Photo Credit X
ಮಧ್ಯಪ್ರದೇಶದ ರೇವಾದಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರಲ್ಲಿ 25 ವರ್ಷದ ಮಹಿಳೆ ಮತ್ತು ಅವರ ನವಜಾತ ಶಿಶು ಮೃತಪಟ್ಟಿದ್ದಾರೆ. ಇದೀಗ ಹೆರಿಗೆಗೆ ಕೆಲವೇ ಗಂಟೆಗಳ ಮೊದಲು ಗರ್ಭಿಣಿಯ ಗೋಳಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ."ನನ್ನನ್ನು ಇಲ್ಲಿಂದ ಕರೆದೊಯ್ಯಿರಿ. ನಾನು ಬದುಕುಳಿಯುವುದಿಲ್ಲ, ಅವರು ನನ್ನನ್ನು ಕೊಂದುಹಾಕುತ್ತಾರೆ," ಎಂದು ಕಲ್ಪನಾ ಮಿಶ್ರಾ ಅವರು ವಿಡಿಯೋದಲ್ಲಿ ಹೇಳುತ್ತಿರುವುದು ಕೇಳಿಸುತ್ತದೆ.
ಕಲ್ಪನಾ ಅವರನ್ನು ಮಂಗಳವಾರ ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ (SGMH) - ಇದನ್ನು ಗಾಂಧಿ ಮೆಮೋರಿಯಲ್ ಆಸ್ಪತ್ರೆ ಎಂದೂ ಕರೆಯಲಾಗುತ್ತದೆ. ಕುಟುಂಬದ ಪ್ರಕಾರ, ಮರುದಿನ ಅವರಿಗೆ ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮಾಡಲಾಯಿತು, ನಂತರ ಚಿಕಿತ್ಸೆಯ ಸಮಯದಲ್ಲಿ ತಾಯಿ, ನವಜಾತ ಶಿಶು ಮೃತಪಟ್ಟರು.
ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಕಲ್ಪನಾ ಪದೇ ಪದೇ ದೂರು ನೀಡಿದ್ದರೂ ಹಾಗೂ ತಮಗೂ ಮತ್ತು ತಮ್ಮ ಸಂಬಂಧಿಕರಿಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಾಗಿಲ್ಲ ಎಂದು ಆರೋಪಿಸಿರುವ ಕುಟುಂಬವು, ಇದರಲ್ಲಿ ಗಂಭೀರ ವೈದ್ಯಕೀಯ ನಿರ್ಲಕ್ಷ್ಯವಿದೆ ಎಂದು ದೂರಿದೆ.
ಅಲ್ಲದೆ, ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿರುವ ಈ ವಿಡಿಯೋದಲ್ಲಿ, ಕಲ್ಪನಾ ತೀವ್ರ ಆತಂಕದಿಂದ ಕೂಡಿದ್ದು, ತಮ್ಮನ್ನು ಆಸ್ಪತ್ರೆಯಿಂದ ಕರೆದೊಯ್ಯುವಂತೆ ಅಂಗಲಾಚುತ್ತಿರುವುದು ಕಾಣಿಸುತ್ತದೆ. ಕುಟುಂಬದ ಸದಸ್ಯರೊಬ್ಬರು ಅವರಿಗೆ ಸಮಾಧಾನ ಹೇಳುತ್ತಾ, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಮತ್ತು ಅವರು ಗುಣಮುಖರಾಗುತ್ತಾರೆ ಎಂದು ಹೇಳುತ್ತಿರುವುದು ಕಂಡುಬರುತ್ತದೆ.
ಈ ಸಾವುಗಳು ಆಸ್ಪತ್ರೆಯಲ್ಲಿ ಪ್ರತಿಭಟನೆಗೆ ಕಾರಣವಾಗಿವೆ. ಶೋಕತಪ್ತ ಕುಟುಂಬ ಸದಸ್ಯರು ಆಸ್ಪತ್ರೆಯ ಮುಖ್ಯ ದ್ವಾರದ ಹೊರಗೆ ಧರಣಿ ನಡೆಸಿ, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಆಸ್ಪತ್ರೆ ಆಡಳಿತ ಮಂಡಳಿಯು ನಿರ್ಲಕ್ಷ್ಯದ ಆರೋಪಗಳನ್ನು ನಿರಾಕರಿಸಿದೆ. ಈ ವಿವಾದದ ನಂತರ, ಡೀನ್ ಸುನಿಲ್ ಅಗರ್ವಾಲ್ ಮತ್ತು ಅಧೀಕ್ಷಕ ರಾಹುಲ್ ಮಿಶ್ರಾ ಸ್ಥಳಕ್ಕೆ ಆಗಮಿಸಿ ಕುಟುಂಬದೊಂದಿಗೆ ಮಾತನಾಡಿದರು ಹಾಗೂ ನಿಷ್ಪಕ್ಷಪಾತ ತನಿಖೆಯ ಭರವಸೆ ನೀಡಿದರು.
ಪ್ರಾಥಮಿಕ ಕ್ರಮವಾಗಿ, ಕರ್ತವ್ಯದಲ್ಲಿದ್ದ ಇಬ್ಬರು ನರ್ಸಿಂಗ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಸಾವುಗಳಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ.
ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡವು ಮರಣೋತ್ತರ ಪರೀಕ್ಷೆಯನ್ನು ನಡೆಸುವ ನಿರೀಕ್ಷೆಯಿದೆ. ಮರಣೋತ್ತರ ಪರೀಕ್ಷೆ ಮತ್ತು ತನಿಖಾ ವರದಿಗಳ ನಂತರವಷ್ಟೇ ತಾಯಿ ಮತ್ತು ಮಗುವಿನ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಾವನ್‌ನ ಬಿಜೆಪಿ ಶಾಸಕ ನರೇಂದ್ರ ಪ್ರಜಾಪತಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬವನ್ನು ಭೇಟಿಯಾದರು. ಅವರು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿದರು ಮತ್ತು ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಕುಟುಂಬಕ್ಕೆ ಭರವಸೆ ನೀಡಿದರು.

