Dailyhunt
ತಮಿಳುನಾಡು ಚುನಾವಣೆ; ಡಿಎಂಕೆ, ಟಿವಿಕೆ ನೇರ ಹಣಾಹಣಿ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ವಿಜಯ್‌

ತಮಿಳುನಾಡು ಚುನಾವಣೆ; ಡಿಎಂಕೆ, ಟಿವಿಕೆ ನೇರ ಹಣಾಹಣಿ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ವಿಜಯ್‌

Vishwavani 1 month ago

ಚೆನ್ನೈ: ತಮಿಳುನಾಡಿನಲ್ಲಿ ವಿಧಾನ ಸಭಾ ಚುನಾವಣೆಯ ಕಾವು ಜೋರಾಗಿದ್ದು, ನಟ-ರಾಜಕಾರಣಿ ವಿಜಯ್ (TVK Vijay) ಅವರ ಟಿವಿಕೆ ಪಕ್ಷದ ಟಿಕೆಟ್‌ ಇದೀಗ ಘೋಷಣೆಯಾಗಿದೆ. ವಿಜಯ್‌ ಪೆರಂಬೂರು ಮತ್ತು (Tamilnadu Assembly Election) ತಿರುಚ್ಚಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

ಈ ಚುನಾವಣೆಯಲ್ಲಿ ಪಾದಾರ್ಪಣೆ ಮಾಡುತ್ತಿರುವ ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ವಿಜಯ್, ಟಿವಿಕೆಗೆ ಒಂದು ಅವಕಾಶ ನೀಡುವಂತೆ ಜನರನ್ನು ಒತ್ತಾಯಿಸಿದರು.

ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಧಿಕಾರದಲ್ಲಿರುವ ಡಿಎಂಕೆಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಎಐಎಡಿಎಂಕೆ ಮತ್ತು ಬಿಜೆಪಿಯ ಎನ್‌ಡಿಎ ಬಣವು ಮತ್ತೆ ಅಧಿಕಾರಕ್ಕೆ ಬರಲು ಎದುರು ನೋಡುತ್ತಿದೆ ಮತ್ತು ವಿಜಯ್ ಅವರ ಟಿವಿಕೆ ದೊಡ್ಡ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗಿದೆ. ಎಸ್ ರಾಮದಾಸ್ ನೇತೃತ್ವದ ಪಿಎಂಕೆ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಸಹಾಯಕ ಶಶಿಕಲಾ ಸ್ಥಾಪಿಸಿದ ಪಕ್ಷದ ಮೈತ್ರಿ ಸಹ ಕಣದಲ್ಲಿದೆ. ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

ವಿಜಯ್ ಸ್ಪರ್ಧಿಸುತ್ತಿರುವ ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಎರಡೂ ಸ್ಥಾನಗಳು ಪ್ರಸ್ತುತ ಡಿಎಂಕೆ ಪ್ರತಿನಿಧಿಸುತ್ತಿವೆ. ಆರ್‌ಡಿ ಶೇಖರ್ ಪೆರಾಂಪುರದ ಶಾಸಕರಾಗಿದ್ದರೆ, ಇನಿಗೋ ಎಸ್ ಇರುದಯರಾಜ್ ತಿರುಚ್ಚಿ ಪೂರ್ವದ ಶಾಸಕರಾಗಿದ್ದಾರೆ. ಟಿ ನಗರದಿಂದ ಎನ್ ಆನಂದ್, ಮೈಲಾಪುರದಿಂದ ವೆಂಕಟ್ ರಾಮನ್, ವಿಲ್ಲಿವಕ್ಕಂನಿಂದ ಆಧವ್ ಅರ್ಜುನ, ಗೋಬಿಚೆಟ್ಟಿಪಾಳ್ಯಂನಿಂದ ಕೆಎ ಸೆಂಗ್ಕೊಟ್ಟೈಯನ್, ತಿರುಚೆಂಗೋಡ್ನಿಂದ ಕೆ ಜಿ ಅರುಣ್ರಾಜ್ ಮತ್ತು ತಿರುಪ್ಪರಂಕುಂದ್ರಂನಿಂದ ಸಿಟಿಆರ್ ನಿರ್ಮಲ್ ಕುಮಾರ್ ಈ ಪಟ್ಟಿಯಲ್ಲಿದ್ದಾರೆ. ಥೌಸಂಡ್ ಲೈಟ್ಸ್‌ನಿಂದ ಜೆಸಿಡಿ ಪ್ರಭಾಕರ್, ಕೊಳತ್ತೂರಿನಿಂದ ವಿಎಸ್ ಬಾಬು ಮತ್ತು ಆರ್‌ಕೆ ನಗರದ ಡಾ. ಮಾರಿಯಾ ವಿಲ್ಸನ್ ಅವರುಗಳು ಹೆಸರಿಸಲಾದ ಇತರ ಅಭ್ಯರ್ಥಿಗಳಾಗಿದ್ದಾರೆ.

2026ರ ತಮಿಳುನಾಡು ಚುನಾವಣೆಯಿಂದ ಹೊರಗುಳಿದ ಕಮಲ್ ಹಾಸನ್; ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ

ಭರವಸೆಗಳ ಮಹಾಪೂರ

ಉದ್ಯೋಗ ಪಡೆಯಲು ಸಾಧ್ಯವಾಗದ 29 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಿಂಗಳಿಗೆ 4,000 ರೂ. ಮತ್ತು ಡಿಪ್ಲೊಮಾ ಹೊಂದಿರುವವರಿಗೆ 2,500 ರೂ. ನೀಡುವುದಾಗಿ ಟಿವಿಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. 12 ನೇ ತರಗತಿಯಿಂದ ಪಿಎಚ್‌ಡಿ ಹಂತದವರೆಗೆ 20 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಲ ನೀಡುವುದಾಗಿ ಘೋಷಿಸಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಗಳ ಕುರಿತು ಟಿವಿಕೆ ಭರವಸೆ ನೀಡಿದೆ ಅಷ್ಟೇ ಅಲ್ಲದೇ, ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಗಾಗಿ ಕಾನೂನನ್ನು ಜಾರಿಗೆ ತರುವುದಾಗಿ ವಿಜಯ್‌ ಭರವಸೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani