ಬೆಂಗಳೂರು: ಯಶ್ ಮನೆಯಲ್ಲಿ ಇಲ್ಲದಿದ್ದರೂ ವರಮಹಾಲಕ್ಷ್ಮಿ ಹಬ್ಬ ಮನೆಯಲ್ಲಿ ನಡೆಯುತ್ತಿದ್ದಾಗ ಮಿಸ್ ಆಗದ ಹಾಗೆ ಪತ್ನಿ ರಾಧಿಕಾ ಪಂಡಿತ್ ನೋಡಿಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ಎಲ್ಲಾ ಹಬ್ಬಗಳನ್ನೂ ಭಕ್ತಿಯಿಂದ ಆಚರಿಸುತ್ತಾರೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನು ಯಶ್ ದಂಪತಿ ಜೊತೆಗೇ ಕೂತು ಪೂಜೆ ಮಾಡಿ ಭಕ್ತಿಯಿಂದ ನೆರವೇರಿಸುತ್ತಾರೆ.
ಟಾಕ್ಸಿಕ್ ಸಿನಿಮಾ ಬಿಡುಗಡೆ ನಿಮಿತ್ತ ಯಶ್ ಸತತ ಓಡಾಟದಲ್ಲಿದ್ದಾರೆ. ಹೀಗಾಗಿ ಈ ಬಾರಿ ಹಬ್ಬಕ್ಕೆ ಅವರು ಮನೆಯಲ್ಲಿರಲಿಲ್ಲ. ಆದರೆ ಯಶ್ ಗೆ ಮನೆಯ ಹಬ್ಬ ಮಿಸ್ ಆಗದ ಹಾಗೆ ರಾಧಿಕಾ ನೋಡಿಕೊಂಡಿದ್ದಾರೆ. ಮನೆಯಲ್ಲಿ ಲಕ್ಷ್ಮೀ ಪೂಜೆಯ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದು ಈ ಪೈಕಿ ಒಂದು ಫೋಟೋ ಎಲ್ಲರ ಗಮನ ಸೆಳೆದಿದೆ.
ರಾಧಿಕಾ ತಮ್ಮ ಇಬ್ಬರು ಮಕ್ಕಳೊಂದಿಗೆ ಕೂತು ಪೂಜೆ ಮಾಡಿದ್ದಾರೆ. ಈ ವೇಳೆ ಯಶ್ ಕೂಡಾ ವಿಡಿಯೋ ಕರೆಯಲ್ಲಿದ್ದು ಪೂಜೆಯ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆಗಿ ಬೆಳೆದರೂ ಕುಟುಂಬದ ವಿಚಾರಕ್ಕೆ ಬಂದರೆ ಯಶ್ ಅಪ್ಪಟ ಫ್ಯಾಮಿಲಿ ಮ್ಯಾನ್ ಎಂಬುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ.

