Dailyhunt Logo
  • Light mode
    Follow system
    Dark mode
    • Play Story
    • App Story
ಮಹಿಳಾ ಸುರಕ್ಷತೆಗೆ ಕ್ಯಾಬ್‌ಗಳಲ್ಲಿ ಅಳವಡಿಸಿರುವ ಪ್ಯಾನಿಕ್‌ ಬಟನ್‌ ವರ್ಕ್‌ ಆಗುತ್ತಿಲ್ವಂತೆ

ಮಹಿಳಾ ಸುರಕ್ಷತೆಗೆ ಕ್ಯಾಬ್‌ಗಳಲ್ಲಿ ಅಳವಡಿಸಿರುವ ಪ್ಯಾನಿಕ್‌ ಬಟನ್‌ ವರ್ಕ್‌ ಆಗುತ್ತಿಲ್ವಂತೆ

ಬೆಂಗಳೂರು, ಸೆ. 21- ಮಹಿಳೆಯರು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಯೆಲ್ಲೋ ಬೋರ್ಡ್‌ ಕ್ಯಾಬ್‌ಗಳಲ್ಲಿ ಕಡ್ಡಾಯಗೊಳಿಸಿರುವ ಪ್ಯಾನಿಕ್‌ ಬಟನ್‌ಗಳು ಹೆಸರಿಗೆ ಮಾತ್ರ ಅಳವಡಿಕೆಯಾಗಿದ್ದು, ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಯಾಣಿಕರ ಸುರಕ್ಷತೆಗಾಗಿ ಸಾರಿಗೆ ಇಲಾಖೆ ನಿರ್ಭಯ ಯೋಜನೆಯಡಿ ಯೆಲ್ಲೋ ಬೋರ್ಡ್‌ ಕ್ಯಾಬ್‌ಗಳಲ್ಲಿ ಪ್ಯಾನಿಕ್‌ ಬಟನ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಿತ್ತು. ಬಟನ್‌ ಅಳವಡಿಸದ ವಾಹನಗಳಿಗೆ ಫಿಟ್‌ನೆಸ್‌ ಸರ್ಟಿಫಿಕೇಟ್‌ (ಎಫ್‌ಸಿ) ನೀಡುವುದಿಲ್ಲ ಎಂಬ ಸೂಚನೆಯ ಹಿನ್ನೆಲೆಯಲ್ಲಿ ಚಾಲಕರು ಸಾವಿರಾರು ರೂಪಾಯಿ ಖರ್ಚು ಮಾಡಿ ಬಟನ್‌ ಅಳವಡಿಸಿಕೊಂಡಿದ್ದಾರೆ.

ಆದರೆ, ಬಟನ್‌ ಅಳವಡಿಸಿ ಹಲವು ತಿಂಗಳು ಕಳೆದರೂ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಚಾಲಕರ ಅಳಲು. ನಗರದ ಹಲವು ಯೆಲ್ಲೋ ಬೋರ್ಡ್‌ ಕ್ಯಾಬ್‌ಗಳಲ್ಲಿ ಮೂರು ಪ್ಯಾನಿಕ್‌ ಬಟನ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ವಾಹನಕ್ಕೆ ಸುಮಾರು 15 ಸಾವಿರದಿಂದ 18 ಸಾವಿರ ರೂಪಾಯಿವರೆಗೆ ಖರ್ಚಾಗಿದೆ ಎನ್ನಲಾಗಿದೆ.

ತುರ್ತು ಸಂದರ್ಭದಲ್ಲಿ ಚಾಲಕ ಅಥವಾ ಪ್ರಯಾಣಿಕರು ಬಟನ್‌ ಒತ್ತಿದ ತಕ್ಷಣ ಸಂಬಂಧಿಸಿದ ವ್ಯವಸ್ಥೆಗೆ ಸಿಗ್ನಲ್‌ ಹೋಗಬೇಕು. ವಾಹನದ ಜಿಪಿಎಸ್‌ ಸ್ಥಳ ಮಾಹಿತಿ ಲಭ್ಯವಾಗಬೇಕು ಹಾಗೂ ಅಗತ್ಯವಿದ್ದಲ್ಲಿ ಪೊಲೀಸ್‌ ಸಿಬ್ಬಂದಿ ಕೂಡಲೇ ಸಂಪರ್ಕಿಸಿ ಸ್ಥಳಕ್ಕೆ ಧಾವಿಸಬೇಕು ಎಂಬುದು ಇದರ ಉದ್ದೇಶ.

ಆದರೆ, ಬಟನ್‌ ಒತ್ತಿದರೂ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಒಂದು ಬಾರಿ ಮಾತ್ರವಲ್ಲ, ಹಲವು ಬಾರಿ ಪ್ಯಾನಿಕ್‌ ಬಟನ್‌ ಒತ್ತಿದರೂ ಕರೆ ಬರುವುದಿಲ್ಲ, ಸಂದೇಶವೂ ಬರುವುದಿಲ್ಲ ಎಂದು ಕೆಲ ಪ್ರಯಾಣಿಕರು ಹಾಗೂ ಚಾಲಕರು ದೂರಿದ್ದಾರೆ.

ತುರ್ತು ಸಂದರ್ಭದಲ್ಲಿ ಏನು ಗತಿ?

ಕ್ಯಾಬ್‌ ಪ್ರಯಾಣದ ವೇಳೆ ಪ್ರಯಾಣಿಕರು ಮತ್ತು ಚಾಲಕರ ನಡುವೆ ಕೆಲವೊಮ್ಮೆ ಗಲಾಟೆ, ವಾಗ್ವಾದ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಪೊಲೀಸ್‌ ನೆರವು ಪಡೆಯಲು ಪ್ಯಾನಿಕ್‌ ಬಟನ್‌ ಸಹಕಾರಿಯಾಗಬೇಕಿತ್ತು. ಆದರೆ, ತುರ್ತು ಸಮಯದಲ್ಲೇ ಬಟನ್‌ ಕೆಲಸ ಮಾಡದಿದ್ದರೆ ಅದರ ಉದ್ದೇಶವೇನು ಎಂಬ ಪ್ರಶ್ನೆ ಉದ್ಭವಿಸಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲೂ ಇದು ಪ್ರಮುಖವಾಗಿದ್ದು, ರಾತ್ರಿ ವೇಳೆ ಅಥವಾ ನಿರ್ಜನ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣ ಸಹಾಯ ಪಡೆಯಲು ಸಾಧ್ಯವಾಗದಿದ್ದರೆ ಸುರಕ್ಷತಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಮೂಡುತ್ತದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಸೆ. 21- ಮಹಿಳೆಯರು ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಯೆಲ್ಲೋ ಬೋರ್ಡ್‌ ಕ್ಯಾಬ್‌ಗಳಲ್ಲಿ ಕಡ್ಡಾಯಗೊಳಿಸಿರುವ ಪ್ಯಾನಿಕ್‌ ಬಟನ್‌ಗಳು ಹೆಸರಿಗೆ ಮಾತ್ರ ಅಳವಡಿಕೆಯಾಗಿದ್ದು, ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ತುರ್ತು ಸಂದರ್ಭದಲ್ಲಿ ಏನು ಗತಿ?

Dailyhunt
Disclaimer: This content has not been generated, created or edited by Dailyhunt. Publisher: eesanje