2026ರ ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೇ ಪ್ರದೇಶವು ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ಆಡಳಿತಕ್ಕೆ ಸೇರಲಿದೆ. ಇದುವರೆಗೆ ಅದು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಲ್ಲಿತ್ತು. ನೈಋತ್ವ ರೈಲ್ವೇಗೆ ಸೇರಿಸಬೇಕು ಎಂಬುದು ಇಲ್ಲಿನ ಜನತೆಯ ಬಹುಕಾಲದ ಬೇಡಿಕೆ, ಅದೀಗ ಈಡೇರಿದೆ.
ಇದಕ್ಕೆ ಕೇರಳದ ವಿರೋಧ ಇದೆಯಾದರೂ, ಅದನ್ನು ಪರಿಗಣಿಸದೆ ಮುಂದುವರಿಯಬೇಕಿದೆ.
ಯಾಕೆಂದರೆ, ಮಂಗಳೂರು ದೇಶದ ಪ್ರಮುಖ ಕರಾವಳಿ ನಗರಗಳಲ್ಲಿ ಒಂದು. ಬಂದರು, ಕೈಗಾರಿಕೆ, ವ್ಯಾಪಾರ ಮತ್ತು ಸರಕು ಸಾಗಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರದೇಶ. ಅತ್ತ ಗೋವಾ, ಮುಂಬಯಿ ಹಾಗೂ ದಕ್ಷಿಣಕ್ಕೆ ಕೇರಳ ಹಾಗೂ ಇತ್ತ ಬೆಂಗಳೂರನ್ನು ಸಂಪರ್ಕಿಸುವ ಜಂಕ್ಷನ್. ಆದರೆ ವಿಭಾಗೀಕರಣದ ಗೊಂದಲದಿಂದ ರಾಜ್ಯದಲ್ಲಿ ಹೊಸ ರೈಲುಗಳ ಅಳವಡಿಕೆ, ಸಮನ್ವಯ ಇಲ್ಲವಾಗಿ ಆಡಳಿತಾತ್ಮಕ ಗೊಂದಲವಿತ್ತು. ಅಭಿವೃದ್ಧಿ ಕಾಣದೆ ಮಂಗಳೂರಿನ ರೈಲ್ವೇ ಕುಂಟುತ್ತಿತ್ತು.
Vishwavani Editorial: ನೈಸ್ ಅಲ್ಲದ ಹಗರಣ
ಮಂಗಳೂರಿನ ಪ್ರಮುಖ ನಿಲ್ದಾಣಗಳು ಪಾಲಕ್ಕಾಡ್ ವಿಭಾಗದ ಅಡಿಯಲ್ಲಿದ್ದರೆ, ಮತ್ತೊಂದೆಡೆ ಮಂಗಳೂರು-ಹಾಸನ-ಬೆಂಗಳೂರು ಮಾರ್ಗದ ಪ್ರಮುಖ ಭಾಗಗಳು ನೈಋತ್ಯ ರೈಲ್ವೇ ವ್ಯಾಪ್ತಿ ಯಲ್ಲಿದ್ದವು. ಕೇರಳದಿಂದ ಮುಂಬಯಿಯನ್ನು ಸಂಪರ್ಕಿಸುವ ಕೊಂಕಣ ರೈಲ್ವೇಗೆ ಪ್ರತ್ಯೇಕ ಆಡಳಿತ ನಿಗಮವಿದೆ. ಇಂಥ ವಿಭಜನೆಗಳಿಂದಾಗಿ ಯಾವುದೇ ಯೋಜನೆ, ಹಳಿ ವಿಸ್ತರಣೆ, ವೇಳಾ ಪಟ್ಟಿ ಬದಲಾವಣೆ, ಹೊಸ ರೈಲು ಆರಂಭ, ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿ ಗಳಲ್ಲಿ ವಿವಿಧ ರೈಲ್ವೇ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು ಸಂಕೀರ್ಣವಾಗಿತ್ತು.
ಉದಾಹರಣೆಗೆ, ಬೆಂಗಳೂರು- ಮಂಗಳೂರು ನಡುವೆ ಸಾಕಷ್ಟು ಜನರ ಓಡಾಟವಿದ್ದರೂ, ಹೆದ್ದಾರಿಯೊಂದನ್ನೇ ನೆಚ್ಚಿಕೊಳ್ಳಬೇಕಿದೆ. ಹೊಸ ರೈಲು ಅಳವಡಿಸಲು ಹಳಿ ವಿಸ್ತರಣೆ ಆಗಬೇಕು, ಆದರೆ ಅದು ಸುಲಭವಿಲ್ಲ. ಇದೀಗ ಮೈಸೂರು ವಿಭಾಗದೊಂದಿಗೆ ಸೇರುವ ಮೂಲಕ ಆಡಳಿತಾತ್ಮಕ ಸಮನ್ವಯ ಹೆಚ್ಚಬಹುದು. ಮಂಗಳೂರು- ಹಾಸನ- ಬೆಂಗಳೂರು ರೈಲು ಸಂಪರ್ಕವನ್ನು ಮತ್ತಷ್ಟು ಪರಿಣಾಮಕಾರಿ ಆಗಿಸಬಹುದು. ಇದೇ ರೀತಿ ಕಲ್ಯಾಣ ಕರ್ನಾಟಕದ ಹಲವು ರೈಲ್ವೇ ನಿಲ್ದಾಣಗಳು ಹಲವು ವಲಯಗಳಿಗೆ ಹಂಚಿಹೋಗಿವೆ.
ಕಲಬುರಗಿ ರೈಲ್ವೇ ವಲಯ ರೂಪಿಸಿ ಅದನ್ನೆಲ್ಲ ಒಂದೇ ಕಡೆಗೆ ತರುವುದು ಕೂಡ ಆಗಬೇಕು. ಇದೂ ಕೂಡ ಬಹುದಿನಗಳ ಬೇಡಿಕೆಯಾಗಿದ್ದು, ಜನಪ್ರತಿನಿಧಿಗಳು ಒತ್ತಡ ತಂದರೆ ಇದನ್ನು ಮಾಡಬಹುದು. ಇದರಿಂದ ಆ ಭಾಗದ ರೈಲ್ವೆ ಸಂಚಾರ ಹಾಗೂ ಮೂಲಸೌಲರ್ಯ ಅಭಿವೃದ್ಧಿಗೆ ಆಸ್ಪದ ಆಗಬಹುದು. ಈ ಮಹತ್ವದ ಬದಲಾವಣೆಯೂ ಶೀಘ್ರವೇ ಆಗಲಿ.

