Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಲ್ಲಿ ನೆಲೆಸಿದ್ದ 39 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಗಡಿಪಾರು..!

ಬೆಂಗಳೂರಲ್ಲಿ ನೆಲೆಸಿದ್ದ 39 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಗಡಿಪಾರು..!

ಬೆಂಗಳೂರು, ಆ.31- ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರೆಂದು ಗುರುತಿಸಲಾದ 39 ಬಾಂಗ್ಲಾದೇಶಿ ಪ್ರಜೆಗಳನ್ನು ಬೆಂಗಳೂರು ಪೊಲೀಸರು ಬಿಗಿ ಭದ್ರತೆಯಲ್ಲಿ ಗಡಿಪಾರು ಪ್ರಕ್ರಿಯೆಗಾಗಿ ಕರೆದೊಯ್ದಿದ್ದಾರೆ.ಬೈಯಪ್ಪನಹಳ್ಳಿಯ ಎಸ್‌ಎಂವಿಟಿ ರೈಲ್ವೆ ಟರ್ಮಿನಲ್‌ನಿಂದ 31 ಮಂದಿಯನ್ನು ರೈಲಿನ ಮೂಲಕ ಹಾಗೂ 8 ಮಂದಿಯನ್ನು ವಿಮಾನದ ಮೂಲಕ ಪಶ್ಚಿಮ ಬಂಗಾಳದ ಗಡಿ ಭಾಗಕ್ಕೆ ಕರೆದೊಯ್ಯಲಾಗುತ್ತಿದೆ.

ಅಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆಗಳು ಮುಂದುವರಿದಿವೆ.

ವೀಸಾ ಅವಧಿ ಮುಗಿದಿದ್ದರೂ ಅಥವಾ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಮಿಕರು ಹಾಗೂ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದವರನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರಿನ ವಿವಿಧ 10 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ವಲಸಿಗರೆಂದು ಗುರುತಿಸಲಾದ 39 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು.

20ಕ್ಕೂ ಹೆಚ್ಚು ಪೊಲೀಸರ ಕಾವಲು

ಬಂಧಿತರನ್ನು ಎಸ್‌ಎಂವಿಟಿ ರೈಲ್ವೆ ಟರ್ಮಿನಲ್‌ನಿಂದ ಪಶ್ಚಿಮ ಬಂಗಾಳದ ಮಾಲ್ದಾ ಗಡಿ ಭಾಗದವರೆಗೆ ಸುಮಾರು 20ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯ ಕಾವಲಿನಲ್ಲಿ ಕರೆದೊಯ್ಯಲಾಗುತ್ತಿದೆ.ಮಾಲ್ದಾ ಗಡಿ ಭಾಗ ತಲುಪಿದ ಬಳಿಕ ಅಲ್ಲಿನ ಗಡಿ ಭದ್ರತಾ ಪಡೆ ಹಾಗೂ ವಲಸೆ (ಇಮಿಗ್ರೇಷನ್‌) ಅಧಿಕಾರಿಗಳ ಸಹಯೋಗದಲ್ಲಿ ಬಂಧಿತರ ರಾಷ್ಟ್ರೀಯತೆ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ, ನಿಯಮಾನುಸಾರ ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಅಕ್ರಮ ವಲಸೆ ವಿರುದ್ಧ ಕಣ್ಗಾವಲು

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಿ ಗಡಿಪಾರು ಮಾಡಿರುವ ಹಲವು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಎಲೆಕ್ಟ್ರಾನಿಕ್‌ ಸಿಟಿ, ಮಹದೇವಪುರ, ವರ್ತೂರು ಹಾಗೂ ರಾಮಮೂರ್ತಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿ, ಅಕ್ರಮ ದಾಖಲೆಗಳನ್ನು ಹೊಂದಿರುವ ಆರೋಪದ ಮೇಲೆ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು. ಅಕ್ರಮ ವಲಸೆ ತಡೆಯಲು ರಾಜ್ಯದ ವಿವಿಧ ಭದ್ರತಾ ಏಜೆನ್ಸಿಗಳು ತನಿಖೆ ಹಾಗೂ ಕಣ್ಗಾವಲನ್ನು ಮುಂದುವರಿಸಿವೆ.

ಗಡಿಪಾರು ಕ್ರಮಕ್ಕೆ ವೇಗ

ಕರ್ನಾಟಕದಲ್ಲಿ ಅಕ್ರಮ ವಲಸಿಗರ ವಿರುದ್ಧದ ಕ್ರಮವನ್ನು ಈ ವರ್ಷ ಮತ್ತಷ್ಟು ಚುರುಕುಗೊಳಿಸಲಾಗಿದೆ. ರಾಜ್ಯ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2026ರ ಏಪ್ರಿಲ್‌ ಅಂತ್ಯದ ವೇಳೆಗೆ 427 ವಿದೇಶಿ ಪ್ರಜೆಗಳನ್ನು ಕರ್ನಾಟಕದಿಂದ ಗಡಿಪಾರು ಮಾಡಲಾಗಿತ್ತು. ಇವರಲ್ಲಿ 286 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಎಂದು ತಿಳಿಸಲಾಗಿತ್ತು. 2025ರಲ್ಲಿ 401 ಹಾಗೂ 2024ರಲ್ಲಿ 339 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿತ್ತು ಎಂದು ಸರ್ಕಾರದ ಅಂಕಿ-ಅಂಶಗಳು ಹೇಳುತ್ತವೆ.

ಇದೇ ವೇಳೆ, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ 911 ಅಕ್ರಮ ವಲಸಿಗರನ್ನು ಗುರುತಿಸಲಾಗಿದ್ದು, ಅವರಲ್ಲಿ 868 ಮಂದಿ ಬಾಂಗ್ಲಾದೇಶದವರು ಎಂದು ರಾಜ್ಯ ಸರ್ಕಾರದ ಮಾಹಿತಿ ತಿಳಿಸಿದೆ. ಈ ಪೈಕಿ 365 ಮಂದಿ ಅಪರಾಧ ಪ್ರಕರಣಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ.

ಬೆಂಗಳೂರಿನಿಂದ ಮಾಲ್ದಾಕ್ಕೆ ಕರೆದೊಯ್ಯಲಾಗಿರುವ 39 ಮಂದಿಯ ಪ್ರಕರಣದಲ್ಲಿ ಅವರ ರಾಷ್ಟ್ರೀಯತೆ, ದಾಖಲೆಗಳು ಹಾಗೂ ಭಾರತದಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದರೇ ಎಂಬುದರ ಅಂತಿಮ ಪರಿಶೀಲನೆ ಪ್ರಮುಖ ಹಂತವಾಗಲಿದೆ. ಬಳಿಕ ಭಾರತ ಮತ್ತು ಬಾಂಗ್ಲಾದೇಶದ ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದಲ್ಲಿ ನಿಯಮಾನುಸಾರ ಹಸ್ತಾಂತರ ಅಥವಾ ಗಡಿಪಾರು ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಬೆಂಗಳೂರು, ಆ.31- ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರೆಂದು ಗುರುತಿಸಲಾದ 39 ಬಾಂಗ್ಲಾದೇಶಿ ಪ್ರಜೆಗಳನ್ನು ಬೆಂಗಳೂರು ಪೊಲೀಸರು ಬಿಗಿ ಭದ್ರತೆಯಲ್ಲಿ ಗಡಿಪಾರು ಪ್ರಕ್ರಿಯೆಗಾಗಿ ಕರೆದೊಯ್ದಿದ್ದಾರೆ.ಬೈಯಪ್ಪನಹಳ್ಳಿಯ ಎಸ್‌ಎಂವಿಟಿ ರೈಲ್ವೆ ಟರ್ಮಿನಲ್‌ನಿಂದ 31 ಮಂದಿಯನ್ನು ರೈಲಿನ ಮೂಲಕ ಹಾಗೂ 8 ಮಂದಿಯನ್ನು ವಿಮಾನದ ಮೂಲಕ ಪಶ್ಚಿಮ ಬಂಗಾಳದ ಗಡಿ ಭಾಗಕ್ಕೆ ಕರೆದೊಯ್ಯಲಾಗುತ್ತಿದೆ. ಅಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje