ಬೆಂಗಳೂರು: ಇರುಮುಡಿ ಎಂಬ ವಾರದ ಹಿಂದೆ ಬಿಡುಗಡೆಯಾದ ತೆಲುಗು ಸಿನಿಮಾ ಗೆಲ್ಲಿಸಲು ಅಲ್ಲಿನ ಚಿತ್ರರಂಗದ ದಿಗ್ಗಜರೆಲ್ಲಾ ಒಂದಾದರು. ಆದರೆ ಕನ್ನಡದ ಟಾಕ್ಸಿಕ್ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಮಾಡುತ್ತಿದ್ದರೂ ಕನ್ನಡ ಚಿತ್ರರಂಗದವರು ತುಟಿ ಪಿಟಕ್ ಎನ್ನುತ್ತಿಲ್ಲ.
ಟಾಕ್ಸಿಕ್ ಮೊದಲ ದಿನ ಸಿನಿಮಾ ನೋಡಿದ ಬಳಿಕ ವಿಶೇಷವಾಗಿ ತೆಲುಗು ವಿಮರ್ಶಕರು ನೆಗೆಟಿವ್ ವಿಮರ್ಶೆ ಬರೆದರು. ಜೊತೆಗೆ ಕನ್ನಡದವರೇ ಹಲವರು ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ವಿಮರ್ಶೆ ಮಾಡಿದರು. ಇದು ಸಿನಿಮಾದ ಗಳಿಕೆ ಮೇಲೆ ಪರಿಣಾಮ ಬೀರಿದೆ.
ಆದರೆ ತೆಲುಗಿನ ಚಿತ್ರರಂಗದವರನ್ನು ನೋಡಿ.. ಟಾಕ್ಸಿಕ್ ಬಿಡುಗಡೆಯಾಗಿ ಇರುಮುಡಿ ಸಿನಿಮಾ ಗಳಿಕೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವಾಗ ಟಾಕ್ಸಿಕ್ ರಿಲೀಸ್ ದಿನವೇ ಮೆಗಾಸ್ಟಾರ್ ಚಿರಂಜೀವಿಯಿಂದ ಹಿಡಿದು ಎಲ್ಲಾ ಸ್ಟಾರ್ ಗಳೂ ಇರುಮುಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿ ಚಿತ್ರ 100 ಕೋಟಿ ಗಳಿಕೆ ದಾಟುವಂತೆ ಮಾಡಿದರು.
ಆದರೆ ವಿಪರ್ಯಾಸವೆಂದರೆ ಈ ಒಗ್ಗಟ್ಟು ಕನ್ನಡ ಚಿತ್ರರಂಗದಲ್ಲಿ ಕಾಣುತ್ತಿಲ್ಲ. ಟಾಕ್ಸಿಕ್ ಹಾಲಿವುಡ್ ಲೆವೆಲ್ ನಲ್ಲಿ ಮಾಡಿದ ಸಿನಿಮಾ. ಅದರ ಮೇಕಿಂಗ್ ಬಗ್ಗೆ ಎರಡು ಮಾತಿಲ್ಲ. ಯಶ್ ಅಭಿನಯ ಅದ್ಭುತ. ಆದರೆ ಚಿತ್ರದಲ್ಲಿರುವ ಅಶ್ಲೀಲತೆಗಳೇ ಹೆಚ್ಚು ಸುದ್ದಿಯಾದವು. ಕನ್ನಡದ ಯಾವ ನಟರೂ ಟಾಕ್ಸಿಕ್ ಬೆಂಬಲಿಸಿ ಒಂದೇ ಒಂದು ಪೋಸ್ಟ್ ಮಾಡಲಿಲ್ಲ. ಇದನ್ನು ನೋಡುತ್ತಿದ್ದರೆ ಕನ್ನಡ ಚಿತ್ರರಂಗವನ್ನು ಬೇರೆ ಲೆವೆಲ್ ಗೆ ಕೊಂಡೊಯ್ಯುತ್ತೇನೆ ಎಂದು ರೆಕ್ಕೆ ಕಟ್ಟಿ ನಿಂತಿರುವ ಯಶ್ ಏಕಾಂಗಿಯಾದರೇನೋ ಎಂಬ ಬೇಸರ ಕಾಡುತ್ತದೆ. ತೆಲುಗು ಚಿತ್ರರಂಗದಲ್ಲಿರುವ ಒಗ್ಗಟ್ಟು ನಮ್ಮಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ಮೂಡುತ್ತದೆ.

