Freedom Festival in Bengaluru
ಬೆಂಗಳೂರು, ಅ.15- ಎಂಬತ್ತನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಫ್ರೀಡಂ ಹಬ್ಬಕ್ಕೆ ಅದ್ದೂರಿ ಚಾಲನೆ ದೊರೆತಿದೆ.ಬೆಳಿಗ್ಗೆ 11 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಿದ್ದು, ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ ಅವರು ಸ್ವಾತಂತ್ರ್ಯ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಸಾರ್ವಜನಿಕರು ಭಾಗವಹಿಸಿದ್ದಾರೆ. ವಿಧಾನಸೌಧ, ಕಬ್ಬನ್ ಪಾರ್ಕ್, ಕೆ.ಆರ್. ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಜನಜಂಗುಳಿಯಿಂದ ಕೂಡಿದ್ದು, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಹಾಗೂ ವಿವಿಧ ಬೀದಿ ಚಿತ್ರಗಳಿಂದ ರಸ್ತೆಗಳು ಅಲಂಕರಿಸಲ್ಪಟ್ಟಿವೆ.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.ನಾಗರಿಕರು ಸ್ವಾತಂತ್ರ್ಯ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಭಾರತದ ವೈವಿಧ್ಯಮಯ ಸಂಸ್ಕೃತಿ ಹಾಗೂ ಕರ್ನಾಟಕದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಸುಮಾರು 25 ಕಲಾತಂಡಗಳ ವರ್ಣರಂಜಿತ ಪೆರೇಡ್, ಜಾನಪದ ಪ್ರದರ್ಶನ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.
ಮಕ್ಕಳಿಗಾಗಿ ಸಂವಾದಾತ್ಮಕ ಆಟಗಳು, ಕಥೆ ಹೇಳುವಿಕೆ, ಕಲೆ ಮತ್ತು ಕರಕುಶಲ ಚಟುವಟಿಕೆಗಳು, ಸೃಜನಶೀಲ ಕಾರ್ಯಾಗಾರಗಳು ಹಾಗೂ ಕುಟುಂಬ ಚಟುವಟಿಕೆಗಳನ್ನು ಒಳಗೊಂಡ ಮಕ್ಕಳ ಮೇಳವನ್ನು ಆಯೋಜಿಸಲಾಗಿದೆ. ಅಂಬೇಡ್ಕರ್ ಬೀದಿಯಲ್ಲಿ ಜೀವನಶೈಲಿ ಉತ್ಪನ್ನಗಳು, ಕರಕುಶಲ ವಸ್ತುಗಳು, ಜೈವಿಕ ಉಡುಪುಗಳು, ಆಟಿಕೆಗಳು, ಜವಳಿ ಮತ್ತು ಆಹಾರ ಸೇರಿದಂತೆ 120ಕ್ಕೂ ಹೆಚ್ಚು ಸಂತೆ ಮಳಿಗೆಗಳನ್ನು ತೆರೆಯಲಾಗಿದೆ.
ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ಪರಿಚಯಿಸುವ ಒಂಬತ್ತು ವಿಭಾಗಗಳ ಸ್ವಾತಂತ್ರ್ಯ ಪಯಣ ಮತ್ತು ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ವಾಕಿಂಗ್ ಮ್ಯೂಸಿಯಂ ಕೂಡ ಸಾರ್ವಜನಿಕರ ಗಮನ ಸೆಳೆಯಲಿದೆ. ಮಕ್ಕಳಿಗಾಗಿ 20ರಿಂದ 25 ಜನರ ಗುಂಪಿನಲ್ಲಿ ಮಾರ್ಗದರ್ಶಕರೊಂದಿಗೆ ವಿಧಾನಸೌಧದ ವಿಧಾನಸಭಾ ಪ್ರವಾಸಕ್ಕೂ ಅವಕಾಶ ಕಲ್ಪಿಸಲಾಗಿದೆ.
ಸಂಜೆ ನಡೆಯಲಿರುವ ಸಂಗೀತ ರಸಸಂಜೆಯಲ್ಲಿ ಸಂಜಿತ್ ಹೆಗ್ಡೆ, ಬ್ರೋಧಾ ವಿ, ರಘು ದೀಕ್ಷಿತ್, ಸಿದ್ಧಾರ್ಥ ಬೆಳಮಣ್ಣು, ವರಿಜಾಶ್ರೀ ವೇಣುಗೋಪಾಲ್, ಹರೀಶ್ ಶಿವರಾಮಕೃಷ್ಣನ್, ಪ್ರವೀಣ್ ರಾವ್, ಎಂ.ಡಿ. ಪಲ್ಲವಿ, ನಕುಲ್ ಅಭ್ಯಂಕರ್ ಹಾಗೂ ಬ್ರೂಸ್ ಲೀ ಮಣಿ ಸೇರಿದಂತೆ ಹಲವು ಕಲಾವಿದರು ಭಾಗವಹಿಸಲಿದ್ದಾರೆ.
ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸಾಮೂಹಿಕ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಬೀದಿ ರಸ್ತೆಯನ್ನು ಬೆಳಗ್ಗೆ 11 ಗಂಟೆಯಿಂದ ಬಂದ್ ಮಾಡಲಾಗಿದ್ದು, ಜಿಓಪಿ ವೃತ್ತ, ಕೆ.ಆರ್. ಸರ್ಕಲ್ ಹಾಗೂ ಕಬ್ಬನ್ ಪಾರ್ಕ್ ಹೈಕೋರ್ಟ್ ಗೇಟ್ ಮಾರ್ಗಗಳಿಂದ ಮಾತ್ರ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ.
ಒಟ್ಟು 18 ಪ್ರವೇಶ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ವಿಧಾನಸೌಧ ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದ್ದು, ವಿಶ್ವೇಶ್ವರಯ್ಯ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ಮೂಲಕ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬಹುದಾಗಿದೆ.ಕಾರ್ಯಕ್ರಮದ ಭದ್ರತೆಗಾಗಿ ಸಿವಿಲ್ ಪೊಲೀಸ್ ಹಾಗೂ ಕೆಎಸ್‌ಆರ್‌ಪಿ ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಧಾನಸೌಧ ಪ್ರವೇಶಿಸುವವರಿಗೆ ಬಣ್ಣದ ಸಂಕೇತ ಹೊಂದಿರುವ ಟ್ಯಾಗ್‌ಗಳನ್ನು ನೀಡಲಾಗುತ್ತಿದೆ.ಸಾರ್ವಜನಿಕರ ಅನುಕೂಲಕ್ಕಾಗಿ 80 ಜೈವಿಕ ಶೌಚಾಲಯಗಳು, ಕುಡಿಯುವ ನೀರಿನ ಕೌಂಟರ್‌ಗಳು, ಸ್ವಯಂಸೇವಕರು, ಹೆಚ್ಚುವರಿ ಮೆಟ್ರೋ ಮತ್ತು ಬಸ್ ಸೇವೆ ಹಾಗೂ ನಿಗದಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಅಗ್ನಿಶಾಮಕ ವಾಹನಗಳು, ಎರಡು ಪ್ರಥಮ ಚಿಕಿತ್ಸಾ ಕೇಂದ್ರಗಳು ಹಾಗೂ ನಗರದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಂಬ್ಯುಲೆನ್‌್ಸಗಳನ್ನು ನಿಯೋಜಿಸಲಾಗಿದೆ.
ಮಹಿಳೆಯರಿಗಾಗಿ ಸಹಾಯ ಕೇಂದ್ರ, ಶಿಶುಗಳಿಗೆ ಹಾಲುಣಿಸುವ ಕೊಠಡಿ ಹಾಗೂ ವಿಶ್ರಾಂತಿ ಮತ್ತು ಸ್ಯಾನಿಟರಿ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಫ್ರೀಡಂ ಹಬ್ಬದ ಸಂಪೂರ್ಣ ಕಾರ್ಯಕ್ರಮವನ್ನು ಯೂಟ್ಯೂಬ್ ಲೈವ್ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ವಿಧಾನಸೌಧದ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನೂ ಅಳವಡಿಸಲಾಗಿದೆ.ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರು, ಅ.15- ಎಂಬತ್ತನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಫ್ರೀಡಂ ಹಬ್ಬಕ್ಕೆ ಅದ್ದೂರಿ ಚಾಲನೆ ದೊರೆತಿದೆ.ಬೆಳಿಗ್ಗೆ 11 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಿದ್ದು, ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಾತಂತ್ರ್ಯ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.

