ಬೆಂಗಳೂರು, ಸೆ.7- ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರು ರಸ್ತೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ಮುಂದಾದಾಗ ಆಯತಪ್ಪಿ ನೆಲಕ್ಕುರುಳಿ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ರಾತ್ರಿ 9.30ರ ಸುಮಾರಿನಲ್ಲಿ ಖುರ್ಷಿದ್ ಅಹಮ್ಮದ್ ಅವರು ವಿಶ್ವೇಶ್ವರಯ್ಯ ಲೇಔಟ್, 3ನೆ ಬ್ಲಾಕ್‍ನ ಮಂಗಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.
ಆ ಸಂದರ್ಭದಲ್ಲಿ ಮಳೆ ಬರುತ್ತಿತ್ತು. ಈ ಮಾರ್ಗದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಸಲುವಾಗಿ ಮಣ್ಣನ್ನು ತೆಗೆದು ರಸ್ತೆ ಮೇಲೆ ಹಾಕಲಾಗಿತ್ತು.
ವಾಹನ ಚಲಾಯಿಸಿಕೊಂಡು ಈ ಮಾರ್ಗವಾಗಿ ಖುರ್ಷಿದ್ ಅಹಮ್ಮದ್ ಬರುತ್ತಿದ್ದಾಗ ರಸ್ತೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ಮುಂದಾಗುತ್ತಿದ್ದಂತೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಗಂಭೀರ ಗಾಯಗೊಂಡ ಖುರ್ಷಿದ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

