ಪುಣೆ, ನ.24- ವಿವಾಹೇತರ ಸಂಬಂಧ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಸಾಫ್ಟ್‌ವೇರ್ ಎಂಜಿನಿಯರ್ ಯುವತಿಯೊಬ್ಬರನ್ನು ಆಕೆಯ ಪ್ರಿಯಕರನೇ ಥಳಿಸಿ ಹತ್ಯೆ ಮಾಡಿರುವ ಘಟನೆ ಪುಣೆಯ ಹಿಂಜವಾಡಿಯಲ್ಲಿ ನಡೆದಿದೆ. ಹತ್ಯೆ ಮಾಡಿದ ಬಳಿಕ ಆರೋಪಿ ಇಡೀ ರಾತ್ರಿ ಯುವತಿಯ ಮೃತದೇಹದ ಪಕ್ಕದಲ್ಲೇ ಕುಳಿತು, ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾನೆ.
ಕೊಲೆಯಾದ ಯುವತಿಯನ್ನು ಕೋಮಲ್ ದಹಾಲೆ (27) ಎಂದು ಗುರುತಿಸಲಾಗಿದೆ. ಆರೋಪಿ ಶುಭಂ ಜ್ಞಾನೇಶ್ವರ ಕಲ್ಬಾಂಡೆ ಕೂಡ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾನೆ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ವಿವಾಹವಾಗಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ವರ್ಧಾ ಮೂಲದ ಕೋಮಲ್ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಬುಲ್ಧಾನಾ ಮೂಲದ ಶುಭಂ ಇನ್ಫೋಸಿಸ್‌ನಲ್ಲಿ ಉದ್ಯೋಗದಲ್ಲಿದ್ದನು. ಇವರ ಪ್ರೀತಿಯ ವಿಚಾರ ಎರಡೂ ಕುಟುಂಬಗಳಿಗೂ ತಿಳಿದಿದ್ದು, ಮದುವೆಗೂ ಒಪ್ಪಿಗೆ ನೀಡಿದ್ದರು.
ಆದರೆ, ಶುಭಂ ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಕೋಮಲ್‌ಗೆ ಇತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮಧ್ಯರಾತ್ರಿ ಸುಮಾರು 3 ಗಂಟೆಗೆ ಹಿಂಜವಾಡಿಯಲ್ಲಿರುವ ಕೋಮಲ್ ವಾಸವಿದ್ದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಯಲ್ಲಿ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಈ ವೇಳೆ ಕೋಪಗೊಂಡ ಶುಭಂ, ಕೋಮಲ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆಕೆಯ ತಲೆ ಮತ್ತು ಕುತ್ತಿಗೆಗೆ ಒದ್ದು, ಗುದ್ದಿ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಕೋಮಲ್ ಮೃತಪಟ್ಟಿದ್ದಾಳೆ.
ಬಳಿಕ ಆರೋಪಿ ಇಡೀ ರಾತ್ರಿ ಕೋಮಲ್ ಮೃತದೇಹದ ಪಕ್ಕದಲ್ಲೇ ಕುಳಿತಿದ್ದಾನೆ. ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ ಹತ್ಯೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕೋಮಲ್‌ಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಹಿಂಜವಾಡಿ ಪೊಲೀಸರು ಆರೋಪಿ ಶುಭಂನನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.