Vistara News
32k Followersಕೇಂದ್ರ ಸರ್ಕಾರಿ ನೌಕರರಿಗೆ ನವರಾತ್ರಿಯ ಸಂದರ್ಭದಲ್ಲಿ ಸಿಹಿ ಸುದ್ದಿ ಸಿಗಲಿದೆಯೇ? ಹೌದು, ಎನ್ನುತ್ತಿವೆ ಕೇಂದ್ರ ಸರ್ಕಾರದ ಉನ್ನತ ಮೂಲಗಳು. ಕೇಂದ್ರ ಸರ್ಕಾರಿ ಉದ್ಯೋಗಿಗಳು ಬಹು ನಿರೀಕ್ಷೆ ಇಟ್ಟುಕೊಂಡಿರುವ ತುಟ್ಟಿ ಭತ್ಯೆ (ಡಿಎ) ಹೆಚ್ಚಳವನ್ನು (DA Hike) ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ.
ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಕೇಂದ್ರ ಸರ್ಕಾರ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡುತ್ತಾ ಬಂದಿದ್ದು, ಕಳೆದ ಮಾರ್ಚ್‌ನಲ್ಲಿ ತುಟ್ಟಿ ಭತ್ಯೆ ನೀಡಲಾಗಿತ್ತು. ಆಗ ಶೇ. 3 ರಷ್ಟು ಹೆಚ್ಚಳ ಮಾಡಲಾಗಿತ್ತು. ಮತ್ತೊಮ್ಮೆ ಜುಲೈನಲ್ಲಿಯೇ ತುಟ್ಟಿ ಭತ್ಯೆ ಪ್ರಕಟಿಸಲಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿತ್ತು. ಹೀಗಾಗಿ ಕೇಂದ್ರ ಸರ್ಕಾರ ಯಾವಾಗ ತುಟ್ಟಿ ಭತ್ಯೆ ಪ್ರಕಟಿಸುತ್ತದೆ, ಎಷ್ಟು ಹೆಚ್ಚಳ ಮಾಡುತ್ತದೆ ಎಂದು ನೌಕರರು ಕಾತುರದಿಂದ ಕಾಯುತ್ತಿದ್ದಾರೆ.
ತುಟ್ಟಿ ಭತ್ಯೆ ಹೆಚ್ಚಳದ ಕುರಿತು ಸೆಪ್ಟೆಂಬರ್ ಕೊನೆಯಲ್ಲಿ ನಡೆಯುವ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಶೇ.4 ರಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ನವರಾತ್ರಿಯ ಕೊಡುಗೆಯಾಗಿ ಸರ್ಕಾರ ಇದನ್ನು ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಶೇ.4 ರಷ್ಟು ಹೆಚ್ಚಳ ಮಾಡಿದಲ್ಲಿ, ಒಟ್ಟಾರೆ ತುಟ್ಟಿ ಭತ್ಯೆ ಶೇ.38 ಕ್ಕೆ ಏರಿದಂತಾಗಲಿದೆ. ಕಳೆದ ಜುಲೈನಿಂದಲೇ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಸುಮಾರು 52 ಲಕ್ಷ ನೌಕರರು ಮತ್ತು 63 ಲಕ್ಷ ಪಿಂಚಣಿದಾರರು ಈ ಹೆಚ್ಚಳದ ಲಾಭ ಪಡೆಯಲಿದ್ದಾರೆ.
ಸಾಮಾನ್ಯವಾಗಿ ಸರಕಾರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕಳೆದ 12 ತಿಂಗಳ ಸಿಪಿಐ-ಐಡಬ್ಲ್ಯುದ ಅಂಕಿ ಅಂಶ ಆಧರಿಸಿ ಮೊತ್ತವನ್ನು ನಿರ್ಧರಿಸುತ್ತದೆ. ಏಳನೇ ವೇತನ ಆಯೋಗದ ಶಿಫಾರಿಸಿನಂತೆ ಈ ಬಾರಿ ಹೆಚ್ಚಳ ಮಾಡಲಾಗುತ್ತದೆ. ತುಟ್ಟಿಭತ್ಯೆ ಶೇ 50ರ ಮಿತಿ ದಾಟಿದರೆ ಮೂಲ ವೇತನದೊಂದಿಗೆ ಅದನ್ನು ವಿಲೀನಗೊಳಿಸಲಾಗುತ್ತದೆ. ಮೂಲ ವೇತನವನ್ನು ಆಧರಿಸಿ ಇತರ ಭತ್ಯೆಗಳನ್ನು ನಿಗದಿಪಡಿಸುವ ಕಾರಣ ತುಟ್ಟಿಭತ್ಯೆ ವಿಲೀನದಿಂದ ನೌಕರರಿಗೆ ಅನುಕೂಲವಾಗುತ್ತದೆ.
Disclaimer
This story is auto-aggregated by a computer program and has not been created or edited by Dailyhunt Publisher: Vistara News