Photo Credit: Instagram
ಬೆಂಗಳೂರು: ಕರಾವಳಿ ಮೂಲದ ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಪತಿ ಸುಮಂತ್ ರಿಂದ ವಿಚ್ಛೇದನ ಕೋರಿ ಶುಭಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
2022 ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಶುಭಾ ಮತ್ತು ಸುಮಂತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾದ ನಾಲ್ಕೇ ವರ್ಷಕ್ಕೆ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಶುಭಾ ಪೂಂಜಾ ಕಡೆಯಿಂದ ಸ್ಪಷ್ಟನೆ ಬಂದಿಲ್ಲ
ಅವರ ದಾಂಪತ್ಯ ಮುರಿದುಬೀಳಲು ನಿಜ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ಪರಸ್ಪರ ಒಟ್ಟಿಗೆ ಬಾಳಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಕಾರಣ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಶುಭಾ ಮತ್ತು ಉದ್ಯಮಿ ಸುಮಂತ್ ಬಿಲ್ಲವ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕವೂ ಇಬ್ಬರೂ ಚೆನ್ನಾಗಿಯೇ ಇದ್ದರು. ಕೆಲವು ಸಂದರ್ಶನಗಳಲ್ಲೂ ಇಬ್ಬರೂ ಭಾಗಿಯಾಗಿದ್ದರು. ಇದ್ದಕ್ಕಿದ್ದಂತೆ ಇಬ್ಬರ ನಡುವೆ ಬಿರುಕು ಮೂಡಲು ಕಾರಣವೇನು ಎಂಬುದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.

