ಬೆಂಗಳೂರು, ಸೆ.11- ಶತಕ ದಾಟಿ ಮುನ್ನುಗ್ಗಿ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡುತ್ತಿ ರುವ ಪೆಟ್ರೋಲ್ ಬೆಲೆ ಏರಿಕೆ, ನಿರುದ್ಯೋಗ, ಅಗತ್ಯವಸ್ತುಗಳ ಬೆಲೆ ಹೆಚ್ಚಳ, ಕೋವಿಡ್ ನಿರ್ವಹಣೆ, ಲಸಿಕೆ ಕೊರತೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಹತ್ತಾರು ವಿಷಯಗಳನ್ನು ಇಟ್ಟುಕೊಂಡು ಸೋಮವಾರದಿಂದ ಆರಂಭವಾಗಲಿರುವ ಮಳೆಗಾಲದ ಅಧಿವೇಶನ ಮೊದಲ ದಿನವೇ ಸರ್ಕಾರದ ಮೇಲೆ ಪ್ರಹಾರ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್‌ಡೇಟ್ಸ್ ಓದಿ
ನೂತನ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅಧಿಕಾರಕ್ಕೇರಿದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಕಲಾಪ ನಡೆಯುತ್ತಿದ್ದು, ಒಟ್ಟು 10 ದಿನಗಳ ಕಾಲ ಸದನ ನಡೆಯಲಿದೆ.ಮೊದಲ ದಿನವೇ ಇಂಧನ ದರ ಏರಿಕೆ, ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣ ಕ್ರಮಗಳು ಸೇರಿದಂತೆ ಅನೇಕ ವಿಷಯಗಳನ್ನು ಇಟ್ಟುಕೊಂಡು ಸರಕಾರದ ಮೇಲೆ ದಾಳಿ ನಡೆಸಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಜ್ಜಾಗಿದ್ದು ಭಾರೀ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ.
ಇತ್ತ ಸರ್ಕಾರವು ವಿರೋಧ ಪಕ್ಷಗಳಿಗೆ ಪ್ರತ್ಯುತ್ತರ ನೀಡಲು ಸಜ್ಜಾಗಿದೆ. ಮೈಸೂರಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ಮೇಲೆ ನಡೆದ ಸಮೂಹಿಕ ಅತ್ಯಾಚಾರ ಪ್ರಕರಣ, ಸರ್ಕಾರ ಇದನ್ನು ನಿರ್ವಹಿಸಿದ ರೀತಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ವಿವಾದಾತ್ಮಕ ಹೇಳಿಕೆ, ಕುಸಿದು ಬಿದ್ದ ಕಾನೂನು ಸುವ್ಯವಸ್ಥೆ, ಜೊತೆಗೆ ಗೃಹ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯ ಮಾಡುವ ಸಾಧ್ಯತೆಗಳಿವೆ.
ಅಧಿವೇಶನದಲ್ಲಿ ಬಿಜೆಪಿ ಮುಂದಿಡಲು ಕಾಂಗ್ರೆಸ್ ಪ್ರಶ್ನೆಗಳ ಅಸ್ತ್ರದೊಂದಿಗೆ ತಯಾರಿ ನಡೆಸಿದೆ. ಆದರೆ, ಕಲಾಪ ಕೇವಲ ಹತ್ತು ದಿನ ಮಾತ್ರ ನಡೆಯಲಿದ್ದು, ನಿಲುವಳಿ ಸೂಚನೆ ಸೇರಿದಂತೆ ಯಾವುದೇ ವಿಚಾರ ಪ್ರಸ್ತಾಪ ಮಾಡುವುದಿದ್ದರೂ ಅದು ಮಧ್ಯಾಹ್ನನಂತರದ ಕಲಾಪದಲ್ಲೇ ಮಾಡಬೇಕು ಎಂಬ ನಿಯಮ ಜÁರಿಗೊಳಿಸಿರುವುದರಿಂದ ಉದ್ದೇಶಿತ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸುವುದು ಕಷ್ಟಸಾಧ್ಯ. ಹೀಗಾಗಿ ಆದ್ಯತಾ ಪಟ್ಟಿಯೊಂದನ್ನೂ ಅದು ಸಿದ್ಧಮಾಡಿಕೊಂಡಿದೆ.
ಇಂಧನಗಳ ಮೇಲೆ ಕೇಂದ್ರ ಸರಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದು, ಅದನ್ನು ಕಡಿತಗೊಳಿಸುವ ಮೂಲಕ ಜನಸಾಮಾನ್ಯರ ಮೇಲೆ ಆಗುತ್ತಿರುವ ಹೊರೆ ಕಡಿಮೆ ಮಾಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಲಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ದುಬಾರಿ ಇಲ್ಲದಿದ್ದರೂ ಭಾರಿ ಏರಿಕೆ ಕಾಣುತ್ತಿರುವುದನ್ನು ಪ್ರಶ್ನಿಸಿ ವಾಗ್ದಾಳಿ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಜೆಡಿಎಸ್ ನಡೆ ನಿಗೂಢ: ಇತ್ತೀಚೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಸಿಎಂ ಬಸವರಾಜ ಬೊಮ್ಮಯಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಭೇಟಿ ಬಗ್ಗೆ ಮಾತನಾಡಿದ್ದ ಬೊಮ್ಮಯಿ ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ ಎಂದು ಹೇಳಿದ್ದರು. ಆದರೆ ಈ ಭೇಟಿ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರ್ಕಾರದ ಮೇಲೆ ಮೃದುಧೋರಣೆ ಹೊಂದಿದ್ದರಾ ಎನ್ನುವ ಅನುಮಾನ ಕಾಡುತ್ತಿದೆ.
ಅಧಿವೇಶನದ ಬಗ್ಗೆ ಕುಮಾರಸ್ವಾಮಿ ಏನನ್ನೂ ಮಾತನಾಡುತ್ತಿಲ್ಲ. ಸರ್ಕಾರದ ವೈಫಲ್ಯದ ಪ್ರಶ್ನೆ ಬಗ್ಗೆ ಅವರು ಇತ್ತೀಚೆಗೆ ಪ್ರಶ್ನೆ ಮಾಡಿಲ್ಲ. ಸದನದಲ್ಲಿ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ನಾಯಕರ ಜೊತೆ ಚರ್ಚಿಸಿಲ್ಲ. ಈ ಅಧಿವೇಶನದ ಸಮಯದಲ್ಲಿ ಬಿಜೆಪಿ ಪಾಳಯದಲ್ಲಿ ಸದನದಲ್ಲಿ ಹಾಜರಾಗಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ಅಧಿವೇಶನದ ನಂತರ ನಡೆಯುವ ಸಂಪುಟ ವಿಸ್ತರಣೆಯ ಬಗ್ಗೆಯೇ ಸದಸ್ಯರು ಹೆಚ್ಚು ತಲೆ ಕೆಡಿಸಕೊಳ್ಳುವ ಸಾಧ್ಯತೆ ಇದೆ.
# ಮಂಡನೆಯಾಗಲಿರುವ ವಿಧೇಯಕಗಳು:
1. ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ-2021.
2. ಕಳ್ಳಭಟ್ಟಿ ವ್ಯಾಪಾರಿಗಳ, ಮಾದಕವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಹಾಗೂ ದೃಶ್ಯ ಅಥವಾ ಧ್ವನಿ (ವಿಡಿಯೋ ಅಥವಾ ಆಡಿಯೋ) ಕಳ್ಳಮುದ್ರಕರ ಚಟುವಟಿಕೆಗಳ ಪ್ರತಿಬಂಧಕ (ತಿದ್ದುಪಡಿ) ವಿಧೇಯಕ-2021.
3. ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ-2021.
4. ದಂಡ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ-2021.
5. ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ- 2021.
6. ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ- 2021.
7. ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ- 2021.
8. ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ- 2021.
9. ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೆ ತಿದ್ದುಪಡಿ) ವಿಧೇಯಕ- 2021.
10. ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ- 2021.
ಕಳೆದ ಅಧಿವೇಶನದ ನಂತರ ಸರ್ಕಾರದಿಂದ ಹೊರಡಿಸಲಾಗಿರುವ ಆದ್ಯಾದೇಶಗಳು:
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಆದ್ಯಾದೇಶ-2021 (2021ರ ಕರ್ನಾಟಕ ಅಧ್ಯಾದೇಶ ಸಂಖ್ಯೆ-04)
ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ಆದ್ಯಾದೇಶ-2021 (2021ರ ಕರ್ನಾಟಕ ಆದ್ಯಾದೇಶ ಸಂಖ್ಯೆ-05 ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಆದ್ಯಾದೇಶ- 2021 (2021ರ ಕರ್ನಾಟಕ ಅಧ್ಯಾದೇಶ ಸಂಖ್ಯೆ-06)ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೆ ತಿದ್ದುಪಡಿ) ಆದ್ಯಾದೇಶ-2021 (2021ರ ಕರ್ನಾಟಕ ಆದ್ಯಾದೇಶ ಸಂಖ್ಯೆ-06) ವಿಧಾನಸಭೆಯಲ್ಲಿ ಮಂಡನೆಯಾಗಿ ಪರ್ಯಾಲೋಚನೆ ಮತ್ತು ಅಂಗೀಕಾರಕ್ಕೆ ಬಾಕಿ ಇರುವ ವಿಧೇಯಕಗಳು.
ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ, ಕರ್ನಾಟಕ ಲೋಕಾಯುಕ್ತ (ಮೂರನೆ ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ.

