Photo Courtesy X
ಚೆನ್ನೈ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ನಡೆದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಫೈನಲ್‌ನಲ್ಲಿ ಜಯಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.ಅತ್ಯಂತ ರೋಚಕವಾಗಿ ಸಾಗಿದ ಹೋರಾಟದಲ್ಲಿ ಪ್ರಜ್ಞಾನಂದ ಅವರು ಫ್ಯಾಬಿಯಾನೊ ಕರುವಾನಾ ಅವರನ್ನು 15-13 ಅಂಕಗಳ ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದರು.
ಈ ಭರ್ಜರಿ ವಿಜಯದೊಂದಿಗೆ ಪ್ರಜ್ಞಾನಂದ ಅವರು ಅಂದಾಜು ಭಾರತೀಯ ರೂಪಾಯಿ 1.90 ಕೋಟಿಗೂ ಅಧಿಕ ಮೊತ್ತದ ಬಹುಮಾನದ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ, ಮುಂದಿನ ವರ್ಷದ ಟೂರ್‌ಗೆ ನೇರ ಅರ್ಹತೆಯನ್ನು ಪಡೆದಿದ್ದಾರೆ.
ವಿಶ್ವ ಚಾಂಪಿಯನ್‌ಷಿಪ್ ಬಿಟ್ಟರೆ ಚೆಸ್ ಜಗತ್ತಿನಲ್ಲಿ ಗ್ರ್ಯಾಂಡ್ ಚೆಸ್ ಟೂರ್ ಅಷ್ಟು ಮಹತ್ವ ಹಾಗೂ ಪರಂಪರೆ ಹೊಂದಿರುವ ದೊಡ್ಡ ಟೂರ್ನಿಯಾಗಿದೆ ಎಂದು ಪ್ರಜ್ಞಾನಂದ ಈ ಗೆಲುವಿನ ಬಳಿಕ ಬಣ್ಣಿಸಿದ್ದಾರೆ. ಈ ವರ್ಷದ ನಾರ್ವೆ ಚೆಸ್ ಟೋನಿಯನ್ನು ಗೆದ್ದು ಬೀಗಿದ್ದ ಪ್ರಜ್ಞಾನಂದ, ಈಗ ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಮತ್ತೊಮ್ಮೆ ಭಾರತದ ಕೀರ್ತಿಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ್ದಾರೆ.
ಚೆಸ್‌ನಲ್ಲಿ ಹೊಸ ಇತಿಹಾಸ ಬರೆದೆ ಪ್ರಜ್ಞಾನಂದ ಅವರಿಗೆ ಅಭಿನಂದನೆಗಳ ಸುರಿಮಳೆ ಬರುತ್ತಿವೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಅಭಿನಂದಿಸಿ ಪೋಸ್ಟ್ ಮಾಡಿದ್ದಾರೆ.

