Dailyhunt Logo
  • Light mode
    Follow system
    Dark mode
    • Play Story
    • App Story
ಸೋನಿಯಾ ಗಾಂಧಿಗೆ ಸಾವರ್ಕರ್‌ ಕುಟುಂಬದಿಂದ ಕಾನೂನು ನೋಟಿಸ್‌..!

ಸೋನಿಯಾ ಗಾಂಧಿಗೆ ಸಾವರ್ಕರ್‌ ಕುಟುಂಬದಿಂದ ಕಾನೂನು ನೋಟಿಸ್‌..!

ನವದೆಹಲಿ, ನ.24- ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌ ಕೃತಿಯಲ್ಲಿ ವಿನಾಯಕ ದಾಮೋದರ್‌ ಸಾವರ್ಕರ್‌ ಅವರ ಕುರಿತು ಮಾಡಿರುವ ಉಲ್ಲೇಖಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ಸಾವರ್ಕರ್‌ ಅವರ ಸೋದರಳಿಯ ಸತ್ಯಕಿ ಸಾವರ್ಕರ್‌ ಕಾನೂನು ನೋಟಿಸ್‌ ಜಾರಿ ಮಾಡಿದ್ದಾರೆ.

ಕೃತಿಯಲ್ಲಿರುವ ಕೆಲವು ಹೇಳಿಕೆಗಳು ಸಾವರ್ಕರ್‌ ಅವರ ಜೀವನ, ರಾಜಕೀಯ ಚಿಂತನೆ ಹಾಗೂ ಪರಂಪರೆಯ ಬಗ್ಗೆ ತಪ್ಪು ಮತ್ತು ದಾರಿತಪ್ಪಿಸುವ ಚಿತ್ರಣ ನೀಡುತ್ತವೆ ಎಂದು ಅವರು ಆರೋಪಿಸಿದ್ದಾರೆ.

ಸತ್ಯಕಿ ಸಾವರ್ಕರ್‌ ಪರವಾಗಿ ವಕೀಲ ಸಂಗ್ರಾಮ್‌ ಕೊಲ್ಹತ್ಕರ್‌ ಅವರು ನೋಟಿಸ್‌ ಜಾರಿ ಮಾಡಿದ್ದು, ಪುಸ್ತಕದ 201 ಮತ್ತು 443ನೇ ಪುಟಗಳಲ್ಲಿರುವ ಉಲ್ಲೇಖಗಳಿಗೆ ನಿರ್ದಿಷ್ಟವಾಗಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ವಿವಾದಿತ ಅಂಶಗಳನ್ನು ತೆಗೆದುಹಾಕುವುದು ಅಥವಾ ತಿದ್ದುಪಡಿ ಮಾಡುವುದು, ಸ್ಪಷ್ಟೀಕರಣ ನೀಡುವುದು ಹಾಗೂ ಬೇಷರತ್ತಾಗಿ ಕ್ಷಮೆಯಾಚಿಸುವಂತೆ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಲಾಗಿದೆ.

ಪುಟ 201ರಲ್ಲಿ ಕಾಂಗ್ರೆಸ್‌ನ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ದಮನ ಮತ್ತು ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ, ಸಾವರ್ಕರ್‌ ಅವರಂತಹ ಆರ್‌ಎಸ್‌ಎಸ್‌ನ ಹಿರಿಯ ಸಿದ್ಧಾಂತಿಗಳು ಬ್ರಿಟಿಷ್‌ ಆಡಳಿತಗಾರರಿಗೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸುತ್ತಿದ್ದರು ಹಾಗೂ ಅವರ ಸದಸ್ಯರು ಬ್ರಿಟಿಷ್‌ ಅಧಿಕಾರಿಗಳೊಂದಿಗೆ ಮಾಹಿತಿದಾರರಾಗಿ ಸಹಕರಿಸುತ್ತಿದ್ದರು ಎಂಬ ಅರ್ಥ ಬರುವ ಹೇಳಿಕೆ ಇದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆಯು ಸಾವರ್ಕರ್‌ ಅವರು ಇತರ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಿಟಿಷರಿಗೆ ಮಾಹಿತಿ ನೀಡುತ್ತಿದ್ದರು ಅಥವಾ ಸಹಕರಿಸುತ್ತಿದ್ದರು ಎಂಬ ಭಾವನೆ ಮೂಡಿಸುತ್ತದೆ ಎಂದು ಸತ್ಯಕಿ ಸಾವರ್ಕರ್‌ ಆಕ್ಷೇಪಿಸಿದ್ದಾರೆ. ಸಾವರ್ಕರ್‌ ಅವರ ಸೆರೆವಾಸ, ಅವರು ಸಲ್ಲಿಸಿದ್ದ ಅರ್ಜಿಗಳು ಹಾಗೂ ಅಂದಿನ ರಾಜಕೀಯ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಪರಿಗಣಿಸದೆ ಈ ಹೇಳಿಕೆ ನೀಡಲಾಗಿದೆ ಎಂದು ನೋಟಿಸ್‌ನಲ್ಲಿ ವಾದಿಸಲಾಗಿದೆ.

ಅದೇ ರೀತಿ, ಪುಟ 443ರಲ್ಲಿ ಸಾವರ್ಕರ್‌ ಅವರನ್ನು ಹಿಂದುತ್ವ ಸಿದ್ಧಾಂತದ ಸ್ಥಾಪಕರೆಂದು ಉಲ್ಲೇಖಿಸಿ, ಭಾರತವನ್ನು ಹಿಂದೂಗಳು ಸರ್ವೋಚ್ಚರಾಗಿರುವ ರಾಷ್ಟ್ರವಾಗಿ ನೋಡುವ ದೃಷ್ಟಿಕೋನವನ್ನು ಅವರು ಪ್ರತಿಪಾದಿಸಿದ್ದರು ಎಂಬ ಅರ್ಥದ ಹೇಳಿಕೆ ಮಾಡಲಾಗಿದೆ. ಈ ನಿರೂಪಣೆಯೂ ಸಾವರ್ಕರ್‌ ಅವರ ರಾಜಕೀಯ ಮತ್ತು ಸೈದ್ಧಾಂತಿಕ ನಿಲುವುಗಳನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

ಸಾವರ್ಕರ್‌ ಅವರು ಬ್ರಿಟಿಷರ ಆಳ್ವಿಕೆಯಲ್ಲಿ ದೀರ್ಘಕಾಲ ಸೆರೆವಾಸ ಅನುಭವಿಸಿದ್ದು, ಅಂಡಮಾನ್‌ನ ಸೆಲ್ಯುಲಾರ್‌ ಜೈಲಿನಲ್ಲಿಯೂ ಬಂಧನಕ್ಕೊಳಗಾಗಿದ್ದರು ಎಂಬ ಅಂಶವನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಅವರ ಜೈಲುವಾಸದ ಅವಧಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಸಂಪೂರ್ಣ ಐತಿಹಾಸಿಕ ಸಂದರ್ಭ ಮತ್ತು ಹಿನ್ನೆಲೆಯೊಂದಿಗೆ ಪರಿಶೀಲಿಸದೆ ಉಲ್ಲೇಖಿಸುವುದರಿಂದ ಅವರ ಜೀವನ ಮತ್ತು ರಾಜಕೀಯ ಹೋರಾಟದ ಅಪೂರ್ಣ ಹಾಗೂ ವಿರೂಪಗೊಂಡ ಚಿತ್ರಣ ಸಿಗುತ್ತದೆ ಎಂದು ವಾದಿಸಲಾಗಿದೆ.

ನೋಟಿಸ್‌ನಲ್ಲಿ 15 ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಕ್ಷಮೆಯಾಚನೆ, ಸ್ಪಷ್ಟೀಕರಣ ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡದಿದ್ದರೆ ಸೂಕ್ತ ನ್ಯಾಯಾಲಯ ಅಥವಾ ಪ್ರಾಧಿಕಾರದ ಮುಂದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ನವದೆಹಲಿ, ನ.24- ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌ ಕೃತಿಯಲ್ಲಿ ವಿನಾಯಕ ದಾಮೋದರ್‌ ಸಾವರ್ಕರ್‌ ಅವರ ಕುರಿತು ಮಾಡಿರುವ ಉಲ್ಲೇಖಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ಸಾವರ್ಕರ್‌ ಅವರ ಸೋದರಳಿಯ ಸತ್ಯಕಿ ಸಾವರ್ಕರ್‌ ಕಾನೂನು ನೋಟಿಸ್‌ ಜಾರಿ ಮಾಡಿದ್ದಾರೆ. ಕೃತಿಯಲ್ಲಿರುವ ಕೆಲವು ಹೇಳಿಕೆಗಳು ಸಾವರ್ಕರ್‌ ಅವರ ಜೀವನ, ರಾಜಕೀಯ ಚಿಂತನೆ ಹಾಗೂ ಪರಂಪರೆಯ ಬಗ್ಗೆ ತಪ್ಪು ಮತ್ತು ದಾರಿತಪ್ಪಿಸುವ ಚಿತ್ರಣ ನೀಡುತ್ತವೆ ಎಂದು ಅವರು ಆರೋಪಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje