Dailyhunt Logo
  • Light mode
    Follow system
    Dark mode
    • Play Story
    • App Story
Swati Harish Column: ಹೋಲಿಕೆಯ ಬಲೆ ಬಿಡಿಸಿ, ಆಂತರಿಕ ನೆಮ್ಮದಿ ಉಳಿಸಿಕೊಳ್ಳಿ

Swati Harish Column: ಹೋಲಿಕೆಯ ಬಲೆ ಬಿಡಿಸಿ, ಆಂತರಿಕ ನೆಮ್ಮದಿ ಉಳಿಸಿಕೊಳ್ಳಿ

Vishwavani 18 hrs ago

ಮನೋ ಸ್ವಾಸ್ಥ್ಯ

ಸ್ವಾತಿ ಹರೀಶ್

ಬೆಳಗಿನ ಜಾವ ಕಣ್ಣು ತೆರೆಯುತ್ತಿದ್ದಂತೆಯೇ ದಿಂಬಿನ ಪಕ್ಕದಲ್ಲಿರುವ ಸ್ಮಾರ್ಟ್ʼಫೋನ್ ಎತ್ತಿ ಸ್ಕ್ರಾಲ್ ಮಾಡುವುದು ಇಂದು ಪ್ರತಿಯೊಬ್ಬರ ಮೊದಲ ದಿನಚರಿಯಾಗಿದೆ. ಮೈಸೂರಿನ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಹೊಸ ಐಫೋನ್ ಖರೀದಿಸಿದ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ನೋಡಿ ಮುಖ ಸಣ್ಣಗೆ ಮಾಡಿಕೊಳ್ಳುತ್ತಾನೆ.

ಬೆಂಗಳೂರಿನ ಸಾಫ್ಟ್‌ʼವೇರ್ ಉದ್ಯೋಗಿಯೊಬ್ಬಳು ತನ್ನ ಮಾಜಿ ಸಹೋದ್ಯೋಗಿ ಯೂರೋಪ್ ಪ್ರವಾಸದ ಸುಂದರ ರೀಲ್ಸ್ ಹಂಚಿಕೊಂಡಿದ್ದನ್ನು ನೋಡಿ, ನನ್ನ ಜೀವನವೇಕೆ ಹೀಗೆ ಏಕತಾನತೆಯಿಂದ ಕೂಡಿದೆ? ಎಂದು ನಿಟ್ಟುಸಿರು ಬಿಡುತ್ತಾಳೆ. ‌

ಗ್ರಾಮೀಣ ಪ್ರದೇಶದ ಯುವಕನೊಬ್ಬ ತನಗಿಂತ ಕಿರಿಯ ವಯಸ್ಸಿನ ವ್ಯಕ್ತಿ ಹೊಸ ಕಾರಿನ ಮುಂದೆ ನಿಂತು ತೆಗೆಸಿಕೊಂಡ ಫೋಟೋ ನೋಡಿ ಅಭದ್ರತೆಯಿಂದ ಬಳಲುತ್ತಾನೆ. ರಾತ್ರಿ ಹನ್ನೊಂದರ ಸಮಯ. ಪರೀಕ್ಷೆಗಾಗಿ ದಿನವಿಡೀ ಓದಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮಲಗುವ ಮುನ್ನ ಒಂದೇ ನಿಮಿಷ ಎಂದುಕೊಂಡು ಮೊಬೈಲ್ ಕೈಗೆತ್ತಿಕೊಳ್ಳುತ್ತಾಳೆ. ಗೆಳತಿಯೊಬ್ಬಳು ವಿದೇಶದ ವಿಶ್ವವಿದ್ಯಾಲಯದ ಫೋಟೊ ಹಾಕಿದ್ದಾಳೆ.

ಸಹಪಾಠಿಗೆ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ದೂರದ ಬಂಧುವಿನ ಮಗನ ಅಂಕಪಟ್ಟಿ ಎಡೆ ಹರಿದಾಡುತ್ತಿದೆ. ಹತ್ತು ನಿಮಿಷ ಸ್ಕ್ರಾಲ್ ಮಾಡಿ -ನ್ ಪಕ್ಕಕ್ಕಿಡುವಾಗ ಆಕೆಯ ಮನಸ್ಸು ನಿಶ್ಯಬ್ದ ವಾಗಿ ತೀರ್ಪು ನೀಡಿಬಿಟ್ಟಿತ್ತು: ನಾನು ಹಿಂದೆ ಬೀಳುತ್ತಿದ್ದೇನೆ. ಇದು ಕೇವಲ ವಿದ್ಯಾರ್ಥಿಗಳ ಕತೆಯಲ್ಲ. ಸ್ನೇಹಿತರ ಹೊಸ ಮನೆ, ಕಾರಿನ ಚಿತ್ರ ನೋಡಿ ಸುಮ್ಮನಾಗುವ ಯುವಕ, ಬೇರೆ ಮಕ್ಕಳ ಸಾಧನೆಯ ಪೋಸ್ಟ್ ನೋಡಿ ತನ್ನ ಪಾಲನೆಯನ್ನೇ ಪ್ರಶ್ನಿಸಿಕೊಳ್ಳುವ ತಾಯಿ, ತನ್ನ ಫೋಟೊಗೆ ಬಂದ ಲೈಕ್‌ಗಳನ್ನು ಎಣಿಸುತ್ತಾ ಕೂರುವ ಹದಿಹರೆಯದ ಹುಡುಗ, ಇವರೆಲ್ಲರೂ ಇದೇ ಬಲೆಯಲ್ಲಿ ಸಿಲುಕಿಕೊಂಡವರೇ.

Leena Joshi Column: ಮಧ್ಯವಯಸ್ಸಿನಲ್ಲಿ ಗಾಂಧಿಯನ್ನು ಕಾಡಿದವಳು

ಸ್ಮಾರ್ಟ್ʼಫೋನ್ ಬೆಂಗಳೂರಿನ ಟೆಕ್ ಪಾಕ್ ನಿಂದ ಹಳ್ಳಿಯ ಅಂಗಡಿಕಟ್ಟೆಯವರೆಗೂ ತಲುಪಿರುವು ದರಿಂದ, ಈ ಹೋಲಿಕೆ ಯಾವುದೇ ವಯಸ್ಸು, ಊರಿಗೆ ಸೀಮಿತವಾಗಿಲ್ಲ. ಸ್ಮಾರ್ಟ್ʼಫೋನ್ ಮತ್ತು ಅಗ್ಗದ ಇಂಟರ್ನೆಟ್ ಕ್ರಾಂತಿಯು ದೇಶದ ಮೂಲೆ ಮೂಲೆಗೂ ತಲುಪಿರುವ ಈ ಯುಗದಲ್ಲಿ, ನಮ್ಮ ಸ್ವಯಂ-ಮೌಲ್ಯವನ್ನು ಕಸಿಯುತ್ತಿರುವುದು, ಸಮಾಜವನ್ನು ನಿಶ್ಯಬ್ದವಾಗಿ ಆವರಿಸಿರುವ 'ಸಾಮಾಜಿಕ ಹೋಲಿಕೆಯ ಬಲೆ' (Social Comparison Trap).

ಕೇಳಬೇಕಾದ ಪ್ರಶ್ನೆಯೆಂದರೆ: ಇತರರ ಜೀವನದ 'ಆಯ್ದ ಸುಂದರ ಕ್ಷಣಗಳನ್ನು' ಪ್ರತಿದಿನ ವೀಕ್ಷಿಸು ವುದರಿಂದ, ನಮ್ಮ ಸ್ವಯಂ-ಮೌಲ್ಯ ಮತ್ತು ಜೀವನದಲ್ಲಿ ತೃಪ್ತಿಯ ಬಗೆಗಿನ ಮೂಲಭೂತ ಕಲ್ಪನೆಗಳು ಹೇಗೆ ಬದಲಾಗುತ್ತಿವೆ? ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣುವುದು ಇತರರ ಸಂಪೂರ್ಣ ಜೀವನವನ್ನಲ್ಲ; ಬದಲಿಗೆ ಅವರ ಜೀವನದ ಸಂಪಾದಿತ, ಫಿಲ್ಟರ್ ಮಾಡಿದ ಅತ್ಯುತ್ತಮ ಕ್ಷಣಗಳನ್ನು ಮಾತ್ರ. ಆದರೆ ನಮ್ಮ ಮೆದುಳು ಅದನ್ನು ಅವರ ದೈನಂದಿನ ವಾಸ್ತವವೆಂದೇ ಗ್ರಹಿಸಿ ಮೋಸಹೋಗುತ್ತದೆ. ವಿಕಾಸವಾದ ಮತ್ತು ಮನೋವಿeನ: ಮೆದುಳಿನ ಈ 'ಕೋಡಿಂಗ್ ದೋಷ' ಏಕಿದೆ? ಮಾನವನ ಮೆದುಳು ಇಂಟರ್ನೆಟ್ ಯುಗಕ್ಕೆ ತಕ್ಕಂತೆ ರೂಪುಗೊಂಡಿಲ್ಲ.

1954ರ ಅಮೆರಿಕದ ಪ್ರಸಿದ್ಧ ಸಾಮಾಜಿಕ ಮನೋವಿಜ್ಞಾನಿ ಲ್ಯಾನ್ ಫೆಸ್ಟಿಂಗರ್ ಸಾಮಾಜಿಕ ಹೋಲಿಕೆ ಸಿದ್ಧಾಂತ' ಮಂಡಿಸಿದ್ದರು. ಅದರ ಪ್ರಕಾರ, ಮನುಷ್ಯನು ತನ್ನ ಯೋಗ್ಯತೆ, ಸಾಮರ್ಥ್ಯ ಮತ್ತು ಸ್ಥಿತಿಗತಿಯನ್ನು ಅಳೆಯಲು ನೈಸರ್ಗಿಕವಾಗಿ ತನ್ನ ಸುತ್ತಮುತ್ತಲಿನ ಜನರೊಂದಿಗೆ ಹೋಲಿಸಿಕೊಳ್ಳುತ್ತಾನೆ. ಇಲ್ಲಿ ಎರಡು ರೀತಿಯ ಹೋಲಿಕೆಗಳಿವೆ; ಮೇಲ್ಮುಖ ಹೋಲಿಕೆ- ನಮಗಿಂತ ಹೆಚ್ಚು ಯಶಸ್ವಿ ಅಥವಾ ಸುಖಿ ಎಂದು ತೋರುವವರೊಂದಿಗೆ ಹೋಲಿಸಿಕೊಳ್ಳುವುದು.

ಇದು ಸ್ಪೂರ್ತಿ ನೀಡಬಹುದಾದರೂ, ಹೆಚ್ಚಾಗಿ ಕೀಳರಿಮೆ ಮತ್ತು ಆತಂಕವನ್ನು ಸೃಷ್ಟಿಸುತ್ತದೆ. ಕೆಳಮುಖ ಹೋಲಿಕೆ- ನಮಗಿಂತ ಕಡಿಮೆ ಸೌಲಭ್ಯವುಳ್ಳವರನ್ನು ನೋಡಿ ಸಮಾಧಾನ ಪಟ್ಟುಕೊಳ್ಳುವುದು. ಪುರಾತನ ಕಾಲದಲ್ಲಿ ಹೋಲಿಕೆ ನಮ್ಮ ಹಳ್ಳಿ, ಕೇರಿ ಅಥವಾ ಸಮುದಾಯಕ್ಕೆ ಸೀಮಿತವಾಗಿತ್ತು. ಆದರೆ ಸೋಷಿಯಲ್ ಮೀಡಿಯಾ ಅಲ್ಗಾರಿದಂಗಳು ಈ ನೈಸರ್ಗಿಕ ಪ್ರಕ್ರಿಯೆ ಯನ್ನು ಬುಡಮೇಲು ಮಾಡಿವೆ. ನಮ್ಮ ಮಾನವ ವಿಕಾಸದ ಮೆದುಳಿಗೆ ವಾಸ್ತವ ಮತ್ತು ಡಿಜಿಟಲ್ ಫಿಲ್ಟರ್‌ಗಳ ನಡುವಿನ ವ್ಯತ್ಯಾಸವನ್ನು ತಕ್ಷಣಕ್ಕೆ ಗುರುತಿಸಲು ಸಾಧ್ಯವಾಗುವುದಿಲ್ಲ.

ಇದನ್ನು ಮನೋವಿಜ್ಞಾನದಲ್ಲಿ 'ಸಾಪೇಕ್ಷ ಅಭಾವ' (Relative Deprivation) ಎನ್ನಲಾಗುತ್ತದೆ. ಅಂದರೆ, ನಮಗೆ ಎಲ್ಲವೂ ಇದ್ದರೂ, ಬೇರೆಯವರಲ್ಲಿ ನಮಗಿಂತ ಹೆಚ್ಚಿದೆ ಎಂದು ಕಂಡಾಗ ಉಂಟಾಗುವ ವಂಚಿತ ಭಾವನೆ. ಒಳ್ಳೆಯ ಕೆಲಸ, ಸ್ವಂತ ಸೂರು ಇದ್ದರೂ, ಫೀಡ್‌ನಲ್ಲಿ ಇನ್ನೂ ದೊಡ್ಡದನ್ನು ನೋಡಿದಾಗ ತೃಪ್ತಿ ಕರಗುತ್ತದೆ. ಪುಟ್ಟ ಪುಟ್ಟ 'ಕೊರತೆಯ ಡೋಸ್'ಗಳು: ಒಂದು ಪೋ ನೋಡಿದರೆ ಏನೂ ಆಗುವುದಿಲ್ಲ. ಆದರೆ ದಿನಕ್ಕೆ ಹತ್ತಾರು ಬಾರಿ, ತಿಂಗಳುಗಟ್ಟಲೆ, ನಾನು ಸಾಲದು ಎನಿಸುವ ಇಂತಹ ಪುಟ್ಟ ಅನುಭವಗಳು ಸೇರಿಕೊಂಡಾಗ ಆತ್ಮಗೌರವದ ಮೇಲೆ ನಿಧಾನ ವಾಗಿ ಪರಿಣಾಮ ಬೀರಬಹುದು.

ಒಂದು ಹನಿ ನೀರು ಕಲ್ಲನ್ನು ಕೊರೆಯುವುದಿಲ್ಲ, ಆದರೆ ವರ್ಷಗಟ್ಟಲೆ ಬೀಳುತ್ತಿದ್ದರೆ ಕಲ್ಲಿನ ಮೇಲೂ ಗುರುತು ಮೂಡುತ್ತದೆ. ಸಂಶೋಧನೆಗಳು ಏನು ಹೇಳುತ್ತವೆ? ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಮತ್ತು ವಿವಿಧ ಜಾಗತಿಕ ವಿಶ್ವವಿದ್ಯಾಲಯಗಳು ನಡೆಸಿದ ಸಂಶೋಧನೆಗಳ ಪ್ರಕಾರ, ಇನ್ಸ್ಟಾಗ್ರಾಮ್ ಮತ್ತು ಶಾರ್ಟ್ ವೀಡಿಯೋ ವೇದಿಕೆಗಳು ಮೆದುಳಿನಲ್ಲಿ ಡೋಪಮೈನ್ ಫೀಡ್‌ಬ್ಯಾಕ್ ಲೂಪ್' ಅನ್ನು ಸೃಷ್ಟಿಸುತ್ತವೆ.

ಪ್ರತಿ ಲೈಕ್ ಅಥವಾ ಕಾಮೆಂಟ ಬಂದಾಗ ಸಿಗುವ ಸಣ್ಣ ಪ್ರಮಾಣದ ಸಂತೋಷ, ಕ್ರಮೇಣ ಇತರರ ಪ್ರೊ-ಲ್ ನೋಡುವಾಗ 'ಅಸಮರ್ಥತೆಯ ಮೈಕ್ರೋ-ಡೋಸ್' (Micro doses of inadequacy) ಆಗಿ ಬದಲಾಗುತ್ತದೆ. ಇತ್ತೀಚಿನ ಭಾರತೀಯ ಡಿಜಿಟಲ್ ಬಳಕೆ ಕುರಿತ ವರದಿಗಳ ಪ್ರಕಾರ, ಕರ್ನಾಟಕದ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಯುವಜನರು ದಿನಕ್ಕೆ ಸರಾಸರಿ 3ರಿಂದ 5 ಗಂಟೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುತ್ತಿದ್ದಾರೆ.

ದಿನವಿಡೀ ಮನಸ್ಸಿಗೆ ಇಳಿಯುವ ಈ ಸಣ್ಣ ಸಣ್ಣ ಅಭದ್ರತೆಯ ಕ್ಷಣಗಳು, ಕ್ರಮೇಣ ಆತ್ಮವಿಶ್ವಾಸ ವನ್ನು ಕಸಿದುಕೊಂಡು ತೀವ್ರ ಆತಂಕ ಮತ್ತು ಖಿನ್ನತೆಗೆ ದಾರಿ ಮಾಡಿಕೊಡುತ್ತಿವೆ. 2014ರಲ್ಲಿ ಅಮೆರಿಕದ ಟೊಲೆಡೊ ವಿಶ್ವವಿದ್ಯಾಲಯದ ಎರಿನ್ ವೋಗೆಲ್ ಮತ್ತು ಸಹೋದ್ಯೋಗಿಗಳು ಎರಡು ಅಧ್ಯಯನ ನಡೆಸಿದರು.

ಫೇಸ್ಬುಕ್ ಹೆಚ್ಚು ಬಳಸುವವರಲ್ಲಿ ಆತ್ಮಗೌರವ ಕಡಿಮೆ ಇತ್ತು. ಇದಕ್ಕೆ, ಅವರು ಹೆಚ್ಚು ಮೇಲ್ಮುಖ ಹೋಲಿಕೆಗಳಿಗೆ ಒಡ್ಡಿಕೊಳ್ಳುತ್ತಿದ್ದುದೇ ಕಾರಣ ಎಂದು ಕಂಡುಬಂತು. ಪ್ರಯೋಗದಲ್ಲಿ, ಚುರುಕಾದ ಸಾಮಾಜಿಕ ಬದುಕು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ತೋರಿಸುವ ಪ್ರೊಫೈಲ್ ನೋಡಿದವರ ತಾತ್ಕಾಲಿಕ ಆತ್ಮಗೌರವ, ಕಡಿಮೆ ಚಟುವಟಿಕೆಯ ಪ್ರೊಫೈಲ್ ನೋಡಿದವರಿಗಿಂತ ಕಡಿಮೆಯಿತ್ತು. 2018ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಮೆಲಿಸ್ಸಾ ಹಂಟ್ ಮತ್ತು ತಂಡ 143 ಪದವಿ ಪೂರ್ವ ವಿದ್ಯಾರ್ಥಿಗಳನ್ನು ಎರಡು ಗುಂಪು ಮಾಡಿತು.

ಒಂದು ಗುಂಪು ಫೇಸ್ಬುಕ್, ಇನ್ಸ್ಟಾಗ್ರಾಂ, ಸ್ನ್ಯಾಪ್‌ಚಾಟ್ ಬಳಕೆಯನ್ನು ಪ್ರತಿ ಆಪ್‌ಗೆ ದಿನಕ್ಕೆ ಹತ್ತು ನಿಮಿಷಕ್ಕೆ ಮಿತಿಗೊಳಿಸಿತು. ಇನ್ನೊಂದು ಎಂದಿನಂತೆ ಬಳಸಿತು. ಮೂರು ವಾರಗಳ ನಂತರ, ಮಿತಿ ಹಾಕಿಕೊಂಡವರಲ್ಲಿ ಒಂಟಿತನ ಮತ್ತು ಖಿನ್ನತೆ ಗಮನಾರ್ಹವಾಗಿ ಕಡಿಮೆಯಾಗಿತ್ತು. ಆರಂಭದ ಹೆಚ್ಚು ಖಿನ್ನತೆ ಇದ್ದವರಲ್ಲಿ ಈ ಬದಲಾವಣೆ ಇನ್ನೂ ಸ್ಪಷ್ಟವಾಗಿತ್ತು. ಕುತೂಹಲದ ಸಂಗತಿ ಎಂದರೆ, ಎರಡೂ ಗುಂಪು ಗಳಲ್ಲಿ ಆತಂಕ ಮತ್ತು 'ಏನೋ ತಪ್ಪಿಹೋಗುತ್ತಿದೆ' ಎಂಬ ಭಯ ಕಡಿಮೆಯಾಗಿತ್ತು. ಬಳಕೆಯನ್ನು ಗಮನಿಸಿಕೊಳ್ಳುವುದೇ ಒಂದು ಪ್ರಯೋಜನ ಇರಬಹುದು ಎಂದು ಸಂಶೋಧಕರು ಅಭಿಪ್ರಾ ಯಪಟ್ಟರು. ಕಾರಣಗಳಲ್ಲಿ ಹೋಲಿಕೆಯ ಅವಕಾಶ ಕಡಿಮೆ ಯಾಗುವುದೂ ಇರಬಹುದು ಎಂಬುದು ಹಂಟ್ ಅವರ ಊಹೆ. ಆದರೆ ಚಿತ್ರ ಅಷ್ಟು ಸರಳವಲ್ಲ.

2019ರಲ್ಲಿ ಆಕ್ಸ್ʼಫರ್ಡ್ ವಿಶ್ವವಿದ್ಯಾಲಯದ ಏಮಿ ಓರ್ಬೆನ್ ಮತ್ತು ಆಂಡ್ರ್ಯೂ ಪ್ರಜಿಬಿಲ್ಸ್ಕಿ ಬ್ರಿಟನ್ ಮತ್ತು ಅಮೆರಿಕದ ಮೂರು ದೊಡ್ಡ ದತ್ತಾಂಶ ಸಮೂಹಗಳ 3.5 ಲಕ್ಷಕ್ಕೂ ಹೆಚ್ಚು ಜನರ ಮಾಹಿತಿ ಯನ್ನು ವಿಶ್ಲೇಷಿಸಿದರು.

ಡಿಜಿಟಲ್ ತಂತ್ರಜ್ಞಾನದ ಬಳಕೆ ಮತ್ತು ಹದಿಹರೆಯದವರ ಯೋಗಕ್ಷೇಮದ ನಡುವೆ ಋಣಾತ್ಮಕ ಸಂಬಂಧ ಕಂಡುಬಂತು, ಆದರೆ ಅದು ತೀರಾ ಚಿಕ್ಕದು. ಯೋಗಕ್ಷೇಮದ ವ್ಯತ್ಯಾಸದಲ್ಲಿ ಗರಿಷ್ಠ 0.4% ಮಾತ್ರ. ನಿದ್ರೆ, ಬೆಳಗಿನ ಉಪಾಹಾರದಂತಹ ದೈನಂದಿನ ಅಭ್ಯಾಸಗಳು ಇದಕ್ಕಿಂತ ಹೆಚ್ಚಿನ ಸಂಬಂಧ ತೋರಿಸಿದವು. ಅಂದರೆ ಮೊಬೈಲ್ ಬಳಸಿದರೆ ಎಲ್ಲರೂ ಖಿನ್ನರಾಗುತ್ತಾರೆ ಎಂಬ ಸರಳ ತೀರ್ಮಾನ ಸರಿಯಲ್ಲ.

ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ಹಂಟ್ ಅಧ್ಯಯನದಲ್ಲಿ ಆರಂಭದಿಂದಲೇ ಖಿನ್ನತೆ ಹೆಚ್ಚಿದ್ದವರಲ್ಲಿ ಬದಲಾವಣೆ ಹೆಚ್ಚು ಕಂಡುಬಂದದ್ದು ಇದನ್ನೇ ಸೂಚಿಸುತ್ತದೆ. ಈಗಾಗಲೇ ಒತ್ತಡ, ಒಂಟಿತನ ಅಥವಾ ಕೀಳರಿಮೆಯೊಂದಿಗೆ ಹೋರಾಡುತ್ತಿರುವವರು ಈ ಬಲೆಗೆ ಹೆಚ್ಚು ಸುಲಭವಾಗಿ ಬೀಳಬಹುದು.

ನಮ್ಮದೇಶದಚಿತ್ರಣ: ಈ ಕಳವಳ ಈಗ ಸರ್ಕಾರದ ನೀತಿ ನಿರೂಪಣೆ ಮಟ್ಟಕ್ಕೂ ತಲುಪಿದೆ. 2025-26ರ ಆರ್ಥಿಕ ಸಮೀಕ್ಷೆಯು 15-24 ವಯಸ್ಸಿನವರಲ್ಲಿ ಸೋಷಿಯಲ್ ಮೀಡಿಯಾ ಚಟವು ಆತಂಕ, ಖಿನ್ನತೆ, ಕಡಿಮೆ ಆತ್ಮಗೌರವ ಮತ್ತು ಸೈಬರ್ ಬೆದರಿಕೆಯ ಒತ್ತಡದೊಂದಿಗೆ ಬಲವಾಗಿ ಸಂಬಂಧ ಹೊಂದಿದೆ ಎಂದು ಹೇಳಿದೆ. ಯುವಜನರನ್ನು ಕಾಡುತ್ತಿರುವ ಸಮಸ್ಯೆಗಳ ಪಟ್ಟಿಯಲ್ಲಿ 'ಸಾಮಾಜಿಕ ಹೋಲಿಕೆ'ಯನ್ನೂ ಹೆಸರಿಸಿದೆ.

ಶಾಲೆಗಳಲ್ಲಿ 'ಡಿಜಿಟಲ್ ವೆಲ್‌ನೆಸ್ ಪಠ್ಯಕ್ರಮ' ಅಳವಡಿಸಬೇಕೆಂದು ಸಲಹೆ ನೀಡಿದೆ. ಇಂತಹ ವಿಷಯಗಳ ಕುರಿತು ರಾಷ್ಟ್ರಮಟ್ಟದ ಸಮಗ್ರ ಅಂಕಿಅಂಶಗಳ ಕೊರತೆ ಇದೆ ಎಂಬುದನ್ನೂ ಸಮೀಕ್ಷೆ ಗುರುತಿಸಿದೆ. ಅಂದರೆ ಸಮಸ್ಯೆಯ ನಿಜವಾದ ಗಾತ್ರ ತಿಳಿಯಲು ನಮಗೆ ಇನ್ನೂ ಹೆಚ್ಚಿನ ಅಧ್ಯಯನ ಗಳು ಬೇಕು. ಡಿಜಿಟಲ್ ನೈರ್ಮಲ್ಯ: ಸ್ಮಾರ್ಟ್-ನ್‌ಗಳು ಕೆಟ್ಟವು, ಅವುಗಳನ್ನು ಎಸೆದುಬಿಡಿ ಎಂದು ಹೇಳುವುದು ಪ್ರಾಯೋಗಿಕವೂ ಅಲ್ಲ, ಅರ್ಥಪೂರ್ಣವೂ ಅಲ್ಲ. ತಂತ್ರಜ್ಞಾನವನ್ನು ನಿಂದಿಸುವ ಬದಲು, ನಮ್ಮ ಗ್ರಹಿಕೆಯನ್ನು ಮತ್ತು ಬಳಕೆಯ ಶೈಲಿಯನ್ನು ಬದಲಾಯಿಸಿಕೊಳ್ಳುವುದೇ ಸರಿಯಾದ ಮಾರ್ಗ. ಇದನ್ನು ಡಿಜಿಟಲ್ ನೈರ್ಮಲ್ಯ (Digital Hygiene) ಎನ್ನಲಾಗುತ್ತದೆ.

  1. ಫೀಡ್‌ಗಳಜಾಗರೂಕಆಯ್ಕೆ: ನಿಮ್ಮ ಮನಸ್ಸಿಗೆ ನಕಾರಾತ್ಮಕತೆ, ಅಭದ್ರತೆ ಅಥವಾ ಅಸೂಯೆಯನ್ನು ತರುವ ಖಾತೆಗಳನ್ನು ಅನ್ʼಫಾಲೋ ಅಥವಾ ಮ್ಯೂಟ್ ಮಾಡಿ. ನಿಮಗೆ ಕಲಿಕೆ, ಸ್ಪೂರ್ತಿ ಮತ್ತು ನೈಜ ನಗು ತರುವ ವಿಷಯಗಳನ್ನು ಮಾತ್ರ ವೀಕ್ಷಿಸಿ.
  2. ಸ್ಕ್ರೀನ್ರಹಿತಸಮತೋಲನಮತ್ತುಮೈಂಡ್ʼಫುಲ್‌ನೆಸ್: ದಿನದಲ್ಲಿ ಕನಿಷ್ಠ 1-2 ಗಂಟೆಗಳನ್ನು (ವಿಶೇಷವಾಗಿ ಊಟದ ಸಮಯ ಮತ್ತು ಮಲಗುವ ಮುನ್ನ) ನೋ-ಫೋನ್ ಝೋನ್ ಆಗಿ ಘೋಷಿಸಿ. ಸೋಷಿಯಲ್ ಮೀಡಿಯಾವನ್ನು ತೆರೆಯುವ ಮುನ್ನ, ನಾನು ಇದನ್ನು ಏಕೆ ನೋಡುತ್ತಿದ್ದೇನೆ? ಆಸಕ್ತಿಯಿಂದಲೋ ಅಥವಾ ಬೇಸರದಿಂದಲೋ? ಎಂದು ನೀವೇ ಪ್ರಶ್ನಿಸಿಕೊಳ್ಳಿ.

೩. ಪೋಷಕರಿಗೆಕಿವಿಮಾತು: ಮಕ್ಕಳಿಗೆ ಫೋನ್ ಬಳಸಬೇಡಿ ಎಂದು ಕೇವಲ ಆಜ್ಞಾಪಿಸುವ ಬದಲು, ಮಾಧ್ಯಮ ಸಾಕ್ಷರತೆಯನ್ನು ಕಲಿಸಿ. ಫೋಟೋದ ಹಿನ್ನೆಲೆಯಲ್ಲಿರುವ ಫಿಲ್ಟರ್‌ಗಳು, ಎಡಿಟಿಂಗ್ ಅಪ್ಲಿಕೇಶನ್‌ಗಳು ಮತ್ತು ಪ್ರಾಯೋಜಿತ ಜಾಹೀರಾತುಗಳ ಹಿಂದಿನ ಸತ್ಯವನ್ನು ಅವರಿಗೆ ಅರ್ಥಮಾಡಿಸಿ. ಮಕ್ಕಳನ್ನು ಪಕ್ಕದ ಮನೆಯ ಹುಡುಗನೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ನೀವು ಫೋನ್ ಬಳಸುವ ರೀತಿಯನ್ನು ಮಕ್ಕಳು ಗಮನಿಸುತ್ತಿದ್ದಾರೆ. ಹೋಲಿಕೆಯ ಬಗ್ಗೆ ಮನೆಯಲ್ಲಿ ಮುಕ್ತವಾಗಿ ಮಾತನಾಡುವುದು ಅತ್ಯುತ್ತಮ ಡಿಜಿಟಲ್ ಶಿಕ್ಷಣ. ನಿಜವಾದ ಆ-ಲೈನ್ ಆಟಗಳು ಮತ್ತು ಹವ್ಯಾಸಗಳಿಗೆ ಪ್ರೋತ್ಸಾಹ ನೀಡಿ. ನಿಮ್ಮನ್ನು ಬೇರೆಯವರೊಂದಿಗಲ್ಲ, ನಿನ್ನೆಯ ನಿಮ್ಮೊಂದಿಗೆ ಹೋಲಿಸಿ. ದಿನದ ಕೊನೆಯಲ್ಲಿ ಮೂರು ಸಣ್ಣ ಸಾಧನೆ ಅಥವಾ ಕೃತಜ್ಞತೆಯ ಸಂಗತಿಗಳನ್ನು ಬರೆದಿಡಿ. ನಿಮ್ಮ ಅಳತೆಗೋಲು ನಿಮ್ಮ ಪ್ರಗತಿಯೇ ಆಗಲಿ.

ಆಂತರಿಕ ನೆಮ್ಮದಿಯೇ ಅಂತಿಮ ಗುರಿ: ಜೀವನದ ನಿಜವಾದ ಸಂತೋಷ ಮತ್ತು ತೃಪ್ತಿ ಇರುವುದು ಡಿಜಿಟಲ್ ಪರದೆಯ ಮೇಲಿನ ಲೈಕ್ಸ್‌ʼಗಳಲ್ಲಲ್ಲ, ಬದಲಿಗೆ ನಮ್ಮ ಮನಸ್ಸಿನ ನೆಮ್ಮದಿಯಲ್ಲಿ. ಬೇರೆಯವರ ಜೀವನದ ಬಹಿರಂಗ ಪ್ರದರ್ಶನವನ್ನು ನಮ್ಮ ಬದುಕಿನೊಂದಿಗೆ ಹೋಲಿಸಿಕೊಳ್ಳು ವುದು ಬೆಂಕಿಯ ಜೊತೆ ಸರಸವಾಡಿದಂತೆ. ಯಾರೋ ಎಲ್ಲಾ ಹಂಚಿಕೊಂಡ ಚಿತ್ರ ಅವರ ಸಂಪೂರ್ಣ ಜೀವನದ ಕಥೆಯಲ್ಲ ಎಂಬುದನ್ನು ಅರಿತುಕೊಳ್ಳುವುದೇ ಮಾಧ್ಯಮ ಸಾಕ್ಷರತೆಯ ಮೊದಲ ಹೆಜ್ಜೆ. ಡಿಜಿಟಲ್ ಸಾಧನಗಳನ್ನು ನಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳೋಣ, ಆದರೆ ನಮ್ಮ ಮಾನಸಿಕ ನೆಮ್ಮದಿಯನ್ನು ತೀರ್ಮಾನಿಸುವ ಹಕ್ಕನ್ನು ಆ ಸಾಧನಗಳಿಗೆ ಕೊಡುವುದು ಬೇಡ.

Dailyhunt
Disclaimer: This content has not been generated, created or edited by Dailyhunt. Publisher: Vishwavani