Information collection for Grihalakshmi/Griha Jyoti scheme, people are worried
ಬೆಂಗಳೂರು, ಜು.2- ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗೆ ಅನರ್ಹರನ್ನು ಗುರುತಿಸುವ ನೆಪದಲ್ಲಿ ಸಂಗ್ರಹಿಸಲಾಗುತ್ತಿರುವ ಮಾಹಿತಿಗಳು ಮುಂದಿನ ದಿನಗಳಲ್ಲಿ ತೊಂದರೆಯುಂಟು ಮಾಡಬಹುದು ಎಂಬ ಗಲಿಬಿಲಿ ಶ್ರೀಸಾಮಾನ್ಯರನ್ನು ಕಾಡಲಾರಂಭಿಸಿದೆ.
ಗೃಹಜ್ಯೋತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಂಗ್ರಹಿಸ ಲಾಗುತ್ತಿರುವ ಮಾಹಿತಿ ಗಳಲ್ಲಿ ಸರ್ಕಾರಿ ನೌಕ ರರೇ?, ಖಾಸಗಿ ನೌಕರರೇ?, ಆದಾಯ ತೆರಿಗೆ ಪಾವತಿದಾರರೇ? ಎಂಬೆಲ್ಲಾ ಪ್ರಶ್ನೆಗಳಿವೆ. ಜೊತೆಗೆ ಜಾತಿ ಮತ್ತು ಆದಾಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸಂಗ್ರಹಿಸುತ್ತಿರುವುದು ಆತಂಕ ಸೃಷ್ಟಿಸುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ಎಂದೂ ಮಾಹಿತಿ ಕೇಳದೆ ಸಾರಾಸಗಟಾಗಿ ಗ್ಯಾರಂಟಿಗಳ ಸೌಲಭ್ಯ ಕೊಡಲಾಗಿತ್ತು. ರಾಜ್ಯದಲ್ಲಿ ನಾಯಕತ್ವ ಬದಲಾಗುತ್ತಿದ್ದಂತೆ ಯೋಜನೆಯ ಫಲಾನುಭವಿಗಳ ಪರಿಷ್ಕರಣೆಗೆ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.ಜಾತಿಗೆ ಸಂಬಂಧಪಟ್ಟಂತೆ ಯಾವುದೇ ಪ್ರಮಾಣಪತ್ರ ಸಲ್ಲಿಸಬೇಕಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಹಾಗಿದ್ದ ಮೇಲೆ ಮಾಹಿತಿಯ ನಮೂನೆಯಲ್ಲಿ ಜಾತಿಯ ಕಾಲಂ ಇರಿಸಿರುವುದೇಕೆ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ಸರ್ಕಾರಿ ನೌಕರರಲ್ಲಿ ಬಹುತೇಕರು ಆದಾಯ ತೆರಿಗೆ ಪಾವತಿದಾರರಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಮಾತ್ರ ಆದಾಯ ತೆರಿಗೆ ಪಾವತಿದಾರರಾಗಿರಬಾರದು ಮತ್ತು ಜಿಎಸ್‌ಟಿ ನೋಂದಣಿ ಸಂಖ್ಯೆ ಹೊಂದಿರಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಗೃಹಜ್ಯೋತಿಗೆ ಯಾವುದೇ ಷರತ್ತುಗಳಿಲ್ಲದೇ ಸರ್ಕಾರ ಜಾರಿ ಮಾಡಿತ್ತು. ಈಗ ಮಾಹಿತಿ ಕೇಳುವ ಮೂಲಕ ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿದಾರರಿಗೆ ತೊಂದರೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿರಬಹುದೇ ಎಂಬ ಅನುಮಾನ ಕಾಡಲಾರಂಭಿಸಿದೆ.
2023ರ ಚುನಾವಣೆಯ ಸಂದರ್ಭದಲ್ಲಿ ಕಾಕಾಸಾಹೇಬ್‌ಗೂ ಫ್ರೀ, ನನಗೂ ಫ್ರೀ, ನಿನಗೂ ಫ್ರೀ ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು ಮೂರು ವರ್ಷ ಅದೇ ರೀತಿ ನಡೆದುಕೊಂಡರು. ಆದರೆ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾಗುತ್ತಿದ್ದಂತೆ ನಾನಾ ರೀತಿಯ ಸರ್ಕಸ್‌ಗಳು ನಡೆಯಲಾರಂಭಿಸಿವೆ.
ಯೋಜನೆ ಪರಿಷ್ಕರಣೆ ಮಾಡುವುದು ಒಂದೆಡೆಯಾದರೆ, ಸರ್ಕಾರ ಸಂಗ್ರಹಿಸುತ್ತಿರುವ ಮಾಹಿತಿಗಳು, ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆರಂಭದಲ್ಲೇ ಈ ರೀತಿಯ ಮಾಹಿತಿಗಳನ್ನು ಕೇಳಿದ್ದರೆ ಆಸಕ್ತರು ಅಥವಾ ಅರ್ಹರು ಸೌಲಭ್ಯ ಪಡೆಯಬೇಕೇ? ಅಥವಾ ಬೇಡವೇ? ಎಂದು ನಿರ್ಧರಿಸುತ್ತಿದ್ದರು. ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು ಗ್ಯಾರಂಟಿಗಳನ್ನು ಬಹುಶಃ ತ್ಯಾಗ ಮಾಡಬಹುದಿತ್ತು.ರಾಜಕೀಯ ಲಾಭಕ್ಕಾಗಿ ಭರವಸೆಗಳನ್ನು ಕೊಟ್ಟು, ಈಗ ಪರಿಷ್ಕರಣೆಯ ನೆಪದಲ್ಲಿ ಅನಪೇಕ್ಷಣೀಯ ಮಾಹಿತಿ ಕೇಳುತ್ತಿರುವುದೇಕೆ? ಎಂದು ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲವಡೆ ಸರ್ಕಾರ ಕೇಳಿದ ಮಾಹಿತಿಗಳನ್ನು ನೀಡದೆ ಫಲಾನುಭವಿಗಳು ತಗಾದೆ ತೆಗೆದಿದ್ದಾರೆ. ವಿದ್ಯುತ್ ಸರಬರಾಜು ಕಂಪನಿಗಳ ನೌಕರರ ಜೊತೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡು ಬಂದಿದೆ. ಮಾಹಿತಿ ನೀಡದೇ ಪ್ರಶ್ನೆ ಮಾಡಿದ ನಾಗರಿಕರ ಜೊತೆ ಹೆಚ್ಚು ವಾಗ್ವಾದ ಮಾಡಲು ಬಯಸದ ಬೆಸ್ಕಾಂಗಳ ನೌಕರರು, ಮುಂದೆ ಗೃಹಜ್ಯೋತಿ ಸೌಲಭ್ಯ ದೊರೆಯದೇ ಇದ್ದರೆ, ನಾವು ಹೊಣೆಗಾರರಲ್ಲ ಎಂಬ ಎಚ್ಚರಿಕೆ ನೀಡಿ ತೆರಳುತ್ತಿದ್ದಾರೆ. ಒಂದೆಡೆ ಸೌಲಭ್ಯ ಕೈ ತಪ್ಪಿಹೋಗುವ ಆತಂಕ ಕಾಡುತ್ತಿದ್ದರೆ, ಮತ್ತೊಂದೆಡೆ ಸರ್ಕಾರ ಸಂಗ್ರಹಿಸುತ್ತಿರುವ ಸೂಕ್ಷ್ಮ ಮಾಹಿತಿಗಳು ದುರುಪಯೋಗವಾಗಬಹುದೇ ಎಂಬ ಅನುಮಾನಗಳು ಕಾಡುತ್ತಿವೆ.
ಬೆಂಗಳೂರು, ಜು.2- ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗೆ ಅನರ್ಹರನ್ನು ಗುರುತಿಸುವ ನೆಪದಲ್ಲಿ ಸಂಗ್ರಹಿಸಲಾಗುತ್ತಿರುವ ಮಾಹಿತಿಗಳು ಮುಂದಿನ ದಿನಗಳಲ್ಲಿ ತೊಂದರೆಯುಂಟು ಮಾಡಬಹುದು ಎಂಬ ಗಲಿಬಿಲಿ ಶ್ರೀಸಾಮಾನ್ಯರನ್ನು ಕಾಡಲಾರಂಭಿಸಿದೆ.

