Tuesday, 07 Sep, 4.36 pm ಈ ಸಂಜೆ

Breaking Bangalore
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬಿಬಿಎಂಪಿ ನೌಕರರ ಧರಣಿ

ಬೆಂಗಳೂರು,ಸೆ.7- ಕೋವಿಡ್ ಸೋಂಕಿನಿಂದ ಮೃತಪಟ್ಟ ನೌಕರರು ಹಾಗೂ ಅಧಿಕಾರಿಗಳಿಗೆ ಪರಿಹಾರ ನೀಡಬೇಕು, ನಗರ ಯೋಜನೆ ವಿಭಾಗದಲ್ಲಿ 39 ಹುದ್ದೆ ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇಸುವಂತೆ ಆಗ್ರಹಿಸಿ ಬಿಬಿಎಂಪಿ ನೌಕರರು ಕರ್ತವ್ಯ ಬಹಿಷ್ಕರಿಸಿ ಧರಣಿ ನಡೆಸಿದರು. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನೇತೃತ್ವದಲ್ಲಿ ಜಮಾಯಿಸಿದ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಮೃತ್ ರಾಜï, ಕೋವಿಡ್ ಸಂಕಷ್ಟ ಅವಧಿಯಲ್ಲಿ ಮೃತಪಟ್ಟ ಅಧಿಕಾರಿ, ನೌಕರರಿಗೆ 30 ಲಕ್ಷ ರೂ. ಪ್ರಧಾನ ಮಂತ್ರಿ ಗರೀಬ್ ಪ್ಯಾಕೇಜ್ ಯೋಜನೆ ಜೀವ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ನಿಯೋಜನೆ ಮೇಲೆ 39 ವಿವಿಧ ಅಭಿಯಂತರರನ್ನು ಹೊಸದಾಗಿ ಸೃಜಿಸಲು ಮಂಜೂರಾತಿ ನೀಡಿರುವುದು ಅವೈಜ್ಞಾನಿಕವಾಗಿ ರುವುದರಿಂದ ಕೂಡಲೇ ಈ ಹುದ್ದೆಗಳನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು. ಪಾಲಿಕೆಗೆ ತಿಂಗಳಿಗೆ ಒಂದು ಕೋಟಿಗೂ ಮೇಲ್ಪಟ್ಟು ಹೊರೆಯಾಗಿ ತೆರಿಗೆದಾರರ ದುಡ್ಡು ಅನಗತ್ಯವಾಗಿ ವ್ಯರ್ಥವಾಗುತ್ತಿರುವುದರಿಂದ ಕೂಡಲೇ ಈ ಪ್ರಸ್ತಾವನೆಯನ್ನು ರದ್ದುಪಡಿಸಬೇಕು ಎಂದರು.

ಪಾಲಿಕೆಯಲ್ಲಿರುವ ಎಲ್ಲಾ ವಾಹನಗಳನ್ನು ನಿಲ್ದಾಣ ಮಾಡಲು ಈ ಹಿಂದೆ ಸಿವಿಲ್ ಶೆಡ್ ಇದ್ದು, ಈ ಶೆಡ್ ತೆರವುಗೊಳಿಸಿ ಗರುಡ ಮಾಲ್ ನಿರ್ಮಾಣ ಮಾಡಲಾಗಿದೆ ಎಂದರು.
ಇನ್ನು ಕೋರಮಂಗಲದಲ್ಲಿರುವ ಶೆಡ್ ತೆರವುಗೊಳಿಸಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಟೌನ್‍ಹಾಲ್ ಬಳಿ ಇರುವ ಸಿಟಿ ಶೆಡ್ ತೆರವುಗೊಳಿಸಿ ನೀರಿನ ಟ್ಯಾಂಕ್ ನಿರ್ಮಾಣ ಮಾಡುತ್ತಿರುವುದರಿಂದ ಪಾಲಿಕೆ ವಾಹನ ನಿಲ್ದಾಣ ಮಾಡಲು ಎಲ್ಲೂ ಬದಲಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಟೌನ್‍ಹಾಲ್ ಬಳಿ ನಿರ್ಮಾಣ ಮಾಡುತ್ತಿರುವ ನೀರಿನ ಟ್ಯಾಂಕ್ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.

ಮುಖ್ಯವಾಗಿ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ವಿವಿಧ ವೃಂದದ ಹೆಚ್ಚುವರಿ ಹುದ್ದೆ 5219 ಮಂಜೂರಾತಿ ನೀಡಲು 4 ವರ್ಷಗಳಿಂದ ವಿಳಂಬ ಮಾಡುತ್ತಿರುವುದನ್ನು ಕೂಡಲೇ ಮಂಜೂರಾತಿಯನ್ನು ನೀಡಬೇಕು ಎಂದ ಅವರು, ವಿವಿಧ ವೃಂದದ ತಿರಸ್ಕರಿಸಲಾದ 4452 ಹುದ್ದೆಗಳು ಮಂಜೂರು ಮಾಡುವಂತೆಯೂ ಮನವಿ ಮಾಡಿದರು.

ವೃಂದ ಮತ್ತು ನೇಮಕಾತಿ ನಿಯಮಾವಳಿ ವಿರುದ್ಧವಾಗಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಜಂಟಿ, ಉಪ ಆಯುಕ್ತರು, ಹಿರಿಯ, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಎಲ್ಲಾ ವೃಂದದ ಇತರನ್ನು ಕೂಡಲೇ ಮಾತೃ ಇಲಾಖೆಗೆ ಹಿಂದಿರುಗಿಸಬೇಕು ಎಂದರು.

ಅದೇ ರೀತಿ ಕಂದಾಯ ವಿಭಾಗದ ಲಕ್ಷ್ಮಿ, ಸೋಮಶೇಖರ್ ಅವರ ವರ್ಗಾವಣೆಯನ್ನು ಕಾನೂನು ಬಾಹಿರವಾಗಿ ಶಿಫಾರಸು ಮಾಡಿರುವ ವಿಶೇಷ ಆಯುಕ್ತರ ವಿರುದ್ಧ ಕ್ರಮ ಜರುಗಿಸುವಂತೆ ಅಮೃತ್ ರಾಜ್ ಆಗ್ರಹಿಸಿದರು.

ಬಿಬಿಎಂಪಿ ಅಧಿಕಾರಿ, ನೌಕರರು ಸಮಸ್ಯೆಗಳನ್ನು ಚರ್ಚೆ ಮಾಡುವ ಮೂಲಕ ಬಗೆಹರಿಸಿಕೊಳ್ಳೋಣ. ಸಮಸ್ಯೆಗಳನ್ನು ಮುಖ್ಯ ಆಯುಕ್ತರ ಗಮನಕ್ಕೆ ತಂದು ಪರಿಹಾರ ಪಡೆದುಕೊಳ್ಳೋಣ ಎಂದು ಬಿಬಿಎಂಪಿ ವಿಶೇಷ ಆಯುಕ್ತ ದಯಾನಂದ ತಿಳಿಸಿದರು.

ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನೌಕರರ ಸಮಸ್ಯೆಗಳನ್ನು ಚರ್ಚೆ ಮೂಲಕ ಪರಿಹರಿಸಿಕೊಳ್ಳುವುದು ಸೂಕ್ತ. ಪ್ರತಿಭಟನೆಯಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ. ಬೇಡಿಕೆಗಳ ಬಗ್ಗೆ ಆಯುಕ್ತರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಹೇಳಿದರು. ಧರಣಿಯಲ್ಲಿ ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್, ಸಂಘದ ಕಾರ್ಯಾಧ್ಯಕ್ಷ ಹೆಚ್.ವಿ.ಅಶ್ವಥ್, ಉಪ ಆಯುಕ್ತರಾದ ಲಕ್ಷ್ಮಿ ಸೇರಿದಂತೆ ಪ್ರಮುಖರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top