Dailyhunt
Viral Video: ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್

Viral Video: ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್

Vishwavani 2 months ago

ಮುಂಬೈ, ಫೆ. 28: ಮಹಾರಾಷ್ಟ್ರದ ಮುಂಬೈ (Mumbai) ನಗರದಲ್ಲಿ ವಿದೇಶಿ ಮಹಿಳಾ ಪ್ರವಾಸಿಗೆಯೊಬ್ಬರಿಗೆ (Foriegn Women) ಸೆಲ್ಫಿ ತೆಗೆಯುವ ನೆಪದಲ್ಲಿ ಯುವಕರಿಬ್ಬರು ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಮಹಾಲಕ್ಷ್ಮೀ ಪ್ರದೇಶದ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆಗಿದೆ.

ಮಹಿಳೆ ನಿರಾಕರಿಸಿದರೂ ಇಬ್ಬರು ಯುವಕರು ಆಕೆಯನ್ನು ಹಿಂಬಾಲಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಸೆಲ್ಫಿಗಾಗಿ ಒತ್ತಾಯಿಸುತ್ತಿರುವುದು ಕಂಡು ಬಂದಿದೆ. ತಾನು ಮುಂಬೈಯಲ್ಲಿ ಕಿರುಕುಳಕ್ಕೆ ಒಳಗಾದೆ ಎಂದು ಸ್ವತಃ ಆ ವಿದೇಶಿ ಮಹಿಳೆಯೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿಕೊಂಡಿದ್ದಾರೆ. ಇನೆಸ್ ಫರಿಯಾ ಎಂಬ ವಿದೇಶಿ ಮಹಿಳೆ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ.

ವಿಡಿಯೊದಲ್ಲಿ ಏನಿದೆ?

ʼʼನಾನು ಭಾರತಕ್ಕೆ ಬಂದು ಎರಡು ತಿಂಗಳು ಕಳೆದಿದೆ, ಇಲ್ಲಿಯವರೆಗೂ ತುಂಬಾ ಆರಾಮದಾಯಕವಾಗಿ, ಖುಷಿಯಾಗಿ ಹಾಗೂ ಸುರಕ್ಷಿತವಾಗಿ ದಿನಗಳನ್ನು ಕಳೆದಿದ್ದೇನೆ. ಆದರೆ ಇಂದು ಮಾತ್ರ ನನಗೆ ಕೊಂಚ ವಿಭಿನ್ನ ಅನುಭವವನ್ನು ನೀಡಿದ್ದು, ಅಭದ್ರತೆ ಕಾಡಿದೆ. ನಾನು ಹಲವು ಬಾರಿ ಬೇಡ ಎಂದು ಹೇಳಿದರೂ, ನಿರಾಕಾರಿಸಿದರೂ, ಇಬ್ಬರು ಯುವಕರು ಸೆಲ್ಫಿಗಾಗಿ ಪೀಡಿಸಿದ್ದು, ನನ್ನ ಹಿಂದೆ ಬಿದಿದ್ದರು. ಅವರ ವರ್ತನೆಯಿಂದ ನನಗೆ ಇರುಸುಮುರುಸಾಗಿದ್ದು, ಅಹಿತಕರ ಅನುಭವವನ್ನು ಎದುರಾಯಿತು. ಆ ಯುವಕರು ಸುಮಾರು 15 ನಿಮಿಷಗಳಿಗೂ ಹೆಚ್ಚು ಕಾಲ ನಮ್ಮನ್ನು ಹಿಂಬಾಲಿಸಿದ್ದು, ಅದು ನಿಜವಾಗಿಯೂ ಅತಿರೇಕವೆನಿಸಲು ಪ್ರಾರಂಭಿಸಿತು. ಅವರ ನಡತೆಯಿಂದ ತಾಳ್ಮೆ ಕಳೆದುಕೊಂಡು, ನನ್ನ ಸುರಕ್ಷತೆಗಾಗಿ ನಾನು ಅವರನ್ನು ದೈಹಿಕವಾಗಿ ದೂರ ತಳ್ಳಬೇಕಾಯಿತು" ಎಂದು ಅವರು ಬರೆದಿದ್ದಾರೆ.

ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆ ಕಿಡಿಗೇಡಿಗಳು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. "ಪ್ರವಾಸಿಗರ ಸುರಕ್ಷತೆ ಅತ್ಯಂತ ಮುಖ್ಯ" ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸ್ಥಳೀಯ ಪೊಲೀಸ್ ಇಲಾಖೆ ಪ್ರಕರಣವನ್ನು ಪರಿಶೀಲಿಸುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ದೆಹಲಿಯ ಇಂಡಿಯಾ ಗೇಟ್ ಬಳಿ ರಷ್ಯನ್ ಮೂಲದ ಪ್ರವಾಸಿಗರೊಬ್ಬರಿಗೆ ಇದೇ ರೀತಿಯ ಕಿರುಕುಳ ನೀಡಲಾಗಿತ್ತು. ಸ್ಥಳೀಯ ವ್ಯಕ್ತಿ ವಿದೇಶಿ ಡಾನ್ಸರ್ ಮಹಿಳೆಗೆ ಇರಿಸು ಮುರಿಸಾಗುವಂತೆ ನಡೆದುಕೊಂಡಿದ್ದ. ಮಹಿಳೆ ಫೋಟೊ ತೆಗೆಯಲು ಪ್ರಯತ್ನಿಸುತ್ತಿರುವಾಗ, ಆ ವ್ಯಕ್ತಿ ತನ್ನೊಂದಿಗೆ ನೃತ್ಯ ಮಾಡುವಂತೆ ನಿರಂತರವಾಗಿ ಒತ್ತಾಯಿಸುತ್ತಿರುವುದನ್ನು ವಿಡಿಯೊದಲ್ಲಿ ಸೆರೆ ಆಗಿತ್ತು. ಆಕೆಯ ವಿರೋಧದ ಹೊರತಾಗಿಯೂ ಆ ವ್ಯಕ್ತಿ ವಿಡಿಯೊ ಮಾಡುವುದನ್ನು ಮುಂದುವರಿಸಿದ್ದು, ಕ್ಷಮೆಯಾಚಿಸುವ ಬದಲು ಆ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ್ದ.

Dailyhunt
Disclaimer: This content has not been generated, created or edited by Dailyhunt. Publisher: Vishwavani