಸಿಕನ್ ಅಲೆ
ಬುಕ್ಕಾಂಬುಧಿ ವೆಂಕಟರಮಣ ಕೃಷ್ಣಮೂರ್ತಿ, ಅಥವಾ ಬಿ.ವಿ.ಕೃಷ್ಣಮೂರ್ತಿ, ಅಥವಾ ಇನ್ನೂ ಹ್ರಸ್ವವಾಗಿ ಹೇಳಬೇಕೆಂದರೆ 'ಬಿವಿಕೆ'. ನೂರು ಪೂರೈಸಿದ ಉತ್ಸಾಹಿ ನವತರುಣ. ಬರ್ತ್‌ಡೇ ಬಾಯ್ ಎಂದು ಬೇಕಿದ್ದರೂ ಹೇಳಬಹುದು. ಇದು ಯಾವ ರೀತಿಯಲ್ಲೂ ಆಲಂಕಾರಿಕ ಉತ್ಪ್ರೇಕ್ಷೆಯ ಮಾತಲ್ಲ. ನೂರಕ್ಕೆ ನೂರು ನಿಜವಾದದ್ದೇ. ಕೃಷ್ಣಮೂರ್ತಿ ಈಗಲೂ ಲವಲವಿಕೆಯಿಂದ ಓಡಾಡು ತ್ತಾರೆ, ಇನ್ನೊಬ್ಬರ ಅಥವಾ ಗಾಲಿಕುರ್ಚಿ ಊರುಗೋಲು ಇತ್ಯಾದಿಯ ಸಹಾಯವಿಲ್ಲದೆ. ಅವರ ಶ್ರವಣಶಕ್ತಿ, ದೃಷ್ಟಿ, ಭೌತಿಕ-ಬೌದ್ಧಿಕ ಸಮತೋಲನ, ಸಂವೇದನ ಎಲ್ಲವೂ ಠಾಕುಠೀಕು ಪರ್ಫೆಕ್ಟ್.
ಹಾಗಾಗಿಯೇ ಗುರುತು ಹಿಡಿದು ನಸುನಗುತ್ತ ಮಾತನಾಡುತ್ತಾರೆ. ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಅವರಿಗಿಂತ ಅರ್ಧ ವಯಸ್ಸಿನವರು ಸರಾಸರಿಯಾಗಿ ಏನನ್ನೆಲ್ಲ ಮಾಡಬಲ್ಲರೋ ಅದನ್ನೆಲ್ಲ ಆರಾಮಾಗಿ ಮಾಡುತ್ತಾರೆ. ಅಂದರೆ ಕಾರು ಚಲಾಯಿಸುತ್ತಾರೆ, ತರಕಾರಿ ಬೆಳೆಸುತ್ತಾರೆ, ಸ್ವಂತ ಅಡುಗೆ ಮಾಡಿಕೊಳ್ಳುತ್ತಾರೆ, ದಿನಾ ಆಫೀಸಿಗೆ ಹೋಗಿ ಕೆಲಸವನ್ನೂ ಮಾಡು ತ್ತಾರೆ. ಕಂಪ್ಯೂಟರ್ ಆಪರೇಟ್ ಮಾಡುತ್ತಾರೆ. ಮುದ್ದಾದ ಕೈಬರಹದಲ್ಲಿ ಕನ್ನಡದಲ್ಲಿ ಬರೆಯುತ್ತಾರೆ.
ಮೊನ್ನೆಯ ಸಮಾರಂಭದಲ್ಲಿ ಅವರು ಕಾರಿಯೋಕೆ ಸಂಗೀತದ ಜತೆ "ನಾವಾಡುವ ನುಡಿಯೇ ಕನ್ನಡ ನುಡಿ... ನಾವಿರುವ ತಾಣವೇ ಗಂಧದಗುಡಿ..." ಅಣ್ಣಾವ್ರ ಹಾಡನ್ನೂ ಆಲಾಪನೆಸಹಿತ ಹಾಡಿದ್ದಾರೆಂದರೆ ನೀವು ನಂಬಲೇಬೇಕು!
ಅವರದೊಂದು ಕಿರುಪರಿಚಯ, ಸುಧಾದಲ್ಲಿ ಎಚ್ಚೆಸ್ಕೆ ವಾರದವ್ಯಕ್ತಿ ಅಂಕಣದಲ್ಲಿ ಬರೆಯುತ್ತಿದ್ದ ಶೈಲಿಯಲ್ಲಿ: 1926ರಲ್ಲಿ ಜನನ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬುಕ್ಕಾಂಬುಧಿಯಲ್ಲಿ. ತಂದೆ ವೆಂಕಟರಮಣ ಭಾಗವತರು. ತಾಯಿ ನಂಜಮ್ಮ. ಕೃಷ್ಣಜನ್ಮಾಷ್ಟಮಿಯಂದು ಹುಟ್ಟಿದ್ದ ರಿಂದ, ಮತ್ತು ಅಜ್ಜನ ಹೆಸರು ವೆಂಕಟಕೃಷ್ಣ ಎಂದು ಇದ್ದುದರಿಂದ 'ಕೃಷ್ಣಮೂರ್ತಿ' ಎಂದು ನಾಮಕರಣ.
ಪ್ರೀತಿಯಿಂದ 'ಕಿಟ್ಟು' ಅಥವಾ 'ಪುಟ್ಟ' ಎಂದು ಕರೆಯುತ್ತಿದ್ದರಂತೆ. ಕೃಷ್ಣಮೂರ್ತಿ ಏಳು ವರ್ಷದ ಬಾಲಕನಾಗಿದ್ದಾಗ ತಾಯಿ ತೀರಿಕೊಂಡರು. ಅವರು ತಂದೆಯ ನಾಲ್ಕನೆಯ ಹೆಂಡತಿ, ಮೊದಲ ಮೂವರೂ ಹಾಗೆಯೇ ಅಕಾಲ ಮರಣಕ್ಕೀಡಾಗಿದ್ದರು. ಅಜ್ಜಿ ಬನಶಂಕರಮ್ಮನ ಆರೈಕೆಯಲ್ಲಿ ಬೆಳೆದ ಕೃಷ್ಣಮೂರ್ತಿಯ ಪ್ರಾಥಮಿಕ ಶಿಕ್ಷಣ ಮೈಸೂರಿನಲ್ಲಿ.
ಮಾಧ್ಯಮಿಕ ಮತ್ತು ಪ್ರೌಢಶಾಲೆ ಓದು ಚಿಕ್ಕಮಗಳೂರಿನಲ್ಲಿ. ಅದಾದಮೇಲೆ ಟೈಪ್‌ರೈಟಿಂಗ್ ಮತ್ತು ಷಾರ್ಟ್‌ಹ್ಯಾಂಡ್ ಕಲಿಕೆ ಬೆಂಗಳೂರಿನಲ್ಲಿ. 1944ರಲ್ಲಿ ಶ್ಯಾನುಭೋಗ್ ರಂಗಯ್ಯನವರ ಮಗಳು ಚಿನ್ನಮ್ಮ ನೊಂದಿಗೆ ಮದುವೆ. ಮಾರನೆವರ್ಷ ಬೆಂಗಳೂರಿನಲ್ಲಿ ಕಾಫಿಬೋರ್ಡ್‌ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರ್ಪಡೆ. ನಾಲ್ಕು ವರ್ಷಗಳ ನಂತರ ಚಿಕ್ಕಮ ಗಳೂರಿಗೆ ವರ್ಗ. ಹಿರಿಮಗ ಪ್ರಭಾಕರ, ಆಮೇಲೆ ಅವಳಿ ಮಕ್ಕಳು ಇಂದಿರಾ ಮತ್ತು ಶ್ರೀಧರ ಅಲ್ಲಿಯೇ ಹುಟ್ಟಿದವರು. 1974ರಲ್ಲಿ ತಂದೆ ವೆಂಕಟರಮಣ ಭಾಗವತರು ದೈವಾಧೀನ. ಮಕ್ಕಳ ಮದುವೆ, ಮೊಮ್ಮಕ್ಕಳ ಜನನ, ಸಂಸಾರರಥ ಚೆನ್ನಾಗಿಯೇ ಸಾಗುತ್ತಿದ್ದಾಗ 1980ರಲ್ಲಿ ಪತ್ನಿ ಚಿನ್ನಮ್ಮನಿಗೆ ಪಾರ್ಶ್ವವಾಯು ಆಘಾತ. ಹದಿನಾಲ್ಕು ವರ್ಷ ನರಳಿ 1994ರಲ್ಲಿ ಆಕೆಯ ನಿಧನ.
ತನ್ಮಧ್ಯೇ 1984ರಲ್ಲಿ ಕಾಫಿ ಬೋರ್ಡ್ ಕೆಲಸದಿಂದ ಕೃಷ್ಣಮೂರ್ತಿ ನಿವೃತ್ತಿ. ಬೆಂಗಳೂರಿನ ಮಹಾ ಬೋಧಿ ಸೊಸೈಟಿಯಲ್ಲಿ ದಶಕಕ್ಕೂ ಹೆಚ್ಚುಕಾಲ ಸ್ವಯಂಸೇವಕನಾಗಿ ದುಡಿಮೆ. 1997ರಲ್ಲಿ ಅಮೆರಿಕಕ್ಕೆ, ಮಗಳು-ಅಳಿಯ ಇದ್ದಲ್ಲಿಗೆ ಪ್ರಯಾಣ. ಅಲ್ಲಿಯೇ ಏನಾದರೊಂದು ವೃತ್ತಿಯಲ್ಲಿ ತೊಡಗ ಬೇಕೆಂಬ ತಹತಹ. ಮರುವರ್ಷವೇ ನ್ಯೂಯಾರ್ಕ್ʼನಲ್ಲಿ ವಕೀಲಿ ವೃತ್ತಿಯಲ್ಲಿರುವ ಕನ್ನಡಿಗ ಎಲ್. ನಾಗಾನಂದರ ಕಚೇರಿಯಲ್ಲಿ ಕೆಲಸಕ್ಕೆ ಸೇರ್ಪಡೆ. ಕಚೇರಿ ನ್ಯೂಯಾರ್ಕ್‌ನಿಂದ ನ್ಯೂಜೆರ್ಸಿಗೆ ಸ್ಥಳಾಂತರ ವಾದರೂ ಈಗಲೂ ಅದೇ ವೃತ್ತಿ. ವಾಸವೂ ನಾಗಾನಂದರ ಜತೆಯೇ. ಪ್ರವೃತ್ತಿಯಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯರಚನೆ. ಆತ್ಮಕಥನ, ಪ್ರವಾಸಕಥನ, ಒಂದು ವಿಶೇಷ ಪ್ರಾದೇಶಿಕ ನಿಘಂಟು ಸೇರಿದಂತೆ ಹತ್ತಾರು ಪುಸ್ತಕಗಳು ಪ್ರಕಟ. ಬಂಧುವರ್ಗ ಮತ್ತು ಸ್ನೇಹಿತ ರೊಡನೆ ಆಗಾಗ ಪ್ರವಾಸ, ಪ್ರಪಂಚಪರ್ಯಟನೆ. ವಿನೋದಪ್ರಿಯ ಸ್ನೇಹ ಜೀವಿಯಾದ್ದರಿಂದ ಅಮೆರಿಕದಲ್ಲೂ ಕರ್ನಾಟಕದಲ್ಲೂ ಅಪಾರ ಸ್ನೇಹ ವರ್ಗ.
ಸಾಹಿತ್ಯ-ಸಂಸ್ಕೃತಿ ಕ್ಷೇತ್ರ ದವರೊಡನೆ ಆಪ್ತತೆ ಒಡನಾಟ. ಜೀವನದ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಬಾರಿಸಿ ಆರೋಗ್ಯವಂತ ಮುನ್ನಡೆ. ಉದ್ಯೋಗದಾತ ನಾಗಾನಂದರ ಮುತುವರ್ಜಿಯಲ್ಲೇ ನೂರರ ಸಂಭ್ರಮಾಚರಣೆ ಸಮಾರಂಭ ನಡೆದದ್ದು. ನನಗೆ ಕೃಷ್ಣಮೂರ್ತಿಯವರ ಪರಿಚಯ ಹೇಗೆ ಆಯ್ತೆಂಬುದನ್ನೂ ತಿಳಿಸುತ್ತೇನೆ. ಅವರ ಅಳಿಯ ಪುರುಷೋತ್ತಮ ಚಿಕ್ಕಾತುರ್ ಮತ್ತು ಮಗಳು ಇಂದಿರಾ ಬಹುಕಾಲ ನ್ಯೂಯಾರ್ಕ್‌ನಿವಾಸಿಗಳಾಗಿದ್ದವರು.
ಕನ್ನಡದ ಕಟ್ಟಾ ಅಭಿಮಾನಿಗಳು. ಕರ್ನಾಟಕದಿಂದ ಅಮೆರಿಕಕ್ಕೆ ಸಾಂಸ್ಕೃತಿಕ/ಸಾಹಿತ್ಯಿಕ ಕಾರ್ಯಕ್ರಮಗಳಿಗೆಂದು ಬರುವ ಕಲಾವಿದರು, ಸಾಹಿತಿಗಳು ನ್ಯೂಯಾರ್ಕ್‌ಗೆ ಬಂದಾಗ ವಿಮಾನ ನಿಲ್ದಾಣಕ್ಕೆ ಹೋಗಿ ಅವರನ್ನು ಸ್ವಾಗತಿಸಿ ಮನೆಗೆ ಕರೆದುಕೊಂಡುಬಂದು ಆತಿಥ್ಯ ನೀಡುವುದಷ್ಟೇ ಅಲ್ಲ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುವುದು ಮತ್ತು ಅಮೆರಿಕದ ಬೇರೆಡೆಗಳಿಗೆ ಪ್ರವಾಸಸಂಯೋಜನೆ ಮಾಡುವುದನ್ನೂ ಅತ್ಯಂತ ಪ್ರೀತಿಯಿಂದ ಮಾಡುತ್ತಿದ್ದ ಆದರ್ಶ ದಂಪತಿ.
ಇಸವಿ 2000ದಲ್ಲಿ ನಾನು ಅಮೆರಿಕಕ್ಕೆ ಬಂದು ಒಂದೆರಡು ವರ್ಷಗಳಲ್ಲೇ ನನಗೂ ಪರಿಚಯ ವಾದರು. ನನ್ನ ಅಂಕಣಬರಹಗಳನ್ನು ನಿಯತವಾಗಿ ಓದಿ ಪ್ರೋತ್ಸಾಹಿಸಿದರು. ಒಮ್ಮೆ ಇಂಗ್ಲೇಂಡ್ ನಿಂದ ನನ್ನ ಅಣ್ಣ-ಅತ್ತಿಗೆ ಅಮೆರಿಕಕ್ಕೆ ಪ್ರವಾಸಕ್ಕೆಂದು ಬಂದಿದ್ದಾಗ, ನಾನವರನ್ನು ನ್ಯೂಯಾರ್ಕ್ ʼಗೂ ಕರೆದುಕೊಂಡು ಹೋಗಿದ್ದಾಗ, ನಮ್ಮ ವಾಸ್ತವ್ಯ ಇಂದಿರಾ- ಪುರುಷೋತ್ತಮ ಮನೆಯಲ್ಲೇ. ಅಲ್ಲದೇ ಅವರ ಮಗ-ಸೊಸೆ ಹಿಂದೊಮ್ಮೆ ಇಲ್ಲಿ ನಾನಿರುವ ವರ್ಜೀನಿಯಾದಲ್ಲೇ ಇದ್ದರಾದ್ದರಿಂದ ಇಲ್ಲಿಗೆ ಬಂದಾಗಲೂ ಭೇಟಿಯಾಗುತ್ತಿದ್ದರು.
ಆಮೇಲೆ ಅವರು ಅಮೆರಿಕವಾಸ ಕೊನೆಗೊಳಿಸಿ ಬೆಂಗಳೂರಿಗೆ ಹಿಂದಿರುಗಿದರು. ನಮ್ಮ ಸ್ನೇಹ ಸಂಪರ್ಕ ಮಾತ್ರ ಇಮೇಲ್/ವಾಟ್ಸ್ಯಾಪ್ ಮೂಲಕ ಮುಂದುವರಿಯಿತು. ನಾಲ್ಕೈದು ವರ್ಷಗಳ ಹಿಂದೆ ಒಮ್ಮೆ ಇಮೇಲ್‌ನಲ್ಲೇ ಕೃಷ್ಣಮೂರ್ತಿಯವರನ್ನು ಪರಿಚಯಿಸಿದರು. ನಮ್ಮಿಬ್ಬರೊಳಗೆ ಪರಸ್ಪರ ಫೋನ್ ನಂಬರ್ ವಿನಿಮಯವೂ ಆಯ್ತು. ಕೃಷ್ಣಮೂರ್ತಿಯವರು 'ನಾ ನಡೆದು ಬಂದ ಹಾದಿ' (ಆತ್ಮಕಥನ), 'ಪ್ರವಾಸಗಳ ಕಂತೆ', ಮತ್ತು 'ನೆನಪಿಸಿಕೊಂಡ ವಿನೋದ ಪ್ರಸಂಗಗಳು' ಎಂಬ ತಮ್ಮ ಮೂರು ಪುಸ್ತಕಗಳನ್ನು ನನ್ನ ಓದಿಗೆಂದು ಅಂಚೆಯಲ್ಲಿ ಕಳುಹಿಸಿದರು. ದೂರವಾಣಿಯಲ್ಲಿ ಮಾತನಾಡಿದರು.
ತಾನಿನ್ನೂ ಅಂಬೆಗಾಲಿಡುತ್ತಿರುವ ಬರಹಗಾರ ಎಂದು ಬಿನ್ನವಿಸಿಕೊಂಡರು. ಅವರ ಪುಸ್ತಕ ಗಳನ್ನೋದಿ ಅವರ ಬಗ್ಗೆ ನನ್ನಲ್ಲಿ ವಿಶೇಷವಾದೊಂದು ಗೌರವಾಭಿಮಾನ ಮೂಡಿತು. ಆದ್ದರಿಂದಲೇ, ನೂರರ ಸಂಭ್ರಮ ಸಮಾರಂಭದ ಆಹ್ವಾನಪತ್ರವನ್ನು ಪುರುಷೋತ್ತಮ ಅವರು ಕಳುಹಿಸಿದಾಗ, ಶತಾಯುಷಿಯನ್ನು ಮುಖತಃ ಭೇಟಿಯಾಗುವ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು, ನಾನೊಬ್ಬನೇ ಅಲ್ಲ ಸಹನಾಳನ್ನೂ ಕರೆದುಕೊಂಡು ಹೋಗಿ ಆಶೀರ್ವಾದ ಪಡೆಯಬೇಕು ಎಂದು ನಿರ್ಧರಿಸುವಂತಾಯ್ತು.
ಅದನ್ನು ಮನಃಪೂರ್ವಕವಾಗಿ ಅನುಷ್ಠಾನಗೊಳಿಸುವಂತೆಯೂ ಆಯ್ತು. ಆ ಸುಂದರ ಅನೌಪ ಚಾರಿಕ ಸಮಾರಂಭ ನಡೆದದ್ದು ನ್ಯೂಜೆರ್ಸಿಯ ಎಡಿಸನ್ ಪಟ್ಟಣಕ್ಕೆ ಹತ್ತಿರದಲ್ಲೇ ಇರುವ ರಾಯಲ್ ಆಲ್ಬರ್ಟ್ ಪ್ಯಾಲೇಸ್ ಎಂಬ ಭವ್ಯ ಸಭಾಂಗಣದಲ್ಲಿ. ಮುಖ್ಯವಾಗಿ ಕೃಷ್ಣಮೂರ್ತಿಯವರ ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳು, ಕುಟುಂಬದವರು ಎಲ್ಲ ಸೇರಿ ನಡೆಸಿದ ಕಾರ್ಯಕ್ರಮವದು. ಇಂದಿರಾ-ಪುರುಷೋತ್ತಮ ದಂಪತಿಯಲ್ಲದೆ ಬೇರಾರೂ ಅಲ್ಲಿ ನಮಗೆ ಪರಿಚಯದವರಿರುತ್ತಾರೋ ಇಲ್ಲವೋ ಅಂದುಕೊಂಡಿದ್ದೆ, ಮತ್ತೆ ನೋಡಿದರೆ ಆಪ್ತರೂ ಆತ್ಮೀಯರೂ ಅನೇಕರಿದ್ದರು!
ನನಗೆ ಹತ್ತಿರದ ಸಂಬಂಧದವರೇ ಆದ ಸರೋಜಾ- ವೇಣುಗೋಪಾಲ್ ದಂಪತಿ, ನನ್ನ ಅತ್ಯಂತ ಆತ್ಮೀಯ ಉಷಾ-ಪ್ರಸನ್ನ ದಂಪತಿ, ಇನ್ನೊಬ್ಬ ಹಿರಿಯ ಸ್ನೇಹಿತ ಅಶೋಕ ಕಟ್ಟಿಮನಿ ಮುಂತಾದ ನ್ಯೂಜೆರ್ಸಿಗರಷ್ಟೇ ಅಲ್ಲ, ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದಿಂದಲೂ ಕೆಲ ಪರಿಚಿತ ಸ್ನೇಹಿತರು-ವೆಂಕಟರಾಮ್ ಮತ್ತು ಜಯರಾಮ್ (ಉಬ್ರಾಣಿ ಸಹೋದರರು), ಚಿತ್ರಾ-ರಘುವೀರ್ ದಂಪತಿ, ಕ್ಷಮಾ- ಜಯರಾಮ್ ದಂಪತಿ (ಪ್ರೊ. ಜಿ. ಅಶ್ವತ್ಥನಾರಾಯಣರ ಮಗಳು- ಅಳಿಯ) ಮುಂತಾದವರೂ ಅಲ್ಲಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ಇನ್ನೊಬ್ಬ ನ್ಯೂಜೆರ್ಸಿ ನಿವಾಸಿ 'ಬರಹ' ಬ್ರಹ್ಮ ಶೇಷಾದ್ರಿವಾಸು, ಪತ್ನಿ ಜಯಂತಿ ಮತ್ತು ಪುತ್ರ ಅರ್ಜುನ್ ಜತೆಗೆ ಬಂದಿದ್ದರು. ಇವರೆಲ್ಲರನ್ನೂ ಅಲ್ಲಿಗೆ ಸೆಳೆದದ್ದು ಕೃಷ್ಣ ಮೂರ್ತಿಯವರ ನಿಷ್ಕಲ್ಮಷ ಪ್ರೀತಿ ಮತ್ತು ಅವರ ಬಗೆಗಿನ ಆದರದ ಅಭಿಮಾನವೇ. ಶೇಷಾದ್ರಿವಾಸು ಅವರಿಂದಲೇ ನನಗೆ ತಿಳಿದದ್ದು ಕೃಷ್ಣಮೂರ್ತಿ ಸಹ ನನ್ನಂತೆಯೇ 20-25 ವರ್ಷಗಳಿಂದಲೂ 'ಬರಹ' ತಂತ್ರಾಂಶದ ನಿತ್ಯಬಳಕೆದಾರರೆಂದು.
ಕೃಷ್ಣಮೂರ್ತಿಯವರ ಮುದ್ದಾದ ಕನ್ನಡ ಕೈಬರಹವನ್ನೂ ಶೇಷಾದ್ರಿ ವಾಸು ಅವರೇ ನನಗೆ ತೋರಿಸಿದ್ದು. ಅವರ ಮಗ ಅರ್ಜುನ್‌ನಿಗಂತೂ 'ಕೃಷ್ಣಮೂರ್ತಿ ತಾತ'ನ ಬಗ್ಗೆ ಎಲ್ಲಿಲ್ಲದ ಅಭಿಮಾನ. ಇಂತಹ ಇಳಿ ವಯಸ್ಸಿನಲ್ಲೂ ಅವರು ಇಷ್ಟೊಂದು ಕ್ರಿಯಾಶೀಲರಾಗಿ ಇತರರಿಗೂ ಸ್ಪೂರ್ತಿಯ ಸೆಲೆಯಾಗಿರುವುದು, ದೇಶ- ವಿದೇಶಗಳಲ್ಲಿ ಪ್ರವಾಸ ಮಾಡಿ ಜೀವನಾನುಭವ ಗಳಿಸಿರುವುದು, ಅದನ್ನು ಬರೆದಿಟ್ಟು ಬೇರೆಯ ವರ ಓದಿಗೆ ಒದಗಿಸುವುದು ಅವನನ್ನು ದಂಗು ಬಡಿಸಿದೆಯೆಂತೆ. ಎಂಜಿನಿಯರಿಂಗ್ ಓದುತ್ತ ಸದ್ಯ ಪಿಟ್ಸ್‌ಬರ್ಗ್‌ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಅರ್ಜುನ್ ಆವತ್ತಿನ ಸಮಾರಂಭದಲ್ಲಿ ಭಾಗವಹಿಸಲಿಕ್ಕೆಂದೇ ಪಿಟ್ಸ್‌ಬರ್ಗ್‌ನಿಂದ ಆರೇಳು ಗಂಟೆ ಡ್ರೈವ್ ಮಾಡಿಕೊಂಡು ನ್ಯೂಜೆರ್ಸಿಗೆ ಬಂದಿದ್ದನು!
ಸಮಾರಂಭದಲ್ಲಿ ದೀಪ ಬೆಳಗಿಸಿ ಶುಭಾರಂಭ, ಒಬ್ಬಳು ಮರಿ ಮಗಳಿಂದ ಚಿಕ್ಕದೊಂದು ನೃತ್ಯ, ಕೃಷ್ಣಮೂರ್ತಿಯವರ ದೇಶ-ವಿದೇಶ ಪ್ರವಾಸಗಳ ಫೋಟೊಗಳನ್ನು ಸಂಕಲಿಸಿದ ಒಂದು ಚಿತ್ರಪ್ರದರ್ಶನ, ಆಯತಾಕಾರದ ಒಂದು ಕೇಕ್ ಮತ್ತು ವೃತ್ತಾಕಾರದ ಎರಡು ಕೇಕ್ಗಳನ್ನು ಒಂದರ ಪಕ್ಕ ಒಂದರಂತೆ ಸಾಲಾಗಿಟ್ಟು ಸಂಖ್ಯೆ 100 ಎಂದು ಕಾಣುವಂತೆ ಮಾಡಿ ಕೇಕ್ ಕಟ್ ಮಾಡಿದ್ದು, "ಹ್ಯಾಪಿ ಹಂಡ್ರೆಡ್ತ್ ಬರ್ತ್‌ಡೇ ಟು ಯೂ..." ಎಂದು ಎಲ್ಲರೂ ಒಕ್ಕೊರಲಿನಿಂದ ಹಾಡಿ ಹಾರೈಸಿದ್ದು, ಪೊಗದಸ್ತಾದ ಔತಣವನ್ನ ಸವಿದದ್ದು... ಇದಿಷ್ಟೇ ಅಲ್ಲದೆ ಇನ್ನೊಂದು ಭಾವನಾತ್ಮಕ ಕಾಕತಾಳೀಯ ದೃಶ್ಯವೂ ಅಲ್ಲಿ ನನ್ನ ಗಮನಕ್ಕೆ ಬಂತು.
ಅದೇನೆಂದರೆ ಮನೋರಂಜನೆಗೆಂದು 'ಸಂಗೀತ ಕುರ್ಚಿ' ಆಟ ನಡೆಸಿದ್ದರು. ಹಿರಿಯರು ಕಿರಿಯರು ಸುಮಾರಷ್ಟು ಜನ ಉತ್ಸಾಹದಿಂದ ಭಾಗವಹಿಸಿದ್ದರು. ಒಳ್ಳೊಳ್ಳೆಯ ಹಿಂದೀ ಹಿಟ್ ಹಾಡುಗಳನ್ನು ಡೀಜೆ ಪ್ಲೇ ಮಾಡಿ ಸಂಗೀತ ಕುರ್ಚಿ ಸ್ಪರ್ಧೆಗೆ ರಂಗೇರಿಸಿದ್ದನು. ಅಂತಿಮ ಘಟ್ಟದಲ್ಲಿ ಸ್ಪರ್ಧೆ ತೀವ್ರ ವಾದಾಗ ಕಣದಲ್ಲಿದ್ದವರು ಇಬ್ಬರು. ನಡುವೆ ಒಂದೇ ಕುರ್ಚಿಯನ್ನಿಟ್ಟು ಅದರಲ್ಲಿ ಕೃಷ್ಣಮೂರ್ತಿ ಯವರನ್ನೇ ಕುಳ್ಳಿರಿಸಿ ಇಬ್ಬರೂ ಸ್ಪರ್ಧಿಗಳು ಸುತ್ತುತ್ತಿರಬೇಕು. ಸಂಗೀತ ನಿಂತಾಗ ಕೃಷ್ಣಮೂರ್ತಿಯವರು ಒಂದು ಕೈಯನ್ನೆತ್ತಬೇಕು.
ಬಲಗೈ ಯನ್ನೆತ್ತಿದರೆ ಅವರ ಬಲಭಾಗಕ್ಕಿದ್ದ ಸ್ಪರ್ಧಿ ವಿನ್ನರ್. ಎಡಗೈಯನ್ನೆತ್ತಿದರೆ ಎಡ ಭಾಗಕ್ಕಿದ್ದ ಸ್ಪರ್ಧಿ ವಿನ್ನರ್. ಡೀಜೆಯ ಹಾಡು ನಿಂತಾಗ ಕೃಷ್ಣ ಮೂರ್ತಿ ಎಡಗೈಯನ್ನೇ ಎತ್ತಿದರು. ಅಲ್ಲಿದ್ದ ಸ್ಪರ್ಧಿ ತಾನ್ಯಾ ಎಂಬ ಹೆಸರಿನ ಒಬ್ಬ ಚಿಕ್ಕ ಹುಡುಗಿ, ಆರೇಳು ವರ್ಷ ವಯಸ್ಸಿನವಳಿರಬಹುದು. ಆ ಆಟದಲ್ಲಿ ಭಾಗವಹಿಸಿದ್ದ, ಬಹುಶಃ ಆವತ್ತಿನ ಸಮಾರಂಭದಲ್ಲಿ ಹಾಜರಿದ್ದವರ ಪೈಕಿಯೇ ಅತ್ಯಂತ ಕಿರಿಯ ವಯಸ್ಸಿನಳು.
ಆಕೆಯೇ ವಿಜೇತೆಯಾದದ್ದು, ಆವತ್ತಿನ ಅತ್ಯಂತ ಹಿರಿಯ ಕೃಷ್ಣಮೂರ್ತಿಯವರ ಜತೆಯಲ್ಲಿ ಫೋಟೊಗೆ ಪೋಸ್ ಕೊಟ್ಟು ನಿಂತದ್ದು, 'ತಲೆಮಾರುಗಳ ಅಂತರದಲ್ಲಿ ಜೀವನಪಥದ ಮುಂದು ವರಿಕೆ'ಯ ರೂಪಕವೆಂಬಂತೆ ಮಾರ್ಮಿಕವಾಗಿತ್ತು.
ಇನ್ನು, ಕೃಷ್ಣಮೂರ್ತಿಯವರ ಅಕ್ಷರಕೃಷಿಯ ಬಗ್ಗೆಯೂ ಒಂದೆರಡು ಅಂಶಗಳನ್ನು ಉಲ್ಲೇಖಿಸಲೇ ಬೇಕು. ಅವರ ಪುಸ್ತಕಪ್ರಕಟಣೆಗೆ ಬೆನ್ನೆಲುಬಾಗಿ ನಿಂತವರು ಖ್ಯಾತ ರಂಗಕರ್ಮಿ ಬಿ.ವಿ. ರಾಜಾ ರಾಂ. ಸಂಬಂಧದಲ್ಲಿ ಕೃಷ್ಣಮೂರ್ತಿಯವರಿಗೆ ಮಲತಾಯಿಯ ಮೊಮ್ಮಗ. ಅಷ್ಟಾಗಿ ಕೃಷ್ಣ ಮೂರ್ತಿ ಯೇನೂ ಕನ್ನಡ ಎಂ.ಎ ಮಾಡಿದವರಲ್ಲ ಉಪನ್ಯಾಸಕರಾಗಿದ್ದವರೂ ಅಲ್ಲ. ಮೆಟ್ರಿಕ್ ಓದಿನ ಬಳಿಕ ಕಾಫಿಬೋರ್ಡ್ ಉದ್ಯೋಗದಲ್ಲಿ ಬಹುಮಟ್ಟಿಗೆ ಕಾರಕೂನ ಮತ್ತು ಲೆಕ್ಕಿಗ ವೃತ್ತಿಯಲ್ಲಿದ್ದವರು.
ಮಹಾಬೋಧಿ ಸೊಸೈಟಿಯಲ್ಲಿದ್ದಾಗ ಮತ್ತು ಅಮೆರಿಕಕ್ಕೆ ಬಂದಮೇಲೆ ನಾಗಾನಂದರ ಕಾರ್ಯಾ ಲಯದಲ್ಲೂ ಹೆಚ್ಚೂ ಕಡಿಮೆ ಅಂಥದೇ ಕೆಲಸ. ಎಕೌಂಟಿಂಗ್, ಬುಕ್ ಕೀಪಿಂಗ್, ವ್ಯಾಪಾರ ವಹಿವಾಟಿನ, ತೆರಿಗೆ ಲೆಕ್ಕಾಚಾರದ, ಕೋರ್ಟು ಕಚೇರಿಗಳ ಪತ್ರವ್ಯವಹಾರ ಇತ್ಯಾದಿ. ಅಂಥದರಲ್ಲೂ ಸಾಹಿತ್ಯಾಸಕ್ತಿ ಬೆಳೆಸಿಕೊಂಡು ಅನುಭಗಳನ್ನೆಲ್ಲ ಅಕ್ಷರರೂಪದಲ್ಲಿ ಎರಕಹೊಯ್ದಿ ಟ್ಟಿದ್ದಾರೆ ಎನ್ನುವುದು ಅಭಿಮಾನದ ಸಂಗತಿಯೇ. ಆ ಬರವಣಿಗೆಯಾದರೂ ಎಂತಹದು? ಎಲ್ಲರೂ ಓದಿ ಆನಂದಿಸಬಹುದಾ ದಷ್ಟು ಸರಳ, ಸುಂದರ.
ಒಂದಿಷ್ಟು ವಿನೋದ, ಒಂದಿಷ್ಟು ಮುಗ್ಧತೆ, ಒಂದಿಷ್ಟು ಬದುಕಿನ ಬಗೆಗಿನ ಬೆರಗು ನೋಟ. ಅದರಲ್ಲಿ ದೊಡ್ಡಸ್ತಿಕೆಯ ಲವಲೇಷವೂ ಇಲ್ಲ, ಅನಾವಶ್ಯಕ ಕೀಳರಿಮೆ ಕೊರಗುಗಳಂತೂ ಇಲ್ಲವೇ ಇಲ್ಲ. ಜೀವನದಲ್ಲಿ ಪಡೆದ ಅನುಭವಗಳನ್ನು, ಎದುರಾದ ಕಠಿಣ ಸನ್ನಿ ವೇಶಗಳನ್ನೂ ಅವರು ವಿಶ್ಲೇಷಿ ಸಿರುವುದು ಹಾಸ್ಯದ ಪರಿಧಿಯಲ್ಲಿಯೇ. ಮಾತಿಗೊಂದು ವಿನೋದ ಪ್ರಸಂಗ ಸಿದ್ಧವಾಗಿಯೇ ಇರುತ್ತದೆ.
ಆದ್ದರಿಂದಲೇ ಹಾಸ್ಯದಿಗ್ಗಜರಾದ ಎಂ.ಎಸ್. ನರಸಿಂಹಮೂರ್ತಿ, ವೈ.ವಿ.ಗುಂಡೂ ರಾವ್ ಮುಂತಾದವರೂ, ಪ್ರೊ.ಜಿ.ಅಶ್ವತ್ಥನಾರಾಯಣ, ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಮೊದಲಾದ ಗಂಭೀರ ಬರಹಗಾರರೂ ಕೃಷ್ಣಮೂರ್ತಿಯವರ ಅಕ್ಷರಕೃಷಿಯನ್ನು ಅಕ್ಕರೆಯಿಂದ ಕಂಡಿದ್ದಾರೆ, ಕೊಂಡಾಡಿದ್ದಾರೆ. ನನಗನಿಸುತ್ತದೆ ಕೃಷ್ಣಮೂರ್ತಿಯವರ ದೀರ್ಘಾಯುಷ್ಯದ ಗುಟ್ಟು ಕೂಡ ಇದೇ ಇರಬಹುದು: ಜೀವನದ ಜಂಜಡಗಳ ಬಗ್ಗೆ ಒಂದು ತೆರನಾದ ನಿರ್ಲಿಪ್ತತೆ; ಯಾವುದನ್ನೂ ಅನಾವಶ್ಯಕವಾಗಿ ಸೀರಿಯಸ್ಸಾಗಿ ತೆಗೆದುಕೊಳ್ಳದ ಸ್ವಭಾವ; ಭಗವದ್ಗೀತೆಯಲ್ಲಿ ಕೃಷ್ಣಪರ ಮಾತ್ಮ ಅರ್ಜುನನಿಗೆ ಬೋಧಿಸಿದ 'ಸ್ಥಿತಪ್ರಜ್ಞತೆ'ಯ ಮೂರ್ತರೂಪ ಆಗಿರುವ ವ್ಯಕ್ತಿತ್ವ.
ಒಟ್ಟಿನಲ್ಲಿ "ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯ ಆಯುಷ್ಯೇವಿಂದ್ರಿಯೇ ಪ್ರತಿತಿಷ್ಠತಿ" (ನೂರು ವರ್ಷಗಳ ಕಾಲ ಬಾಳುವವನಾಗಲಿ; ನೂರು ವರ್ಷಗಳ ಆಯಸ್ಸನ್ನು ಹೊಂದಿದವನಾಗಲಿ; ನೂರು ವರ್ಷಗಳ ಕಾಲ ಆತನ ಕಣ್ಣು, ಕಿವಿ ಇತ್ಯಾದಿ ಇಂದ್ರಿಯಗಳು ಸಮರ್ಥವಾಗಿರಲಿ; ಆಯುಷ್ಯ ಮತ್ತು ಇಂದ್ರಿಯ ಶಕ್ತಿಯಲ್ಲಿ ಆತ ಗಟ್ಟಿಯಾಗಿ ನೆಲೆಸಿರಲಿ) ಎಂಬ ಉಪನಿಷತ್ ವಾಕ್ಯಕ್ಕೆ ಶತಪ್ರತಿಶತ ಮ್ಯಾಚ್ ಆಗುವ ವ್ಯಕ್ತಿ ಶತಾಯುಷಿ ಬುಕ್ಕಾಂಬುಧಿ ಕೃಷ್ಣ ಮೂರ್ತಿ. ದೇವರು ಅವರನ್ನೂ, ಅವರಿಂದ ಸ್ಪೂರ್ತಿ ಪಡೆದ ನಮ್ಮೆಲ್ಲರನ್ನೂ, ಚೆನ್ನಾಗಿಟ್ಟಿರಲಿ.

