Dailyhunt
ನಟಿ ಅನಿತಾ ಭಟ್ ಈಗ "ಸಮುದ್ರಂ" ನಿರ್ಮಾಪಕಿ

ನಟಿ ಅನಿತಾ ಭಟ್ ಈಗ "ಸಮುದ್ರಂ" ನಿರ್ಮಾಪಕಿ

Cinisuddi 4 years ago

ಚಂದನವನದ ಪ್ರತಿಭಾನ್ವಿತ ನಟಿ ಅನಿತಾ ಭಟ್ ಮತ್ತೆ ಸಿನಿಮಾವೊಂದರ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಸದ್ದೇ ಇಲ್ಲದೆ ಒಂದು ಸಿನಿಮಾದ ಲೀಡ್ ರೋಲಿನಲ್ಲಿ ನಟಿಸಿರುವ ಅವರಿಗೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್ ನೀಡಿದ್ದಾರೆ.

ಕೊರೋನಾ ಕಾಲದಲ್ಲಿ ಆಸ್ಥೆಯಿಂದ ತಯಾರಿ ನಡೆಸಿ, ಕೊರೋನಾ ಅಬ್ಬರ ತುಸು ತಗ್ಗುತ್ತಲೇ ಈ ಸಿನಿಮಾದ ಚಿತ್ರೀಕರಣವನ್ನೂ ಪೂರ್ಣಗೊಳಿಸಿಕೊಳ್ಳಲಾಗಿದೆ.

ಚಿತ್ರದ ಟೈಟಲ್ ಅನ್ನು ಶ್ರೀಮುರುಳಿ ಲಾಂಚ್ ಮಾಡಿದ್ದಾರೆ. ಹಾಗೆ ಸಿನಿಮಾ ಪ್ರೇಮಿಗಳೆದುರು ತೆರೆದುಕೊಂಡಿರೋದು 'ಸಮುದ್ರಂ' ಎಂಬ ಸಮ್ಮೋಹಕ ಶೀರ್ಷಿಕೆ.

ಸಾಮಾನ್ಯವಾಗಿ ಸಿನಿಮಾ ಮುಹೂರ್ತದ ಆಸುಪಾಸಲ್ಲಿಯೇ ಟೈಟಲ್ ಲಾಂಚ್ ಮಾಡೋದು ರೂಢಿ. ಆದರೆ ಈ ಚಿತ್ರ ತಂಡ ಮಾತ್ರ ಆ ಪದ್ಧತಿಯನ್ನು ಬ್ರೇಕ್ ಮಾಡಿದೆ. ಚಿತ್ರೀಕರಣವೆಲ್ಲ ಸಂಪೂರ್ಣ ಮುಗಿದಾದ ನಂತರವೇ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನಿಟ್ಟುಕೊಂಡಿದೆ.

ಅಂದಹಾಗೆ, ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣ ಮಾಡಿರೋ ಚಿತ್ರ. ಇದಕ್ಕೆ ಅನಿತಾ ಭಟ್ ಕ್ರಿಯೇಷನ್ಸ್, ಡಾಟ್ ಟಾಕೀಸ್ ಸಹಯೋಗವಿದೆ. ಅನಿತಾ ಭಟ್ ಮತ್ತು ಶಿವಧ್ವಜ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಕಿಶೋರ್ ಮತ್ತು ಸ್ವಾತಿ ಬಂಗೇರ ಜೋಡಿ ಮತ್ತೆರಡು ಪ್ರಧಾನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಸಮುದ್ರಂ ಎಂಬ ಶೀರ್ಷಿಕೆಯೇ ಕಥೆಯ ಜಾಡನ್ನು ಕಡಲ ಕಿನಾರೆಯತ್ತ ಸರಿಸುವಂತಿದೆ. ಅದು ನಿಜವೂ ಹೌದು. ಯಾಕೆಂದರೆ, ಇದು ಕಡಲ ಕಿನಾರೆಯ ನಿಗೂಢ ಕಥಾ ಹಂದರವನ್ನೊಳಗೊಂಡಿರೋ ಚಿತ್ರ. ಕಡಲೆಂದರೆ ಬಹುತೇಕರ ಮನಸು ನೀಲಾಕಾಶದಂತೆ ಪ್ರಪುಲ್ಲವಾಗುತ್ತದಲ್ಲಾ? ಅದರ ಕಿನಾರೆಗಳಲ್ಲಿ ಮೈಚಾಚಿಕೊಂಡ ಭೂಗತ ಚಟುವಟಿಕೆಗಳ ಹೇಳ ಹೊರಟಿದೆ.

ಅಂಥಾದ್ದೇ ಒಂದು ರಸವತ್ತಾದ ಕಥೆ ಈ ಚಿತ್ರದಲ್ಲಿದೆಯಂತೆ. ಅದನ್ನು ನಿರ್ದೇಶನ ಮಾಡಿರುವವರು ರಾಘವ ಮಹರ್ಶಿ. ಶಿವಧ್ವಜ್ ಇಲ್ಲಿ ಡಾನ್ ಪಾತ್ರವನ್ನು ನಿರ್ವಹಿಸಿದ್ದರೆ, ಅನಿತಾ ಭಟ್ ಥರ ಥರದ ಶೇಡ್‌ಗಳಿರೋ ಸವಾಲಿನ ಪಾತ್ರವನ್ನು ನಿಭಾಯಿಸಿದ್ದಾರೆ. ಓರ್ವ ಗೃಹಿಣಿಯಾಗಿ, ಸಂದರ್ಭಾನುಸಾರ ರೆಬೆಲ್ ಆಗಿ ಈ ಸಮಾಜದೆದುರು ನಿಲ್ಲೋ ದಿಟ್ಟ ಹೆಣ್ಣಾಗಿಯೂ ಅವರು ನಟಿಸಿದ್ದಾರೆ.

ಉಡುಪಿ, ಮಲ್ಪೆ, ಬ್ರಹ್ಮಾವರ, ಸಕಲೇಶಪುರ ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಶರವೇಗದಲ್ಲಿ ಸಮುದ್ರಂ ಚಿತ್ರೀಕರಣ ಮುಗಿಸಿಕೊಳ್ಳಲಾಗಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಿನ ಕಾರ್ಯಚಟುವಟಿಕೆಗಳಿಗೂ ಚಾಲನೆ ಸಿಕ್ಕಿದೆ.

ಈ ಚಿತ್ರಕ್ಕೆ ರಾಘವ ಮಹರ್ಶಿ ನಿರ್ದೇಶನ, ಆಕಾಶ್ ಪರ್ವ ಅವರ ಸಂಗೀತ ನಿರ್ದೇಶನವಿದೆ. ಛಾಯಾಗ್ರಹಣ, ಸಂಕಲನ ಮಾತ್ರವಲ್ಲದೆ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ರಿಷಿಕೇಶ್ ನಿಭಾಯಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಮುದ್ರಂನ ಇನ್ನೊಂದಷ್ಟು ಅಚ್ಚರಿದಾಯಕ ಅಂಶಗಳು ಜಾಹೀರಾಗಿ, ಬಿಡುಗಡೆ ದಿನಾಂಕವೂ ಅನೌನ್ಸ್ ಆಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Cinisuddi