Share With Friends
ದಕ್ಷಿಣ ಏಷ್ಯಾದ ವ್ಯಾಪಾರ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತವು ಬಾಂಗ್ಲಾದೇಶದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಇತ್ತೀಚಿನ ವ್ಯಾಪಾರ ಅಂಕಿಅಂಶಗಳ ಪ್ರಕಾರ, ಭಾರತವು ಅಮೆರಿಕವನ್ನು ಅಲ್ಪ ಅಂತರದಲ್ಲಿ ಹಿಂದಿಕ್ಕಿದ್ದು, ಬಾಂಗ್ಲಾದೇಶದೊಂದಿಗೆ ತನ್ನ ಆರ್ಥಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ.
ಬಾಂಗ್ಲಾದೇಶದ ಅಂಕಿಅಂಶಗಳ ಬ್ಯೂರೋ(BBS - Bangladesh Bureau of Statistics) ಪ್ರಕಾರ ಚೀನಾ ಇನ್ನೂ ಬಾಂಗ್ಲಾದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿಯೇ ಮುಂದುವರಿದಿದ್ದರೂ, ಭಾರತದ ರಫ್ತು ಪ್ರಮಾಣ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಹೆಚ್ಚುತ್ತಿರುವುದು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಬಾಗ್ಲಾದೇಶದ ಜೊತೆ ಪ್ರಸ್ತುತ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಭಾರತ ಎರಡನೇ ಸ್ಥಾನಕ್ಕೇರಿದರೆ, ಅಮೇರಿಕ ಮೂರನೇ ಸ್ಥಾನಕ್ಕೆ ಕುಸಿದಿದೆ. ಇಂಡೋನೇಷ್ಯಾ ನಾಲ್ಕನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಐದನೇ ಸ್ಥಾನದಲ್ಲಿದೆ. ಭಾರತವು ಅಮೆರಿಕವನ್ನು ಕೇವಲ 110 ಮಿಲಿಯನ್ ಟಾಕಾ (ಶೇ. 0.01) ಗಳ ಅತ್ಯಲ್ಪ ಅಂತರದಿಂದ ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಭಾರತವು ಅಮೆರಿಕವನ್ನು ಹಿಂದಿಕ್ಕಿ ಬಾಂಗ್ಲಾದೇಶದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವುದು ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಗಡಿ ವ್ಯಾಪಾರ, ಅಗತ್ಯ ವಸ್ತುಗಳ ಪೂರೈಕೆ ಹಾಗೂ ಕೈಗಾರಿಕಾ ಸಹಭಾಗಿತ್ವದ ಮೂಲಕ ಭಾರತ-ಬಾಂಗ್ಲಾದೇಶ ಸಂಬಂಧಗಳು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಗಟ್ಟಿಯಾಗುವ ನಿರೀಕ್ಷೆಯಿದೆ.
ಅಮೆರಿಕವನ್ನು ಹಿಂದಿಕ್ಕಿದ ಭಾರತ :
ಬಾಂಗ್ಲಾದೇಶ ಅಂಕಿಅಂಶಗಳ ಬ್ಯೂರೋ (BBS) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2026ರ ಫೆಬ್ರವರಿ ವೇಳೆಗೆ ಬಾಂಗ್ಲಾದೇಶದ ಒಟ್ಟು ವಿದೇಶಿ ವ್ಯಾಪಾರದಲ್ಲಿ ಭಾರತದ ಪಾಲು ಶೇ. 8.47ರಷ್ಟಿದೆ. ಇದು ಸುಮಾರು 123.28 ಬಿಲಿಯನ್ ಟಾಕಾ(ಬಾಂಗ್ಲಾದೇಶದ ಕರೆನ್ಸಿ )ಗಳಿಗೆ ಸಮನಾಗಿದೆ.
ಇನ್ನೊಂದೆಡೆ, ಅಮೆರಿಕದ ಪಾಲು ಶೇ. 8.46ರಷ್ಟಿದ್ದು, ಸುಮಾರು 123.17 ಬಿಲಿಯನ್ ಟಾಕಾಗಳಷ್ಟಿದೆ. ಎರಡೂ ದೇಶಗಳ ನಡುವಿನ ಅಂತರ ಅತಿ ಕಡಿಮೆ ಇದ್ದರೂ, ಭಾರತವು ಎರಡನೇ ಸ್ಥಾನಕ್ಕೇರಿರುವುದು ಆರ್ಥಿಕವಾಗಿ ಮಹತ್ವದ ಬೆಳವಣಿಗೆಯಾಗಿದೆ.
ಮೊದಲ ಸ್ಥಾನದಲ್ಲಿ ಚೀನಾ :
ಭಾರತ ಮತ್ತು ಅಮೆರಿಕ ನಡುವಿನ ಸ್ಥಾನ ಬದಲಾವಣೆಯ ನಡುವೆಯೂ, ಚೀನಾ ಬಾಂಗ್ಲಾದೇಶದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಮುಂದುವರಿದಿದೆ. 2026ರ ಫೆಬ್ರವರಿಯಲ್ಲಿ ಬಾಂಗ್ಲಾದೇಶದ ಒಟ್ಟು ವ್ಯಾಪಾರದಲ್ಲಿ ಚೀನಾದ ಪಾಲು ಶೇ. 21.21ರಷ್ಟಿದ್ದು, ಇದರ ಮೌಲ್ಯ ಸುಮಾರು 308.79 ಬಿಲಿಯನ್ ಟಾಕಾಗಳಾಗಿದೆ.
ಬಾಂಗ್ಲಾದೇಶಕ್ಕೆ ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕೆಳಗಿನ ವಸ್ತುಗಳು ರಫ್ತಾಗುತ್ತಿವೆ.
ಕೈಗಾರಿಕಾ ಕಚ್ಚಾ ವಸ್ತುಗಳು, ಬಂಡವಾಳ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು, ಜವಳಿ ಉದ್ಯಮದ ಇನ್‌ಪುಟ್‌ಗಳು, ರಾಸಾಯನಿಕಗಳು ಮತ್ತು ಗ್ರಾಹಕ ವಸ್ತುಗಳು ಸೇರಿವೆ. ಸ್ಪರ್ಧಾತ್ಮಕ ಬೆಲೆಗಳು ಹಾಗೂ ಮುಂದೂಡಿದ ಪಾವತಿ ಸೌಲಭ್ಯಗಳು ಚೀನಾವನ್ನು ಬಾಂಗ್ಲಾದೇಶಕ್ಕೆ ಪ್ರಮುಖ ವ್ಯಾಪಾರ ಪಾಲುದಾರನನ್ನಾಗಿ ಉಳಿಸಿವೆ.
ಭಾರತದ ಸ್ಥಾನ ಬಲವಾಗಲು ಕಾರಣವೇನು..?
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದೀರ್ಘ ಭೂ ಗಡಿ ವ್ಯಾಪಾರವನ್ನು ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ನಡೆಸಲು ನೆರವಾಗುತ್ತಿದೆ. ಇದರಿಂದ ಸಾಗಾಟದ ಸಮಯ ಹಾಗೂ ಲಾಜಿಸ್ಟಿಕ್ಸ್ ವೆಚ್ಚಗಳು ಕಡಿಮೆಯಾಗುತ್ತವೆ.
ಬಾಂಗ್ಲಾದೇಶವು ಭಾರತದಿಂದ ಪ್ರಮುಖವಾಗಿ ಅಕ್ಕಿ, ಈರುಳ್ಳಿ, ಸಕ್ಕರೆ, ಆಹಾರ ಪದಾರ್ಥಗಳು, ಹತ್ತಿ, ನೂಲು ಮತ್ತು ಕೈಗಾರಿಕಾ ಮಧ್ಯಂತರ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ವಿಶೇಷವಾಗಿ ಬಾಂಗ್ಲಾದೇಶದ ಜವಳಿ ಹಾಗೂ ಉತ್ಪಾದನಾ ವಲಯಗಳು ಭಾರತೀಯ ಕಚ್ಚಾ ವಸ್ತುಗಳ ಮೇಲೆ ಹೆಚ್ಚಿನ ಮಟ್ಟದಲ್ಲಿ ಅವಲಂಬಿತವಾಗಿವೆ.
ಇತರೆ ಪ್ರಮುಖ ವ್ಯಾಪಾರ ಪಾಲುದಾರರು : ಬಾಂಗ್ಲಾದೇಶದ ವ್ಯಾಪಾರ ಜಾಲವು ಹಲವು ರಾಷ್ಟ್ರಗಳೊಂದಿಗೆ ವಿಸ್ತರಿಸಿದೆ. ಇಂಡೋನೇಷ್ಯಾ ನಾಲ್ಕನೇ ಸ್ಥಾನದಲ್ಲಿದ್ದು, ಮುಖ್ಯವಾಗಿ ಕಲ್ಲಿದ್ದಲು, ಖಾದ್ಯ ತೈಲಗಳು, ಕೈಗಾರಿಕಾ ಕಚ್ಚಾ ವಸ್ತುಗಳನ್ನು ರಫ್ತು ಮಾಡುತ್ತಿದೆ.
ಬ್ರೆಜಿಲ್ ಐದನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಬಾಂಗ್ಲಾದೇಶಕ್ಕೆ ಸೋಯಾಬೀನ್, ಸಕ್ಕರೆ, ಖಾದ್ಯ ತೈಲಗಳು, ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ.
imageಬಾಂಗ್ಲಾದೇಶದ ಅಂಕಿಅಂಶಗಳ ಬ್ಯೂರೋ (BBS) ವರದಿಯ ಪ್ರಕಾರ, ಪ್ರಮುಖ 5 ವ್ಯಾಪಾರ ಪಾಲುದಾರ ರಾಷ್ಟ್ರಗಳ ಪಟ್ಟಿ ಮತ್ತು ಅವುಗಳ ವ್ಯಾಪಾರ ಮೊತ್ತದ ವಿವರ ಇಲ್ಲಿದೆ:
| ಶ್ರೇಣಿ | ದೇಶ (Nation) | ವ್ಯಾಪಾರ ಪಾಲು (Trade Share %) | ಒಟ್ಟು ವ್ಯಾಪಾರ ಮೊತ್ತ (Trade Amount) |
| 1 | ಚೀನಾ (China) | 21.21% | 308.79 ಬಿಲಿಯನ್ ಟಾಕಾ |
| 2 | ಭಾರತ (India) | 8.47% | 123.28 ಬಿಲಿಯನ್ ಟಾಕಾ |
| 3 | ಅಮೆರಿಕ (United States) | 8.46% | 123.17 ಬಿಲಿಯನ್ ಟಾಕಾ |
| 4 | ಇಂಡೋನೇಷ್ಯಾ (Indonesia) | ಲಭ್ಯವಿಲ್ಲ | ಅಂಕಿಅಂಶಗಳಲ್ಲಿ ಮೊತ್ತವನ್ನು ಉಲ್ಲೇಖಿಸಿಲ್ಲ |
| 5 | ಬ್ರೆಜಿಲ್ (Brazil) | ಲಭ್ಯವಿಲ್ಲ | ಅಂಕಿಅಂಶಗಳಲ್ಲಿ ಮೊತ್ತವನ್ನು ಉಲ್ಲೇಖಿಸಿಲ್ಲ |

