Photo Courtesy X
ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿಭಾಗದ ಹಿಮಾಲಯನ್ ಪ್ರದೇಶದಲ್ಲಿ ಸಂಭವಿಸಿರುವ ಹಠಾತ್ ಜಲಪ್ರಳಯ ಹಾಗೂ ಸರಣಿ ಭೂಕುಸಿತದಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ. ಈ ದುರಂತದ ಬೆನ್ನಲ್ಲೇ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.ನೇಪಾಳ ಪೊಲೀಸರ ಅಧಿಕೃತ ಮಾಹಿತಿಯ ಪ್ರಕಾರ, ನೇಪಾಳದಲ್ಲಿ ಈವರೆಗೆ 469ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಸ್ಥಳೀಯರು, ವಿದೇಶಿ ಪ್ರವಾಸಿಗರು ಹಾಗೂ ಕೈಲಾಸ ಮಾನಸಸರೋವರ ಯಾತ್ರಿಕರು ಸೇರಿದಂತೆ 1,400ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದಾರೆ. ಇದರಲ್ಲಿ ನೂರಾರು ಭಾರತೀಯರು ಕೂಡ ಸೇರಿದ್ದಾರೆ.
ಹಿಮಾಲಯದ ಮೇಲ್ಭಾಗದಲ್ಲಿ ಗ್ಲೇಶಿಯರ್ (ಹಿಮನದಿ) ಕುಸಿದು ಉಂಟಾದ ಬೃಹತ್ ಹಿಮ ಮತ್ತು ಬಂಡೆಗಳ ಹಿಮಪಾತದಿಂದ ಭೋಟೇಕೋಶಿ ಹಾಗೂ ತ್ರಿಶೂಲಿ ನದಿ ಪಾತ್ರಗಳಲ್ಲಿ ಏಕಾಏಕಿ ಭಾರಿ ಪ್ರವಾಹ ನುಗ್ಗಿದೆ. ನೂರಾರು ಮನೆಗಳು, ಸೇತುವೆಗಳು, ರಸ್ತೆಗಳು ಮತ್ತು ಜಲವಿದ್ಯುತ್ ಯೋಜನೆಗಳು ಕೊಚ್ಚಿಹೋಗಿವೆ.
ಪ್ರವಾಹ ಪೀಡಿತ ಪ್ರದೇಶದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ತಡೆಗೋಡೆ ಸರೋವರ ನಿರ್ಮಾಣಗೊಂಡಿದ್ದು, ಅದು ಈಗಾಗಲೇ ತುಂಬಿ ಹರಿಯುತ್ತಿದೆ. ಇದು ಒಡೆದರೆ ಮತ್ತೊಮ್ಮೆ ಭಾರಿ ಪ್ರವಾಹ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಚೀನಾ ಮತ್ತು ನೇಪಾಳ ಸರ್ಕಾರಗಳು ಎಚ್ಚರಿಕೆ ನೀಡಿವೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ನೇಪಾಳ ಸೇನೆ ಮತ್ತು ವಿಪತ್ತು ನಿರ್ವಹಣಾ ಪಡೆಗಳು ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳನ್ನು ಬಳಸಿ ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಭಾರತ ಸರ್ಕಾರವು ನೆರೆ ಸಂತ್ರಸ್ತರ ಸಹಾಯಕ್ಕಾಗಿ ಅಗತ್ಯ ಔಷಧಗಳು ಮತ್ತು 10 ಟನ್‌ಗಳಿಗೂ ಅಧಿಕ ಪರಿಹಾರ ಸಾಮಗ್ರಿಗಳನ್ನು ವಾಯುಪಡೆಯ ವಿಮಾನಗಳ ಮೂಲಕ ತುರ್ತಾಗಿ ಕಳುಹಿಸಿಕೊಟ್ಟಿದೆ.
ನೇಪಾಳ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯಂತೆ, ಹೆಲಿಕಾಪ್ಟರ್‌ಗಳ ಮೂಲಕ 50 ವಿದೇಶಿಯರು ಸೇರಿದಂತೆ 796 ಮಂದಿಯನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಿಸಲಾಗಿದೆ. ಮತ್ತೂ 796 ಮಂದಿಯನ್ನು ಭೂಮಾರ್ಗದ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ, ರಕ್ಷಿಸಲಾದ ವಿದೇಶಿಯರ ರಾಷ್ಟ್ರೀಯತೆಗಳ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ನೇಪಾಳದ ಪ್ರವಾಹ ಮುನ್ಸೂಚನಾ ವಿಭಾಗವು ಗುರುವಾರ ವಿಶೇಷ ಸೂಚನೆ ಹೊರಡಿಸಿ, ಭೂಕುಸಿತದಿಂದ ಉಂಟಾದ ಅವಶೇಷಗಳ ಹಿಂದೆ ನೀರು ಸಂಗ್ರಹವಾಗಿ ಸರೋವರದ ಗಾತ್ರ ಹೆಚ್ಚುತ್ತಿರುವುದಾಗಿ ತಿಳಿಸಿದೆ. ಜನರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಸ್ಥಗಿತ: ನೇಪಾಳ-ಚೀನಾ ಗಡಿಯಲ್ಲಿ ಸಂಭವಿಸಿದ ಹಿಮ ಕುಸಿತದ ಬೆನ್ನಲ್ಲೇ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ನೇಪಾಳ ಸರ್ಕಾರವು ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಿದೆ.
ಟಿಬೆಟ್‌ನಲ್ಲಿ ನೀರಿನ ತಡೆಗೋಡೆ ಒಡೆದುಹೋಗಿರುವ ಮಾಹಿತಿ ಲಭ್ಯವಾಗಿದ್ದು, ಮತ್ತಷ್ಟು ಭೀಕರ ಪ್ರವಾಹದ ಅಲೆಗಳು ಅಪ್ಪಳಿಸುವ ಅಪಾಯ ಎದುರಾಗಿದೆ. ಹೀಗಾಗಿ ಎಲ್ಲಾ ರಕ್ಷಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಹಿಂತಿರುಗುವಂತೆ ತುರ್ತು ಸೂಚನೆ ನೀಡಲಾಗಿದೆ.

