ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯಾಗುತ್ತಿದೆಯೇ ಹೊರತು ಇನ್ನೂ ಅಧಿಕೃತವಾಗಿ ಮಳೆಗಾಲ ಆರಂಭವಾಗಿಲ್ಲ. ಕರ್ನಾಟಕದಲ್ಲಿ ಮಳೆಗಾಲ ಆರಂಭ ಯಾವಾಗ ಇಲ್ಲಿದೆ ಮಾಹಿತಿ. ಹವಾಮಾನ ವರದಿಗಳ ಪ್ರಕಾರ ಜೂನ್ 4 ರಂದು ಅಂದರೆ ನಾಳೆ ಕೇರಳಕ್ಕೆ ಮುಂಗಾರಿನ ಆಗಮನವಾಗಲಿದೆ.
ವಾಡಿಕೆಯಂತೆ ಮೊದಲು ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸಲಿದ್ದು ಬಳಿಕ ಇತರೆ ರಾಜ್ಯಗಳಿಗೆ ಪಸರಿಸಲಿದೆ. ಇದಕ್ಕೆ ಮೊದಲು ಮೇ 26 ಕ್ಕೇ ಮುಂಗಾರು ಪ್ರವೇಶವಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ನಿರೀಕ್ಷೆಯಂತೇ ಮಳೆ ಬರಲಿಲ್ಲ.
ಜೂನ್ 4 ರಂದು ನೈಋತ್ಯ ಮುಂಗಾರು ಕೇರಳ ಪ್ರವೇಶ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೇರಳದಾದ್ಯಂತ ನಾಳೆ ಭಾರೀ ಮಳೆಯಾಗುವ ಸೂಚನೆಯಿದೆ. ಕೇರಳಕ್ಕೆ ಮುಂಗಾರು ಮೊದಲು ಪ್ರವೇಶ ಮಾಡಿದರೆ ಮುಂದಿನ 2 ದಿನಗಳಲ್ಲೇ ಕರ್ನಾಟಕದಲ್ಲೂ ಮುಂಗಾರು ಮಳೆ ಆರಂಭವಾಗಲಿದೆ.
ಅಂದರೆ ಈ ವಾರಂತ್ಯದ ವೇಳೆಗೆ ಕರ್ನಾಟಕಕ್ಕೂ ಮುಂಗಾರು ಮಳೆ ಪ್ರವೇಶವಾಗುವ ಸಾಧ್ಯತೆಯಿದೆ. ಜೂನ್ 7 ಅಥವಾ 8 ರಂದು ಮುಂಗಾರು ಮಾರುತ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ, ಉತ್ತರ ಕನ್ನಡದ ಭಾಗಗಳಿಗೆ ತಲುಪಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

