Dailyhunt Logo
  • Light mode
    Follow system
    Dark mode
    • Play Story
    • App Story
Zameer Ahmed: ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಜಮೀರ್‌ ಅಹ್ಮದ್‌ಗೆ ಸಂಕಷ್ಟ; ಬೈ ಎಲೆಕ್ಷನ್‌ನಲ್ಲಿ ಪಕ್ಷವಿರೋಧಿ ಚಟುವಟಿಕೆ ಆರೋಪ, ಆಡಿಯೊ ವೈರಲ್‌!

Zameer Ahmed: ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಜಮೀರ್‌ ಅಹ್ಮದ್‌ಗೆ ಸಂಕಷ್ಟ; ಬೈ ಎಲೆಕ್ಷನ್‌ನಲ್ಲಿ ಪಕ್ಷವಿರೋಧಿ ಚಟುವಟಿಕೆ ಆರೋಪ, ಆಡಿಯೊ ವೈರಲ್‌!

Vishwavani 2 weeks ago

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನಕ್ಕೆ ದಿನಾಂಕ ನಿಗದಿಯಾಗಿದೆ. ಯಾರಿಗೆಲ್ಲಾ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂದು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಜಮೀರ್ ಅಹ್ಮದ್ ಖಾನ್‌ ಅವರಿಗೆ ಸಂಕಷ್ಟ ಎದುರಾಗಿದೆ.

ದಾವಣಗೆರೆ ಉಪ ಚುನಾವಣೆ ವೇಳೆ ಪಕ್ಷವಿರೋಧಿ ಚಟುವಟಿಕೆ ಆರೋಪಕ್ಕೆ ಸಂಬಂಧಿಸಿ ಜಮೀರ್ ಅಹ್ಮದ್‌ (Zameer Ahmed) ಅವರದ್ದು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಮೀರ್ ಅಂತರ ಕಾಯ್ದುಕೊಂಡಿದ್ದರು. ಸಂಧಾನ ಪ್ರಯತ್ನ ನಡೆದರೂ ಸಕ್ರಿಯವಾಗಿ ಚುನಾವಣಾ ಪ್ರಚಾರ ನಡೆಸಿರಲಿಲ್ಲ. ಹೀಗಿದ್ದರೂ ಸಮರ್ಥ್ ಗೆಲುವಾಗಿತ್ತು. ಇದರ ನಡುವೆ ಕಾಂಗ್ರೆಸ್ ಮುಸ್ಲಿಂ ನಾಯಕರ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು‌. ಕಾಂಗ್ರೆಸ್‌ ಅಭ್ಯರ್ಥಿ ಸೋಲಿಗೆ ತಮ್ಮ ಪಕ್ಷದ ಮುಖಂಡರೇ ಷಡ್ಯಂತ್ರ ನಡೆಸಿದ್ದಾರೆ ಎಂದು ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಆರೋಪ ಮಾಡಿದ್ದರು. ಅಲ್ಲದೆ ಎಸ್‌ಡಿಪಿಐ ಅಭ್ಯರ್ಥಿಗೆ ಸಹಕಾರ ನೀಡಲಾಗಿದೆ ಎನ್ನಲಾಗಿತ್ತು.

ಬಳಿಕ ಸಮರ್ಥ್ ಶಾಮನೂರು ಸೋಲಿಸಲು ಷಡ್ಯಂತ್ರ ಆರೋಪದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ವಿರುದ್ಧ ಹೈಕಮಾಂಡ್‌ ಶಿಸ್ತು ಕ್ರಮ ಕೈಗೊಂಡಿತ್ತು. ಇನ್ನು ಅಭ್ಯರ್ಥಿ ಪರ ಸರಿಯಾಗಿ ಪ್ರಚಾರ ಮಾಡದ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಕೂಡ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು. ಇದೀಗ ಜಮೀರ್‌ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್‌ ಆಗಿರುವುದು ಕಂಡುಬಂದಿದೆ.

ಆಡಿಯೊದಲ್ಲೇನಿದೆ?

ಈ ಎಲ್ಲಾ ಬೆಳವಣಿಗೆ ನಂತರದಲ್ಲಿ ಇದೀಗ ಜಮೀರ್ ಅವರದ್ದು ಎನ್ನಲಾಗಿರುವ ಆಡಿಯೊ ವೈರಲ್ ಆಗುತ್ತಿದೆ. ʻದಾವಣಗೆರೆ ಬೈ ಎಲೆಕ್ಷನ್‌ನಲ್ಲಿ ಕುಕ್ಕರ್‌ಗೆ ವೋಟ್‌ ಬೀಳಬೇಕುʼ ಎಂದು ಅವರು ಮಾತನಾಡಿರುವುದು ಇದೀಗ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಸ್ಥಳೀಯ ಕಾಂಗ್ರೆಸ್ ನಾಯಕ ಮುಹಮ್ಮದ್ ಸಿರಾಜ್ ಜತೆಗೆ ಜಮೀರ್‌ ಅಹ್ಮದ್‌ ಮಾತನಾಡಿದ ಆಡಿಯೊ ಇದಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಬದಲಾಗಿ ಮುಸ್ಲಿಮರೆಲ್ಲಾ ಪಕ್ಷೇತರರಿಗೆ ವೋಟ್‌ ಹಾಕಬೇಕು ಎಂದು ಜಮೀರ್ ಆಗ್ರಹಿಸುವುದು ಆಡಿಯೊದಲ್ಲಿ ಸ್ಪಷ್ಟಗೊಳ್ಳುತ್ತಿದೆ. ಒಂದು ವೇಳೆ ಮುಸ್ಲಿಮರು ವೋಟ್‌ ಹಾಕಿಲ್ಲ ಅಂದ್ರೂ ಓಕೆ, ಅವನಿಗೆ ಕಾಂಗ್ರೆಸ್‌ ವೋಟ್‌ಗಳು ಮೈನಸ್‌ ಆಗಬೇಕು ಎಂದು ತಮ್ಮ‌ ಸಹಚರನಿಗೆ ಜಮೀರ್ ಸೂಚನೆ ನೀಡಿರುವುದು ಆಡಿಯೊದಲ್ಲಿದೆ.

ಅಷ್ಟೇ ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗೆ ಜಾಸ್ತಿ ಓಟ್ ಹಾಕಬೇಡಿ. ಬಂಡಾಯ ನಿಂತು ಕಣದಿಂದ ಹಿಂದೆ ಸರಿದಿದ್ದ ಸಾದಿಕ್ ಪೈಲ್ವಾನ್ ವಾರ್ಡ್‌ನಲ್ಲಿ ಕಾಂಗ್ರೆಸ್‌ಗೆ ಓಟ್ ಕಡಿಮೆ ಬರುವಂತೆ ನೋಡಿಕೊಳ್ಳಿ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರಿಗೆ ಮತ ಹಾಕಿಸಿ. ಬಲವಂತವಾಗಿ ಮನೆಯಿಂದ ಕರೆದು ಬಂದು ಓಟ್ ಹಾಕಿಸೇಡಿ ಎಂದು ಆಡಿಯೋದಲ್ಲಿದೆ.

ಆಡಿಯೊ ಬಗ್ಗೆ ಜಮೀರ್ ಅಹ್ಮದ್ ಹೇಳಿದ್ದೇನು?

ವೈರಲ್‌ ಆಡಿಯೊ ಕುರಿತು ಪ್ರತಿಕ್ರಿಯೆ ನಡೆಸಿರುವ ಜಮೀರ್‌ ಅಹ್ಮದ್‌ ಖಾನ್, ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೊ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೊ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಡಿಯೊ ಯಾವ ತನಿಖೆ ಆದರೂ ನಡೆಯಲಿ ಎಂದು ಸವಾಲು ಹಾಕಿದ್ದಾರೆ. ನಾನು ಆ ರೀತಿ ಮಾತನಾಡಿಲ್ಲ. ಇದು ಕಿಡಿಗೇಡಿಗಳ ಕೃತ್ಯ,ಇದನ್ನು ಯಾರೂ ನಂಬಬಾರದು ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani