Dailyhunt Logo
  • Light mode
    Follow system
    Dark mode
    • Play Story
    • App Story
ಮಲ್ಲೇಶ್ವರದಲ್ಲಿ ಮನೆ ಬಾಗಿಲಿಗೇ  ಆಕ್ಸಿಜೆನ್ ಸಾಂದ್ರಕಗಳ ಪೂರೈಕೆ

ಮಲ್ಲೇಶ್ವರದಲ್ಲಿ ಮನೆ ಬಾಗಿಲಿಗೇ ಆಕ್ಸಿಜೆನ್ ಸಾಂದ್ರಕಗಳ ಪೂರೈಕೆ

ಈ ಸಂಜೆ 5 years ago

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಒದಗಿಸಲು ಕೂಡಲೇ 15,000 ಆಮ್ಲಜನಕ ಸಾಂದ್ರಕಗಳನ್ನು (oxygen concentrator) ಖರೀದಿ ಮಾಡಲಾಗುತ್ತಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ನಗರದ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಆಮ್ಲಜನಕ ಕೊರತೆ ಎದುರಿಸುತ್ತಿರುವ "ಕೋವಿಡ್‌ ಸೋಂಕಿತರಿಗೆ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ"ಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜಿಯರ್ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಚಾಲನೆ ನೀಡಿದ ನಂತರ ಅವರು ಈ ವಿಷಯ ತಿಳಿಸಿದರು.

ತತ್‌ಕ್ಷಣವೇ ಯಾರ ಬಳಿ ಸ್ಟಾಕ್ ಇದ್ದರೆ ಅವರಿಂದ 5,000 ಸಾಂದ್ರಕಗಳನ್ನು ಖರೀದಿಸುತ್ತೇವೆ.

ಉಳಿದ 10,000 ಸಾಂದ್ರಕಗಳ ಖರೀದಿಗೆ ತಕ್ಷಣವೇ ಟೆಂಡರ್‌ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

# ಮಲ್ಲೇಶ್ವರಕ್ಕೆ 70 & ಕೋಲಾರಕ್ಕೆ 20:
ಮಲ್ಲೇಶ್ವರದಲ್ಲಿ ಭಾನುವಾರ ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ರಾಮಾನುಜ ಜಿಯರ್ ಸ್ವಾಮೀಜಿ ಅವರು 70 ಆಮ್ಲಜನಕ ಸಾಂದ್ರಕಗಳನ್ನು ಕ್ಷೇತ್ರದ ಜನರ ಸೇವೆಗೆ ಮುಕ್ತಗೊಳಿಸಿದರು. ನಂತರ ಡಿಸಿಎಂ ಅವರು ಕೋಲಾರ ಸಂಸದ ಮುನಿಸ್ವಾಮಿ ಅವರಿಗೆ 20 ಸಾಂದ್ರಕಗಳನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ ಅವರು; "ಕೋವಿಡ್‌ ಕಾರ್ಮೋಡ ಕವಿದ ಈ ಹೊತ್ತಿಗೆ ಆಮ್ಲಜನಕ ಸಾಂದ್ರಕಗಳನ್ನು ಕೊಡುತ್ತಿರುವುದು ಬೆಳ್ಳಿಗೆರೆ ಮೂಡಿದಂತೆ ಆಗಿದೆ. ಎಲ್ಲರೂ ಧೈರ್ಯವಾಗಿ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕೆ ವಿನಾ ಎದೆಗುಂದಬಾರದು" ಎಂದರು.

# ದಾನಿಗಳ ನೆರವು:
ಆಕ್ಷನ್‌ ಕೋವಿಡ್‌ ಟೀಂ ಹಾಗೂ ಝಿರೋದ ಸಂಸ್ಥೆಗಳು 70 ಆಮ್ಲಜನಕ ಸಾಂದ್ರಕಗಳನ್ನು ದಾನ ಕೊಟ್ಟಿವೆ. ʼಸೇವಾ ಹಿʼ‌ ಸಂಘಟನೆ ಮೂಲಕ ಜನರ ಸೇವೆಗೆ ನೀಡಲಾಗುವುದು. ಆಮ್ಲಜನಕ ಕೊರತೆ, ಅದರಲ್ಲೂ 85% ಆಕ್ಸಿಜನ್‌ ಸ್ಯಾಚುರೇಷನ್ ಕಡಿಮೆ ಇರುವವರಿಗೆ ಇವುಗಳನ್ನು ಕೊಡುತ್ತೇವೆ ಎಂದು ಡಿಸಿಎಂ ಹೇಳಿದರು.

# ಏನಿದು ಆಮ್ಲಜನಕ ಸಾಂದ್ರಕ? ಹಂಚಿಕೆ ಹೇಗೆ?:
ಇದು ರೆಡಿಮೇಡ್‌ ಆಮ್ಲಜನಕ ಘಟಕದ ರೀತಿ ಕೆಲಸ ಮಾಡುತ್ತದೆ. ಸಾಗಾಣಿಕೆ ಸುಲಭ. ಮನೆಯಲ್ಲೇ ಸರಳವಾಗಿ ಬಳಸಬಹುದು. ಹೋಮ್‌ ಐಸೋಲೇಷನ್‌ ಆಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಆಪದ್ಭಾಂದವನಂತೆ ಕೆಲಸ ಮಡುತ್ತದೆ.

ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾರಿಗಾದರೂ ಆಮ್ಲಜನಕದ ಕೊರತೆ ಉಂಟಾದ ತಕ್ಷಣ ಹೆಲ್ಪ್‌ಲೈನ್‌ ಸಂಖ್ಯೆಗೆ ಕರೆ ಮಾಡಿದರೆ ಸಾಕು. ತತ್‌ಕ್ಷಣವೇ ಅವರ ಮನೆ ಬಾಗಿಲಿಗೇ ಆಮ್ಲಜನಕ ಸಾಂದ್ರಕವನ್ನು ಸ್ವಯಂ ಸೇವಕರು ತಲುಪಿಸುತ್ತಾರೆ. ಜತೆಗೆ, ಅದನ್ನು ಬಳಸುವ ಬಗ್ಗೆ ಮಾಹಿತಿಯನ್ನೂ ನೀಡತ್ತಾರೆ.

ಆ ಸೋಂಕಿತರು ಸಾಂದ್ರಕದ ಉಪಯೋಗ ಪಡೆದು ಅಪಾಯದಿಂದ ಪಾರಾದ ಮೇಲೆ ಅಥವಾ ಅವರಲ್ಲಿ ಆಮ್ಲಜನಕದ ಸಮಸ್ಯೆ ನೀಗಿದ ನಂತರ ಅದನ್ನು ವಾಪಸ್‌ ಪಡೆದು, ಸ್ಯಾನಿಟೈಸ್‌ ಮಾಡಿ ಪುನಾ ಅಗತ್ಯ ಇರುವ ಮತ್ತೊಬ್ಬ ಸೋಂಕಿತರಿಗೆ ನೀಡಲಾಗುವುದು. ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಆದ್ಯತೆಯ ಮೇಲೆ ಇವುಗಳನ್ನು ನೀಡಲಾಗುವುದು.

ಅತ್ಯಾಧುನಿಕವಾದ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಂಡಿದ್ದು, ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: eesanje