BSY likely to be dropped from the Parliamentary Board
ಬೆಂಗಳೂರು, ಆ.31- ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಶೀಘ್ರದಲ್ಲೇ ಪಕ್ಷದ ಸಂಸದೀಯ ಮಂಡಳಿಯಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಬಿಜೆಪಿಯ ಪರಮೋಚ್ಚ ನಿರ್ಧಾರಕ ಸಂಸ್ಥೆಯಾಗಿರುವ ಸಂಸದೀಯ ಮಂಡಳಿಯಲ್ಲಿ ಅವರಿಗೆ ಸ್ಥಾನ ಕಲ್ಪಿಸಲಾಗಿತ್ತು. ಇದೀಗ ಬದಲಾಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಸಂಘಟನೆಯಲ್ಲಿ ಹಲವು ಬದಲಾವಣೆಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಇದರ ಭಾಗವಾಗಿ ಸಂಸದೀಯ ಮಂಡಳಿಯನ್ನೂ ಪುನರ್‌ರಚಿಸುವ ಸಾಧ್ಯತೆ ಇದ್ದು, ಈ ವೇಳೆ ಯಡಿಯೂರಪ್ಪ ಅವರನ್ನು ಸಮಿತಿಯಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈಗಾಗಲೇ ಕರ್ನಾಟಕದ ಎಂ. ನಾಗರಾಜ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆಲ ಹಿರಿಯ ನಾಯಕರಿಗೆ ಸಂಘಟನಾ ಜವಾಬ್ದಾರಿಗಳಿಂದ ವಿಶ್ರಾಂತಿ ನೀಡಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಪ್ರಮುಖ ನಿರ್ಧಾರಗಳ ಕೇಂದ್ರ
12 ಸದಸ್ಯರ ಬಿಜೆಪಿ ಸಂಸದೀಯ ಮಂಡಳಿ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ ಸೇರಿದಂತೆ ಪಕ್ಷದ ಪ್ರಮುಖ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಈ ಮಹತ್ವದ ಸಮಿತಿಯಲ್ಲಿ ಯಡಿಯೂರಪ್ಪ ಅವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು.
ಆದರೆ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಚಿಂತನೆ ಹಾಗೂ ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಸಂಘಟನಾತ್ಮಕ ಪುನರ್‌ವ್ಯವಸ್ಥೆಯ ಭಾಗವಾಗಿ ಸಂಸದೀಯ ಮಂಡಳಿಯಲ್ಲೂ ಬದಲಾವಣೆ ತರಲು ಚಿಂತನೆ ನಡೆದಿದ್ದು, ಯಡಿಯೂರಪ್ಪ ಅವರಿಗೆ ಈ ಕುರಿತು ಈಗಾಗಲೇ ಪರೋಕ್ಷ ಸಂದೇಶ ರವಾನೆಯಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಸಂಸದೀಯ ಮಂಡಳಿಯಲ್ಲಿ ಕರ್ನಾಟಕದ ಪ್ರಬಲ ನಾಯಕನಾಗಿದ್ದ ಯಡಿಯೂರಪ್ಪ ಅವರನ್ನು ಕೈಬಿಡುವ ಸಾಧ್ಯತೆಯ ಸುದ್ದಿ ರಾಜ್ಯ ಬಿಜೆಪಿಯೊಳಗೆ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ರಾಜ್ಯ ರಾಜಕಾರಣದ ಮೇಲೂ ಇದರ ಪರಿಣಾಮ ಬೀರಬಹುದೇ ಎಂಬ ಕುತೂಹಲ ಮೂಡಿದೆ.
ಬೆಂಗಳೂರು, ಆ.31- ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಶೀಘ್ರದಲ್ಲೇ ಪಕ್ಷದ ಸಂಸದೀಯ ಮಂಡಳಿಯಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

