Dailyhunt
ಗಣೇಶೋತ್ಸವ ಮೂರು ದಿನಕ್ಕೆ ಮಾತ್ರ ಸೀಮಿತ: ಬಿಬಿಎಂಪಿಯಿಂದ ಹೊಸ ಆದೇಶ

ಗಣೇಶೋತ್ಸವ ಮೂರು ದಿನಕ್ಕೆ ಮಾತ್ರ ಸೀಮಿತ: ಬಿಬಿಎಂಪಿಯಿಂದ ಹೊಸ ಆದೇಶ

ಈ ಸಂಜೆ 4 years ago

ಬೆಂಗಳೂರು, ಸೆ.7- ಸಂಭಾವ್ಯ ಕೋವಿಡ್ ಮೂರನೆ ಅಲೆ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಯನ್ನು ಈ ಬಾರಿ ಮೂರು ದಿನಕ್ಕೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸಭೆ ನಡೆಸಿ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಗಣೇಶೋತ್ಸವ ಮಾರ್ಗಸೂಚಿಗಳ ವಿವರಗಳನ್ನು ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಕೇವಲ ನಾಲ್ಕು ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮನೆಗಳಲ್ಲಿ ಎರಡು ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಸೂಚಿಸಿರುವ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಿಸುವ ಸಂಬಂಧ ಪಾಲಿಕೆ ಆಯ್ದ ಕೆರೆಗಳ ಅಂಗಳದಲ್ಲಿರುವ ಕಲ್ಯಾಣಿ, ನಿರ್ಮಿಸುವ ಹೊಂಡಗಳಲ್ಲಿ ಬೆಳಗ್ಗೆಯಿಂದ ರಾತ್ರಿ 9ರ ವರೆಗೆ ವಿಸರ್ಜನೆ ಮಾಡಲು ಅನುಮತಿ ನೀಡಲಾಗಿದೆ ಎಂದಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವ ನಾಲ್ಕು ಅಡಿ ಗಣೇಶ ಮೂರ್ತಿಗಳಿಗೆ ಮಾತ್ರ ಕಲ್ಯಾಣಿ, ಹೊಂಡಗಳಲ್ಲಿ ವಿಸರ್ಜನೆ ಮಾಡಲು ಅನುಮತಿ ನೀಡಲಾಗುವುದು. ಯಾವುದೇ ಸಮಸ್ಯೆಯಾಗದಂತೆ ಕಲ್ಯಾಣಿ, ಹೊಂಡಗಳ ಬಳಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗುತ್ತದೆ. ಗಣೇಶ ವಿಸರ್ಜನೆ ಮಾಡಲು ಸಂಘ- ಸಂಸ್ಥೆಗಳು, ಸಾರ್ವಜನಿಕರಿಗೆ ನೇರವಾಗಿ ಅನುಮತಿ ನೀಡುವುದಿಲ್ಲ. ಪಾಲಿಕೆ ವತಿಯಿಂದ ಈಜುಗಾರರನ್ನು ನಿಯೋಜನೆ ಮಾಡಲಾಗಿರುತ್ತದೆ. ವಿಸರ್ಜನೆ ಮಾಡಲು ತಂದ ಗಣೇಶ ಮೂರ್ತಿಗಳನ್ನು ಬ್ಯಾರಿಕೇಡ್ ಬಳಿ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸೂಕ್ತ ಭದ್ರತೆ, ನಿರ್ವಹಣೆ ಮಾಡಲು ಎಲ್ಲಾ ಕಡೆ ಪೊಲೀಸ್ ಅಧಿಕಾರಿಗಳು ಹಾಗೂ ಪಾಲಿಕೆ ಅಭಿಯಂತರರು ಉಪಸ್ಥಿತರಿರಲಿದ್ದಾರೆ. ಗಣೇಶ ಮೂರ್ತಿ ವಿಸರ್ಜನಾ ಸ್ಥಳದಲ್ಲಿ ಯಾವುದೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡದೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದ್ದಾರೆ. ಮನೆಗಳಲ್ಲಿಡುವ ಗಣೇಶ ಮೂರ್ತಿಗಳನ್ನು ಆಯಾ ವಾರ್ಡ್ ಮೊಬೈಲ್ ಟ್ಯಾಂಕರ್ ನಲ್ಲೇ ವಿಸರ್ಜಿಸಲು ಅವಕಾಶ ಕಲ್ಪಿಸಲಾಗಿದ್ದು, ಅಲ್ಲೇ ವಿಸರ್ಜನೆ ಮಾಡಲು ಸಾರ್ವಜನಿಕರಲ್ಲಿ ಕೋರಿದ್ದಾರೆ. ಸಾರ್ವಜನಿಕರು ಒಂದು ಸಮಯಕ್ಕೆ 20 ಜನ ಮಾತ್ರ ಪೂಜೆ ಮಾಡುವ ಸ್ಥಳದಲ್ಲಿರುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದೂ ಉಲ್ಲೇಖಿಸಲಾಗಿದೆ.

ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ಉಲ್ಲಂಘನೆ ಮಾಡಿದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗುಪ್ತ ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje