ಬೆಂಗಳೂರು,ನ.13-ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯನ್ನು ನಡುರಸ್ತೆಯಲ್ಲೇ ಪತ್ನಿ ಕಣುಂದೆಯೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಯಲಹಂಕದ ಕೋಗಿಲು ಕ್ರಾಸ್ ನಿವಾಸಿ ಚರಣ್(40) ಹತ್ಯೆಗೀಡಾದ ರಿಯಲ್ ಎಸ್ಟೇಟ್ ಉದ್ಯಮಿ.
ಇವರು ಮೂಲತಃ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನವರು.ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಚರಣ್ ಅವರು ಯಲಹಂಕ ನ್ಯೂಟೌನ್ 1ನೇ ಹಂತ, ಅಂಬೇಡ್ಕರ್ ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆ ಇರುವ ಕಟ್ಟಡದ 2ನೇ ಮಹಡಿಯಲ್ಲಿ ಧಣಿ ಪ್ರಾಪರ್ಟೀಸ್ ಎಂಬ ರಿಯಲ್ ಎಸ್ಟೇಟ್ ಕಚೇರಿ ಹೊಂದಿದ್ದಾರೆ.
ಇಂದು ಬೆಳಗ್ಗೆ ಮನೆಯಿಂದ ಚರಣ್ ಅವರು ಪತ್ನಿಯೊಂದಿಗೆ ಕಾರಿನಲ್ಲಿ ಹೊರಟು ತಮ ಕಚೇರಿ ಬಳಿ 10 ಗಂಟೆ ಸುಮಾರಿಗೆ ಬಂದಿದ್ದಾರೆ. ಕಾರು ಇಳಿದು ಪತ್ನಿ ಮೆಟ್ಟಿಲು ಹತ್ತಿಕೊಂಡು ಕಚೇರಿಗೆ ಹೋಗುತ್ತಿದ್ದರು. ಚರಣ್ ಅವರು ಕಾರಿನಿಂದ ಹೊರ ಬರುತ್ತಿದ್ದಂತೆ ಇದೇ ಸಮಯಕ್ಕಾಗಿ ಹೊಂಚು ಹಾಕಿದ್ದ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಪತಿಯ ಕಿರುಚಾಟ ಕೇಳಿ ಪತ್ನಿ ಸಹಾಯಕ್ಕಾಗಿ ಬಂದು ಹೊಡೆಯದಂತೆ ಬೇಡಿಕೊಂಡರಾದರೂ ಹಂತಕರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಚರಣ್ ಅವರನ್ನು ಪತ್ನಿ ಸ್ಥಳೀಯರ ಸಹಾಯದಿಂದ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ತಕ್ಷಣ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪತಿಯ ಸಾವನ್ನು ಕಂಡು ಪತ್ನಿ ಸ್ಥಳದಲ್ಲೇ ಕುಸಿದು ಕಣ್ಣೀರು ಹಾಕಿದ್ದಾರೆ. ಹಾಡಹಗಲೇ ಈ ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಸುದ್ದಿ ತಿಳಿದು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ನಂತರ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ವಿಶೇಷ ತಂಡ ರಚನೆ:ಹಂತಕರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೊಲೆಯಾದ ಚರಣ್ ಅವರ ಪತ್ನಿಯಿಂದ ಹಂತಕರ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ರಿಯಲ್ ಎಸ್ಟೇಟ್, ಜಮೀನು,ಸೈಟ್ ವ್ಯವಹಾರದ ವಿಚಾರವಾಗಿ ಉಂಟಾದ ವೈಷಮ್ಯದಿಂದ ಚರಣ್ ಅವರ ಕೊಲೆ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಸುಪಾರಿ ಕೊಟ್ಟು ಈ ಕೊಲೆಮಾಡಿಸಿರುವ ಶಂಕೆ ಹಿನ್ನಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಹಂತಕರು 22 ರಿಂದ 23 ವರ್ಷದ ವಯಸ್ಸಿನವರು ಎಂಬುವುದು ಗೊತ್ತಾಗಿದೆ. ಹಂತಕರು ಕೆಲವೇ ಸೆಕೆಂಡ್‌ಗಳಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಅದರಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನಾಧರಿಸಿ ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
ಯಲಹಂಕದ ಕೋಗಿಲು ಕ್ರಾಸ್ ನಿವಾಸಿ ಚರಣ್(40) ಹತ್ಯೆಗೀಡಾದ ರಿಯಲ್ ಎಸ್ಟೇಟ್ ಉದ್ಯಮಿ. ಇವರು ಮೂಲತಃ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನವರು.ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಚರಣ್ ಅವರು ಯಲಹಂಕ ನ್ಯೂಟೌನ್ 1ನೇ ಹಂತ, ಅಂಬೇಡ್ಕರ್ ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆ ಇರುವ ಕಟ್ಟಡದ 2ನೇ ಮಹಡಿಯಲ್ಲಿ ಧಣಿ ಪ್ರಾಪರ್ಟೀಸ್ ಎಂಬ ರಿಯಲ್ ಎಸ್ಟೇಟ್ ಕಚೇರಿ ಹೊಂದಿದ್ದಾರೆ.

