Administration at people's doorsteps: Praja Seva Abhiyan launched on September 5
-ಡಾ. ಶಾಲಿನಿ ರಜನೀಶ್
(ಸರ್ಕಾರದ ಮುಖ್ಯಕಾರ್ಯದರ್ಶಿ)
ಬೆಂಗಳೂರು, ಆ.31- ಸರ್ಕಾರಿ ಕಚೇರಿಗಳಿಗೆ ಅಲೆದಾಡದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ 'ಪ್ರಜಾಸೇವಾ ಅಭಿಯಾನ' ಆರಂಭಿಸುತ್ತಿದೆ.
ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದ ಈ ಅಭಿಯಾನಕ್ಕೆ ಸೆ.5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಲ್ಲಿ ಚಾಲನೆ ದೊರೆಯಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆ, ಅರ್ಜಿ ಹಾಗೂ ದೂರುಗಳನ್ನು ನೇರವಾಗಿ ಸ್ವೀಕರಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಹೆಚ್ಚಿನ ಸಮಯ ಬೇಕಾಗುವ ಸಮಸ್ಯೆಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವ ಮೂಲಕ ಅಧಿಕಾರಿಗಳ ಹೊಣೆಗಾರಿಕೆಯನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಣ್ಣಪುಟ್ಟ ಕೆಲಸಗಳಿಗೂ ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಪದೇಪದೆ ಅಲೆದಾಡಬೇಕಾದ ಪರಿಸ್ಥಿತಿಯನ್ನು ತಪ್ಪಿಸಿ, ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಅಭಿಯಾನದ ಆಶಯವಾಗಿದೆ. ಸಾರ್ವಜನಿಕರ ಅಹವಾಲುಗಳನ್ನು ಆಲಿಸುವುದರ ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲು ಸಭೆಗಳಲ್ಲಿ ಇಲಾಖಾವಾರು ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ.
ಪ್ರತಿ ಶನಿವಾರ ಸಭೆ
ಪ್ರತಿ ಶನಿವಾರ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಆಯೋಜಿಸಲಾಗುತ್ತದೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರದಲ್ಲಿ ಸಭೆ ನಡೆಯಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ನಡೆಸಲಾಗುತ್ತದೆ.
ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ರಾಜ್ಯದ ಎಲ್ಲ ತಾಲೂಕು ಹಾಗೂ ಹೋಬಳಿಗಳಲ್ಲಿ ಸಭೆ ನಡೆಸಲು ಏಕೀಕೃತ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಭೆ ನಡೆಯುವ ದಿನವೇ ಅದೇ ಕ್ಷೇತ್ರದಲ್ಲಿ ಪ್ರತ್ಯೇಕ ಶಾಸಕರ ಸಭೆ ನಡೆಸುವುದಿಲ್ಲ. ಸಂಬಂಧಿಸಿದ ಶಾಸಕರು ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಭೆಯ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮನೆ-ಮನೆಗೆ ಕರಪತ್ರ ವಿತರಿಸಿ ಮಾಹಿತಿ ನೀಡಲಾಗುತ್ತದೆ. ಕರಪತ್ರದಲ್ಲಿಯೇ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ವಿವರ ನೀಡಲಾಗುತ್ತದೆ. ಕೃತಕ ಬುದ್ಧಿಮತ್ತೆ ಆಧಾರಿತ ಕರೆ ವ್ಯವಸ್ಥೆಯ ಮೂಲಕ ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಗಳ ಕುರಿತು ಮುಂಗಡ ಮಾಹಿತಿ ನೀಡಲಾಗುತ್ತದೆ.
1902ಕ್ಕೆ ದೂರು ಸಲ್ಲಿಕೆ
ರಾಜ್ಯದ ವಿವಿಧ ಇಲಾಖೆಗಳ ಸೇವೆ ಹಾಗೂ ಯೋಜನೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ರೂಪಿಸಲಾಗಿದೆ. ಸಾರ್ವಜನಿಕರು 1902 ಸಹಾಯವಾಣಿ ಅಥವಾ ಸರ್ಕಾರದ ದೂರು ನಿವಾರಣಾ ಪೋರ್ಟಲ್ ಮೂಲಕ ತಮ್ಮ ಸಮಸ್ಯೆಗಳನ್ನು ದಾಖಲಿಸಬಹುದು.
ಸಭೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಸರ್ಕಾರದ ಯೋಜನೆಗಳ ಅರ್ಹತೆ, ಸೌಲಭ್ಯ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಕುರಿತು ಜನರಿಗೆ ಮಾಹಿತಿ ನೀಡಲಿದ್ದಾರೆ. ಉತ್ತಮ ಕಾರ್ಯಪದ್ಧತಿಗಳ ಪ್ರದರ್ಶನದ ಜತೆಗೆ ಕುಡಿಯುವ ನೀರು ಹಾಗೂ ಮೂಲಭೂತ ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ.
ಪ್ರತಿ ಸಭೆಯ ಬಳಿಕ ಸ್ವೀಕರಿಸಿದ ಅಹವಾಲುಗಳು, ಕೈಗೊಂಡ ಕ್ರಮ, ಪರಿಹಾರದ ವಿವರ, ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಬಾಕಿ ಉಳಿದ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.
ಪ್ರತಿ ಬುಧವಾರ ಮೂರು ಹಂತದ ಪರಿಶೀಲನೆ
ಅಭಿಯಾನದಡಿ ಸ್ವೀಕರಿಸುವ ಅರ್ಜಿ ಹಾಗೂ ಅಹವಾಲುಗಳ ಮೇಲೆ ಪ್ರತಿ ಬುಧವಾರ ಮೂರು ಹಂತಗಳಲ್ಲಿ ಪರಿಶೀಲನೆ ನಡೆಯಲಿದೆ.
ಬೆಳಗ್ಗೆ 9ರಿಂದ 11ರವರೆಗೆ: ತಾಲೂಕು ಮಟ್ಟದ ಪರಿಶೀಲನೆ ನಡೆಯಲಿದ್ದು, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಹಂತದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.
ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ: ಉಪವಿಭಾಗ ಮಟ್ಟದ ಪರಿಶೀಲನೆ ನಡೆಯಲಿದೆ. ಸಹಾಯಕ ಆಯುಕ್ತರು ತಾಲೂಕು ಮಟ್ಟದಿಂದ ಬಂದ ಪ್ರಕರಣಗಳನ್ನು ಪರಿಶೀಲಿಸಿ, ತಮ್ಮ ಹಂತದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಿದ್ದಾರೆ.
ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪರಿಶೀಲನೆ ನಡೆಯಲಿದೆ.
ನಿಗದಿತ ಅವಧಿಯಲ್ಲಿ ಬಗೆಹರಿಯದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸ್ವಯಂಚಾಲಿತವಾಗಿ ಮೇಲ್ದರ್ಜೆಗೆ ವರ್ಗಾಯಿಸುವ ವ್ಯವಸ್ಥೆಯೂ ಇರಲಿದೆ. ಪರಿಹಾರದ ಬಗ್ಗೆ ಸಾರ್ವಜನಿಕರಿಗೆ ಅಸಮಾಧಾನವಿದ್ದರೆ, ಸಂಬಂಧಿಸಿದ ಅಧಿಕಾರಿಯ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ಅಹವಾಲು ಮಂಡಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಗ್ರಾಮ ಒನ್‌ನಲ್ಲಿಯೇ ಅರ್ಜಿ
ಸಾರ್ವಜನಿಕರು ತಮ್ಮ ಅರ್ಜಿ ಹಾಗೂ ಅಹವಾಲುಗಳನ್ನು ಮುಂಚಿತವಾಗಿಯೇ ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಸಭೆ ನಡೆಯುವ ಸ್ಥಳದಲ್ಲಿಯೂ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ ಕಂಪ್ಯೂಟರ್, ಮುದ್ರಕ ಹಾಗೂ ಅಂತರ್ಜಾಲ ಸೌಲಭ್ಯ ಒದಗಿಸಲಾಗುತ್ತದೆ. ಇದರಿಂದ ಸ್ಥಳದಲ್ಲಿಯೇ ಆನ್‌ಲೈನ್ ಮೂಲಕ ಅರ್ಜಿ ಹಾಗೂ ದೂರು ಸಲ್ಲಿಸಲು ಅವಕಾಶ ದೊರೆಯಲಿದೆ.
ಸಭೆಯಲ್ಲಿ ಎರಡು ರೀತಿಯ ಅಹವಾಲುಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಮೊದಲನೆಯದು ಹೊಸದಾಗಿ ಸಲ್ಲಿಸುವ ದೂರುಗಳು. ಎರಡನೆಯದು ಈಗಾಗಲೇ ಸಕಾಲ ಅಥವಾ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಲ್ಲಿ ನೋಂದಾಯಿಸಿದ್ದರೂ ಪರಿಹಾರವಾಗದ ಅಥವಾ 21 ದಿನಗಳ ಬಳಿಕವೂ ಸಮರ್ಪಕ ಪರಿಹಾರ ದೊರೆಯದ ಅಹವಾಲುಗಳು. ಇಂತಹ ಪ್ರಕರಣಗಳಿಗೆ ಆದ್ಯತೆ ನೀಡಲಾಗುತ್ತದೆ.
ಸ್ಥಳದಲ್ಲಿಯೇ ಮಂಜೂರಾತಿ ಪತ್ರ
ಅರ್ಹ ಫಲಾನುಭವಿಗಳಿಗೆ ವಿವಿಧ ಸರ್ಕಾರಿ ಯೋಜನೆಗಳ ಮಂಜೂರಾತಿ ಪತ್ರಗಳನ್ನು ಸ್ಥಳದಲ್ಲಿಯೇ ವಿತರಿಸುವ ವ್ಯವಸ್ಥೆ ಇರಲಿದೆ. ಈಗಾಗಲೇ ಪರಿಹಾರಗೊಂಡ ಪ್ರಕರಣಗಳಿಗೆ ಸಂಬಂಧಿಸಿದ ಅನುಮೋದನೆ ಅಥವಾ ದೃಢೀಕರಣ ಪತ್ರವನ್ನೂ ಸ್ಥಳದಲ್ಲಿಯೇ ನೀಡಲಾಗುತ್ತದೆ.
ಅರ್ಜಿ ಹಾಗೂ ಅಹವಾಲುಗಳ ಪ್ರಗತಿಯನ್ನು ಸಾರ್ವಜನಿಕರು ನೈಜ ಸಮಯದಲ್ಲಿ ಪರಿಶೀಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಮೂಲಕ ದೂರುಗಳ ತ್ವರಿತ ವಿಲೇವಾರಿ, ಸ್ಥಳದಲ್ಲಿಯೇ ಸೇವೆ, ನಿರಂತರ ಪರಿಶೀಲನೆ ಹಾಗೂ ಅಧಿಕಾರಿಗಳ ಹೊಣೆಗಾರಿಕೆಯನ್ನು ಖಚಿತಪಡಿಸುವ ಗುರಿಯನ್ನು ಪ್ರಜಾಸೇವಾ ಅಭಿಯಾನ ಹೊಂದಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಜತೆಗೆ ಸರ್ಕಾರದ ಯೋಜನೆಗಳ ಮಾಹಿತಿ ಪಡೆದು ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಡಾ. ಶಾಲಿನಿ ರಜನೀಶ್ ಮನವಿ ಮಾಡಿದ್ದಾರೆ.
-ಡಾ. ಶಾಲಿನಿ ರಜನೀಶ್
(ಸರ್ಕಾರದ ಮುಖ್ಯಕಾರ್ಯದರ್ಶಿ)
ಬೆಂಗಳೂರು, ಆ.31- ಸರ್ಕಾರಿ ಕಚೇರಿಗಳಿಗೆ ಅಲೆದಾಡದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ 'ಪ್ರಜಾಸೇವಾ ಅಭಿಯಾನ' ಆರಂಭಿಸುತ್ತಿದೆ. ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದ ಈ ಅಭಿಯಾನಕ್ಕೆ ಸೆ.5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಲ್ಲಿ ಚಾಲನೆ ದೊರೆಯಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಅಭಿಯಾನದಡಿ ಸ್ವೀಕರಿಸುವ ಅರ್ಜಿ ಹಾಗೂ ಅಹವಾಲುಗಳ ಮೇಲೆ ಪ್ರತಿ ಬುಧವಾರ ಮೂರು ಹಂತಗಳಲ್ಲಿ ಪರಿಶೀಲನೆ ನಡೆಯಲಿದೆ.

