
ಬೆಂಗಳೂರು,ಜು.29- ಎಲ್ಲರಿಗೂ ಪ್ರಾತಿನಿಧ್ಯ ನೀಡುವುದು ಎಲ್ಲರನ್ನೂ ಸಮಾಧಾನಗೊಳಿಸಿ, ಪ್ರಾದೇಶಿಕ ಸಮತೋಲನ ಕಾಪಾಡಿಕೊಂಡು ಸಚಿವ ಸಂಪುಟ ರಚನೆ ಮಾಡುವುದು ಸವಾಲಿನ ಕೆಲಸ ಎನ್ನುವ ಮೂಲಕ ಸಂಪುಟ ವಿಸ್ತರಣೆ ಒಂದು ವಾರ ವಿಳಂಬವಾಗಲಿದೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೀಡಿದ್ದಾರೆ. ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟ ರಚನೆ ವೇಳೆ ಎಲ್ಲಾ ಸಮುದಾಯದ ಶಾಸಕರಿಂದ ಒತ್ತಡ ಬರುವುದು ಸಹಜ. ಎಲ್ಲವನ್ನೂ ಮೆಟ್ಟಿ ನಿಲ್ಲಬೇಕಿದೆ ಎಂದು ಹೇಳಿದರು.
ನಾಳೆ ವರಿಷ್ಠರ ಭೇಟಿಗೆ ಸಮಯಾವಕಾಶ ಸಿಕ್ಕಲ್ಲಿ ದೆಹಲಿಗೆ ತೆರಳಲು ನಿರ್ಧರಿಸಿದ್ದೇನೆ. ಆದರೆ ಇದು ಸಂಪುಟ ವಿಸ್ತರಣೆ ಕುರಿತ ಭೇಟಿಯಲ್ಲ, ಈ ಕುರಿತು ಮುಂದಿನ ವಾರ ಮತ್ತೆ ದೆಹಲಿಗೆ ತೆರಳಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನಗೆ ಈಗ ತಕ್ಷಣಕ್ಕೆ ಮಳೆ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡು ಮುಂದಿನ ಕೆಲಸ ಮಾಡುವುದು, ಮಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಇದಕ್ಕಾಗಿ ಇಂದು ಉತ್ತರ ಕರ್ನಾಟಕ ಮತ್ತು ಉತ್ತರಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳುತ್ತಿದ್ದೇನೆ, ಪ್ರವಾಹ ಪೀಡಿತ ಸ್ಥಳಗಳಿಗೆ ಕೂಡ ಭೇಟಿ ನೀಡುತ್ತೇನೆ ಎಂದರು.
ನಿನ್ನೆ ಪ್ರಧಾನ ಮಂತ್ರಿಯವರು ಕರೆ ಮಾಡಿ ನನಗೆ ಶುಭಾಶಯ ತಿಳಿಸಿದ್ದಾರೆ. ಒಳ್ಳೆಯ ಆಡಳಿತ ಕೊಡಿ, ಕೊಡುತ್ತೀರಾ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ. ದೆಹಲಿ ಭೇಟಿ ವೇಳೆ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಜೆ.ಪಿ. ನಡ್ಡಾ ಅವರನ್ನೆಲ್ಲ ಭೇಟಿಯಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ನಮ್ಮ ಸಂಸದರು ಮತ್ತು ಕರ್ನಾಟಕದ ಸಚಿವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಸಂಬಂಧಪಟ್ಟ ಬಾಕಿ ಯೋಜನೆಗಳ ಕುರಿತು ಕೆಲಸ ಕಾರ್ಯಗಳ ಕುರಿತು ಚರ್ಚೆ ಮಾಡುತ್ತೇನೆ ಎಂದುರ.
ಈ ವರ್ಷ 18000 ಕೋಟಿ ಜಿಎಸ್ಟಿ ಕೊರತೆಯಿದೆ. ಕಳೆದ ಬಾರಿ ಕೇಂದ್ರ ಸರ್ಕಾರ 12 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದರು. ಅದೇ ರೀತಿ, ಈ ಬಾರಿಯೂ ಅವರೇ ಸಾಲ ತೀರಿಸುವ ಯೋಜನೆ ಮುಖಾಂತರ 12 ಸಾವಿರ ಕೋಟಿ ಸಾಲ ಕೊಡಲು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಪಡೆಯುವ ಕುರಿತು ಚರ್ಚೆ ಮಾಡುತ್ತೇವೆ ಎಂದರು.
ಇಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದೇನೆ. ಜಿಲ್ಲೆಯಲ್ಲಿ ಮೂರು ಜನ ಸಾವನ್ನಪಿದ್ದಾರೆ. ಜಿಲ್ಲೆಯಲ್ಲಿ ಪರಿಶೀಲನೆ ನಡೆಸುತ್ತೇನೆ. ನಂತರ ಪರಿಹಾರದ ಬಗ್ಗೆ ತೀರ್ಮಾನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಹೆಚ್ಚು ನೆರೆಹಾನಿ ಆಗಿದೆಯೋ ಆ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.