ವೆಬ್ದುನಿಯಾ

445k Followers

ನಾಳೆಯಿಂದ `SDA' ಪರೀಕ್ಷೆ : ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

17 Sep 2021.08:30 AM

ದಾವಣಗೆರೆ : ಕರ್ನಾಟಕ ಲೋಕಸೇವಾ ಆಯೋಗದ ಕಿರಿಯ ಸಹಾಯಕರ ಅಥವಾ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯು ಜಿಲ್ಲೆಯ 24 ಕೇಂದ್ರಗಳಲ್ಲಿ ಇದೇ ಸೆ.18 ಮತ್ತು 19 ರಂದು ಅನುಕ್ರಮವಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಸೇರಿದಂತೆ ಇತರೆ ವಿದ್ಯುನ್ಮಾನ ಸಾಧನಗಳನ್ನು ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಎಸ್ಡಿಎ ಪರೀಕ್ಷೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷೆ ನಡೆಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು. ಪರೀಕ್ಷೆಗೆ ಸಂಬಂಧಿಸಿದ ಆಸನ ನಕ್ಷೆಯನ್ನು ಪರೀಕ್ಷೆಯ ದಿನದಂದು ಪ್ರಕಟಿಸಲು ಹಾಗೂ ವಿದ್ಯಾರ್ಥಿಗಳಿಗೆ ಗೊಂದಲ ಮೂಡಿಸದ ಹಾಗೆ ಎರಡು ಮೂರು ಕಡೆ ಸೂಚನಾ ಫಲಕಗಳನ್ನು ಮುಖ್ಯದ್ವಾರಗಳಲ್ಲಿ ಪ್ರಕಟಿಸಲು ಏರ್ಪಾಡು ಮಾಡಿರಬೇಕು. ಪರೀಕ್ಷಾ ಕೊಠಡಿ ವಿಶಾಲವಾಗಿದ್ದಲ್ಲಿ ಪ್ರತಿ 24 ವಿದ್ಯಾರ್ಥಿಗಳಿಗೆ ಒಂದರಂತೆ ಬ್ಲಾಕ್ ಮಾಡಿ ಪ್ರತ್ಯೇಕವಾಗಿ ಸಂವೀಕ್ಷಕರನ್ನು ನೇಮಿಸಬೇಕು. ಅಂಧ, ದೃಷ್ಠಿಮಾಂದ್ಯ ಅಭ್ಯರ್ಥಿಗಳಿಗೆ ಪ್ರತಿ 4 ಅಭ್ಯರ್ಥಿಗಳಿಗೆ ಒಂದರಂತೆ ಬ್ಲಾಕ್ ಮಾಡಿ ಪ್ರತ್ಯೇಕವಾಗಿ ಸಂವೀಕ್ಷಕರನ್ನು ನೇಮಿಸಬೇಕು ಎಂದರು.
ಪರೀಕ್ಷಾ ಕೊಠಡಿಗಳು ಶೌಚಾಲಯದ ಬಳಿಯಾಗಲೀ, ಮಹಡಿ ಪಕ್ಕದಲ್ಲಾಗಲೀ, ಗಾಳಿ, ಬೆಳಕಿಲ್ಲದ ಕೋಣೆಯಾಗಲೀ ಅಥವಾ ಕಟ್ಟಡದಿಂದ ದೂರವಿರುವ ಕೊಠಡಿಯಾಗಲೀ ಆಗಕೂಡದು ಹಾಗೂ ಶಬ್ಧಮಾಲಿನ್ಯದಿಂದ ಆದಷ್ಟು ದೂರವಿರಬೇಕು. ಪೀಠೋಪಕರಣಗಳು ವಯಸ್ಕ ಅಭ್ಯರ್ಥಿ ಸರಿಯಾಗಿ ಕುಳಿತು ಬರೆಯಲು ಯೋಗ್ಯವಾಗಿರಬೇಕು. ಹಾಗೂ ಆಸನಗಳು ಅರಾಮವಾಗಿದ್ದು ಪ್ರತಿ ಅಭ್ಯರ್ಥಿ ಮದ್ಯೆ ಕನಿಷ್ಠ 2 ಚದುರ ಮೀಟರ್ಗಳಷ್ಟು ಅಂತರ ಇರಬೇಕು.
ಈ ಹಿಂದಿನ ಪರೀಕ್ಷೆಗಳಲ್ಲಿ ನೀರು ಸರಬರಾಜು ಮಾಡುವ ವ್ಯಕ್ತಿಯಿಂದ ದುರಾಚಾರ ಪ್ರಕರಣಕ್ಕೆ ಆಸ್ಪದವಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷಾ ಕೊಠಡಿಯ ಒಳಗಡೇ ನೀಡು ಸರಬರಾಜು ಮಾಡುವಂತಿಲ್ಲ. ಬದಲಾಗಿ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮುನ್ನ ತಪಾಸಣಾ ಸ್ಥಳದಲ್ಲಿ ಅಥವಾ ಕಾರಿಡಾರ್ಗಳಲ್ಲಿ ನೀರಿನ ವ್ಯವಸ್ಥೆ ಮಾಡಿರಬೇಕು. ಅಭ್ಯರ್ಥಿಗಳು ಟ್ರ್ಯಾನ್ಸ್ಪರೆಂಟ್ ಬಾಟಲ್ಗಳನ್ನು ಮಾತ್ರ ಪರೀಕ್ಷಾ ಕೊಠಡಿ ಒಳಗೆ ಕೊಂಡೊಯ್ಯಲು ಅವಕಾಶ ಕಲ್ಪಿಸಬೇಕು ಹಾಗೂ ಕಡ್ಡಾಯವಾಗಿ ನೀರಿನ ಬಾಟಲ್ ನ್ನು ಪರಿಶೀಲಿಸಬೇಕು.
ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡ ಪ್ರವೇಶ ಪತ್ರವನ್ನು ಹಾಗೂ ಅಭ್ಯರ್ಥಿಯ ಭಾವಚಿತ್ರವಿರುವ ಮೂಲ ಗುರುತಿನ ಚೀಟಿ (ಚುನಾವಣಾ ಐಡಿ/ ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ಪ್ಯಾನ್ ಕಾರ್ಡ್/ ಪಾಸ್ಪೋರ್ಟ್/ಸರ್ಕಾರಿ ನೌಕರರ ಐಡಿ) ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರುಪಡಿಸಿದ ನಂತರವೇ ಮುಖ್ಯ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿದ ಮತ್ತು ಸ್ನಾನಿಟೈಜರ್ ಉಪಯೋಗಿಸಿದ ನಂತರ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅನುಮತಿಸತಕ್ಕದ್ದು. ಮೂಲ ಗುರುತಿನ ಚೀಟಿ ಹಾಜರುಪಡಿಸದ ಅಭ್ಯರ್ಥಿಗಳಿಗೆ ಪರೀಕ್ಷಾ ಉಪಕೇಂದ್ರವನ್ನು ಪ್ರವೇಶಿಸಲು ಅನುಮತಿ ಇರುವುದಿಲ್ಲ.
ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಒಂದು ವೇಳೆ ಅಭ್ಯರ್ಥಿಯ ಗುರುತು ಬಗ್ಗೆ ಸಂಶಯ ಬಂದಲ್ಲಿ ಪ್ರವೇಶ ಪತ್ರದ ಮೇಲ್ಬಾಗದಲ್ಲಿ ಮುದ್ರಿತವಾಗುವ ಮೊಬೈಲ್ ಫೋನ್ ಮೂಲಕ ಕ್ಯೂ ಆರ್ ಸ್ಕ್ಯಾನ್ ಮಾಡಿ ವೀಕ್ಷಿಸಬೇಕು. ಅದರಲ್ಲಿ ಅಭ್ಯರ್ಥಿಯ ವಿವರಗಳು ಇರುತ್ತದೆ.
ಪರೀಕ್ಷಾ ಕೇಂದ್ರದ ಆವರಣದಲ್ಲಿ ಮೊಬೈಲ್ ಫೋನ್ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊಂದಿರಬಾರದು. ಅಭ್ಯರ್ಥಿಗಳು ತಪಾಸಣೆಯ ನಂತರ ನಿಶಬ್ಧವಾಗಿ ತಮ್ಮ ಪರೀಕ್ಷಾ ಕೊಠಡಿಗಳಿಗೆ ಹೋಗಿ ಕುಳಿತುಕೊಳ್ಳತಕ್ಕದ್ದು. ಪರೀಕ್ಷಾ ಕೊಠಡಿಯ ಹೊರ ಆವರಣದಲ್ಲಿ ನಿಂತು ಮಾತನಾಡುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳನ್ನು ವಿಶೇಷವಾಗಿ ಐಐಟಿ ಮತ್ತು ನೀಟ್ ಪರೀಕ್ಷೆಗಳಲ್ಲಿ ಅನುಸರಿಸುವಂತೆ ಅಭ್ಯರ್ಥಿಗಳ ಕಿವಿಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಹಾಗೂ ಮೈಕ್ರೋ ಫೋನ್ ಬಳಸದಿರುವ ಬಗ್ಗೆ ತಪಾಸಣೆ ನಡೆಸಬೇಕು.
ಪರೀಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮೊಬೈಲ್ ಅಲ್ಲಿ ವಿಡಿಯೋ ಮಾಡದೇ ಕ್ಯಾಮಾರಗಳಲ್ಲಿ ವಿಡಿಯೋಗ್ರಫಿ ಮಾಡಿದ್ದ ಡಿವಿಡಿಯನ್ನು ಆಯೋಗಕ್ಕೆ ಕಳುಹಿಸಿಕೊಡಬೇಕು. ಚಲನವಲನ ವೈಪಲ್ಯ ಮತ್ತು ಮೆದುಳಿನ ಪಾಶ್ರ್ವವಾಯು ಎದ್ದುಕಾಣುವ ಅಂಗವಿಕಲತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಪ್ರತಿ ಒಂದು ಗಂಟೆಯ ಪರೀಕ್ಷೆಗೆ ಹೆಚ್ಚುವರಿಯಾಗಿ 20 ನಿಮಿಷಗಳ ಕಾಲಾವಕಾಶ ನೀಡಬೇಕು ಎಂದರು.
ಪರೀಕ್ಷಾ ವೇಳಪಟ್ಟಿ: ಸೆ.18 ರ ಶನಿವಾರ ಬೆಳಿಗ್ಗೆ 10 ರಿಂದ 11.30 ರವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ವಿವರಣಾತ್ಮಕ ಸ್ವರೂಪದ ಮಾದರಿಯಲ್ಲಿ ನಡೆಯಲಿದೆ. ಸೆ.19 ರ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಬೆಳಿಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಜ್ಞಾನ, ಮಧ್ಯಾಹ್ನ 2 ರಿಂದ 3.30 ರವರೆಗೆ ಸಾಮಾನ್ಯ ಇಂಗ್ಲೀಷ್ ಪರೀಕ್ಷೆಗಳು ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆಯ ಸ್ವರೂಪದಲ್ಲಿ ನಡೆಯಲಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Webduniya Kannada

#Hashtags