ಬೆಂಗಳೂರು: ಎಸಿ ರೂಂನಲ್ಲಿ ಕುಳಿತು ತೀರ್ಪು ಕೊಡುವ ಬದಲು ಸಿಎಂಡಬ್ಲ್ಯುಎ ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿ ಅರಿಯಬೇಕಿತ್ತು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಪ್ರತಿದಿನ ಕಾವೇರಿ ನೀರು ಹರಿಸುವಂತೆ ನೀಡಿರುವ ನಿರ್ದೇಶನವನ್ನು 'ಅವೈಜ್ಞಾನಿಕ' ಹಾಗೂ 'ಕರ್ನಾಟಕಕ್ಕೆ ಮಾರಕ' ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ದೆಹಲಿಯಲ್ಲಿ ಕುಳಿತು ತೀರ್ಪು ನೀಡುವುದು ಸುಲಭ. ಆದರೆ ಕರ್ನಾಟಕದ ಜಲಾಶಯಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗುವಂತಹ ಸನ್ನಿವೇಶವಿದೆ. ಪ್ರಾಧಿಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಬೇಕು.
ಸಾಕಷ್ಟು ಮಳೆಯಾಗದೆ ಜಲಾಶಯಗಳು ಭರ್ತಿಯಾಗದಿರುವಾಗ ಹಾಗೂ ರಾಜ್ಯದ ರೈತರೇ ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವಾಗ ನೆರೆಯ ರಾಜ್ಯಕ್ಕೆ ನೀರು ಹರಿಸಲು ಆದೇಶಿಸುವುದು ಪ್ರಾಯೋಗಿಕವೂ ಅಲ್ಲ, ವೈಜ್ಞಾನಿಕವೂ ಅಲ್ಲ. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಎಲ್ಲಾ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಪ್ರತಿಭಟಿಸಬೇಕಾಗಿದೆ ಎಂದಿದ್ದಾರೆ.

