
ನವದೆಹಲಿ, ಏ.24-ಕೊರೊನಾ ನಿಗ್ರಹಕ್ಕೆ ಬಳಸಲಾಗುತ್ತಿರುವ ಕೋವಿ ಶೀಲ್ಡ್ ಲಸಿಕೆಯನ್ನು ವಿಶ್ವದಲ್ಲೇ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಲಸಿಕೆಯನ್ನು 150ರೂ.ಗಳಿಗೇ ಖರೀದಿ ಮಾಡಲಾಗುತ್ತದೆ ಮತ್ತು ರಾಜ್ಯಗಳಿಗೆ ಉಚಿತವಾಗಿ ಸರಬರಾಜು ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ಜಯರಾಂ ರಮೇಶ್ ಸೇರಿದಂತೆ ಅನೇಕರು ಕೋವಿಶೀಲ್ಡ್ ಖರೀದಿ ದರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ದೇಶಿ ಉತ್ಪಾದನೆಯ ಕೋವಿಶೀಲ್ಡ್‍ಗೆ ಭಾರತದಲ್ಲಿ ವಿಶ್ವದಲ್ಲೇ ಅತ್ಯಧಿಕವಾದ ದರ ನೀಡುತ್ತಿರುವುದು ದುರಂತ. ಸಂಕಷ್ಟದ ಸಮಯದಲ್ಲಿ ಇದು ಭಯಾನಕವಾದ ಸಂಗತಿ. ಕೇಂದ್ರ ಸರ್ಕಾರ ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಳ್ಳಲು ಅವಕಾಶ ನೀಡುತ್ತಿರುವುದು ದುರಂತದ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಯರಾಂ ರಮೇಶ್ ಅವರು ಅಮೆರಿಕ, ಇಂಗ್ಲೆಂಡ್, ಯೂರೋಪ್, ಸೌದಿ, ಬಾಂಗ್ಲಾದೇಶ, ಸೌತ್ ಆಫ್ರಿಕಾ ಸೇರಿದಂತೆ ಎಲ್ಲ ದೇಶಗಳಿಗಿಂತಲೂ ಭಾರತ ಕೋವಿಶೀಲ್ಡ್‍ಗೆ ಹೆಚ್ಚು ಹಣ ನೀಡುತ್ತಿದೆ. ಪ್ರತಿ ಲಸಿಕೆಗೆ 400ರೂ. ಖರ್ಚು ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳು 600ರೂ. ಕೊಟ್ಟು ಖರೀದಿ ಮಾಡಬೇಕಿದೆ.
ಸೆರಂ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾ 150ರೂ.ಗೆ ಲಸಿಕೆ ಮಾರಾಟ ಮಾಡಿದರೂ ಕೂಡ ಹೆಚ್ಚಿನ ಲಾಭ ಗಳಿಸಲು ಅವಕಾಶವಿರುವಾಗ 400 ರಿಂದ 600ರೂ. ದರ ವಿಧಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಲಸಿಕೆ ದರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತಿತರರು ಸೆರಂ ಇನ್ಸ್‍ಟಿಯೂಟ್ ಜತೆ ಮಾತುಕತೆ ನಡೆಸಬೇಕು, ದರ ಕಡಿಮೆ ಮಾಡಬೇಕು ಎಂದು ಒತ್ತಡ ಹೇರಿದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತ ಸರ್ಕಾರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳನ್ನೂ 150ರೂ. ದರದಲ್ಲೇ ಖರೀದಿ ಮಾಡುತ್ತಿದೆ ಮತ್ತು ರಾಜ್ಯಗಳಿಗೆ ಸಂಪೂರ್ಣ ಉಚಿತವಾಗಿ ಲಸಿಕೆ ಹಂಚಿಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಈಗ ಹೊಸ ಪ್ರಶ್ನೆ ಉದ್ಭವಿಸಿರುವುದೇನೆಂದರೆ ಕೇಂದ್ರ ಸರ್ಕಾರವೇ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಿದ್ದೇವೆ ಎಂದು ಹೇಳುತ್ತಿರುವಾಗ ಇತ್ತೀಚೆಗೆ ಕರ್ನಾಟಕ ಸರ್ಕಾರ 400 ಕೋಟಿ ರೂ. ವೆಚ್ಚದಲ್ಲಿ ಒಂದು ಕೋಟಿ ಲಸಿಕೆ ಖರೀದಿಸಲು ಒಪ್ಪಿಗೆ ನೀಡಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ನಿಯಂತ್ರಣ ಲಸಿಕೆಗಳನ್ನು ಹಾಕಲು ನಿರ್ಧರಿಸಲಾಗಿದೆ. ಅದಕ್ಕಾಗಿ ಹೆಚ್ಚುವರಿ ಲಸಿಕೆಗಳನ್ನು ಖರೀದಿಸಲು 400 ಕೋಟಿ ರೂ. ವೆಚ್ಚ ಮಾಡುತ್ತಿರುವುದಾಗಿ ಆರೋಗ್ಯ ಸಚಿವ ಸುಧಾಕರ್ ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರ ಸಂಪೂರ್ಣ ಉಚಿತವಾಗಿ ಲಸಿಕೆ ನೀಡುತ್ತಿರುವುದಾಗಿ ಹೇಳುತ್ತಿರುವುದು ಅನುಮಾನ ಹುಟ್ಟಿಸಿದೆ.