Share With Friends
ಭಾರತ ಸರ್ಕಾರವು ಇಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ E30 ಪೆಟ್ರೋಲ್ ಸೇರಿದಂತೆ ಹೊಸ ಇಂಧನ ಮಾನದಂಡಗಳನ್ನು ಅಧಿಸೂಚನೆ ಮಾಡಿದೆ. 2026ರ ಮೇ 18ರಂದು ಭಾರತೀಯ ಮಾನದಂಡಗಳ ಬ್ಯೂರೋ (BIS) ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, E22, E25, E27 ಮತ್ತು E30 ಪೆಟ್ರೋಲ್‌ಗಳಿಗೆ ತಾಂತ್ರಿಕ ಮಾನದಂಡಗಳನ್ನು ನಿಗದಿಪಡಿಸಿದೆ.
ಈ ಮೂಲಕ ಜಾಗತಿಕ ಕಚ್ಚಾ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಇಂಧನ ಸ್ವಾವಲಂಬನೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಸದ್ಯ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣ ದಟ್ಟವಾಗಿದೆ. ವಿಶ್ವದ ತೈಲ ಪೂರೈಕೆಯ ಶೇಕಡಾ 20 ರಷ್ಟನ್ನು ನಿಯಂತ್ರಿಸುವ ಪ್ರಮುಖ 'ಹಾರ್ಮುಜ್ ಜಲಸಂಧಿ' (Strait of Hormuz) ಜಲಮಾರ್ಗ ಮುಚ್ಚುವಿಕೆ ಮುಂತಾದ ಬಿಕ್ಕಟ್ಟುಗಳಿಂದಾಗಿ ಕಚ್ಚಾ ತೈಲ ಸರಬರಾಜಿನಲ್ಲಿ ತೀವ್ರ ಅಡಚಣೆ ಉಂಟಾಗುತ್ತಿದೆ.
ಇಂತಹ ಕಠಿಣ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರವು ವಿದೇಶಿ ತೈಲದ ಮೇಲಿನ ನಮ್ಮ ಅವಲಂಬನೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ. ಇದು ದೇಶೀಯವಾಗಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯದ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ.
ದೇಶದ ಎಥನಾಲ್ ಮಿಶ್ರಣ ಕಾರ್ಯಕ್ರಮವನ್ನು ಮತ್ತಷ್ಟು ವಿಸ್ತರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಪ್ರಸ್ತುತ ಇರುವ E20 (ಶೇ. 20 ಎಥನಾಲ್ ಮಿಶ್ರಣ) ಮಿತಿಯನ್ನು ಮೀರಿ, ಹೊಸದಾಗಿ E30 ಪೆಟ್ರೋಲ್ ಮಾನದಂಡಗಳನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಭಾರತೀಯ ಮಾನದಂಡಗಳ ಬ್ಯೂರೋ (BIS) ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಹೊಸ ಇಂಧನ ಮಿಶ್ರಣಗಳಿಗೆ ಹಸಿರು ನಿಶಾನೆ ನೀಡಿದೆ.
BIS ಅಧಿಸೂಚನೆಯು ವಾಹನಗಳಲ್ಲಿ ಬಳಸುವ ಪೆಟ್ರೋಲ್-ಇಥೆನಾಲ್ ಮಿಶ್ರಣಗಳಿಗೆ ಗುಣಮಟ್ಟದ ಮಾನದಂಡಗಳನ್ನು ನಿಗದಿಪಡಿಸಿದೆ. ಆದರೆ ಈ ಅಧಿಸೂಚನೆಯಿಂದ ದೇಶದಾದ್ಯಂತ ತಕ್ಷಣವೇ E30 ಪೆಟ್ರೋಲ್ ಮಾರಾಟ ಆರಂಭವಾಗುವುದಿಲ್ಲ. ಬದಲಾಗಿ, ಭವಿಷ್ಯದ ಫ್ಲೆಕ್ಸ್-ಫ್ಯುಯೆಲ್ ವಾಹನಗಳು ಮತ್ತು ಹೆಚ್ಚಿನ ಇಥೆನಾಲ್ ಹೊಂದಾಣಿಕೆಯ ವಾಹನಗಳ ಅಭಿವೃದ್ಧಿಗೆ ಇದು ಮಾರ್ಗದರ್ಶಿಯಾಗಲಿದೆ.
⮞ ಇಥೆನಾಲ್ ಮಿಶ್ರಿತ ಪೆಟ್ರೋಲ್ ಎಂದರೇನು?
ಇಥೆನಾಲ್ ಮಿಶ್ರಿತ ಪೆಟ್ರೋಲ್ ಎಂದರೆ ನಿರ್ಜಲ (Anhydrous) ಇಥೆನಾಲ್ ಅನ್ನು ಪೆಟ್ರೋಲ್‌ಗೆ ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಬಳಸುವ ಇಂಧನ.
E20 - 20% ಇಥೆನಾಲ್ + 80% ಪೆಟ್ರೋಲ್
E30 - 30% ಇಥೆನಾಲ್ + 70% ಪೆಟ್ರೋಲ್
ಭಾರತ ಈಗಾಗಲೇ E20 ಇಂಧನ ಬಳಕೆಯನ್ನು ಉತ್ತೇಜಿಸುತ್ತಿದ್ದು, ಹೊಸ ಮಾನದಂಡಗಳು E20ಕ್ಕಿಂತ ಹೆಚ್ಚಿನ ಇಥೆನಾಲ್ ಮಿಶ್ರಣಕ್ಕೆ ತಾಂತ್ರಿಕ ನೆಲೆ ಒದಗಿಸಿವೆ.
⮞ ವಾಹನಗಳ ಮೇಲೆ ಪರಿಣಾಮದ ಅಧ್ಯಯನ :
ಪೆಟ್ರೋಲಿಯಂ ಸಚಿವಾಲಯವು Automotive Research Association of India ಸಂಸ್ಥೆಗೆ E25 ಇಂಧನದ ಪರಿಣಾಮದ ಕುರಿತು ಅಧ್ಯಯನ ನಡೆಸುವ ಜವಾಬ್ದಾರಿ ನೀಡಿದೆ. ಈ ಅಧ್ಯಯನದಲ್ಲಿ E10 ಹಾಗೂ E20 ಮಾನದಂಡಗಳಿಗೆ ಅನುಗುಣವಾದ ವಾಹನಗಳ ಮೈಲೇಜ್ ಮತ್ತು ಎಂಜಿನ್ ಆಯುಷ್ಯದ ಮೇಲೆ E25 ಇಂಧನದ ಪರಿಣಾಮವನ್ನು ಪರಿಶೀಲಿಸಲಾಗುತ್ತದೆ.
⮞E85 ಮತ್ತು E100 ಕುರಿತ ಪರಿಶೀಲನೆ
ಸರ್ಕಾರವು E85 (85% ಇಥೆನಾಲ್) ಮತ್ತು E100 (100% ಇಥೆನಾಲ್) ಇಂಧನಗಳ ಬಳಕೆಯ ಸಾಧ್ಯತೆಯನ್ನೂ ಪರಿಶೀಲಿಸುತ್ತಿದೆ. ಇದಕ್ಕಾಗಿ ವಾಹನ ತಯಾರಿಕಾ ವಲಯ ಮತ್ತು ಇಂಧನ ವಿತರಣಾ ಮೂಲಸೌಕರ್ಯದ ಸಿದ್ಧತೆಯನ್ನು ಅಧ್ಯಯನ ಮಾಡಲಾಗುತ್ತಿದೆ.
⮞ ಏನಿದು ಹೊಸ ನಿಯಮ..? (BIS ಹೊಸ ಮಾನದಂಡಗಳು)
ಭಾರತ ಸರ್ಕಾರವು ಹಂತ ಹಂತವಾಗಿ ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ BIS ಇಂಧನ ವಿಶೇಷಣಗಳಿಗಾಗಿ ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ:
E22 (ಶೇ. 22 ಎಥನಾಲ್ ಮಿಶ್ರಣ)
E25 (ಶೇ. 25 ಎಥನಾಲ್ ಮಿಶ್ರಣ)
E27 (ಶೇ. 27 ಎಥನಾಲ್ ಮಿಶ್ರಣ)
E30 (ಶೇ. 30 ಎಥನಾಲ್ ಮಿಶ್ರಣ)
ಈ ಹೊಸ ಮಾನದಂಡಗಳ ಪ್ರಕಟಣೆಯೊಂದಿಗೆ, ಭಾರತವು ತನ್ನ ಜೈವಿಕ ಇಂಧನ (Biofuel) ರೋಡ್‌ಮ್ಯಾಪ್‌ನ ಮುಂದಿನ ಹಂತಕ್ಕೆ ಅಧಿಕೃತವಾಗಿ ಮುನ್ನಡೆದಂತಾಗಿದೆ.
⮞ ಈ ನಿರ್ಧಾರಕ್ಕೆ ಮುಖ್ಯ ಕಾರಣಗಳೇನು..?
ಕಚ್ಚಾ ತೈಲ ಬಿಕ್ಕಟ್ಟು (Crude Oil Crisis): ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯಗಳಿಂದ ಉಂಟಾಗುವ ಆರ್ಥಿಕ ಹೊರೆಯನ್ನು ತಗ್ಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ವಿದೇಶಿ ವಿನಿಮಯ ಉಳಿತಾಯ: ಭಾರತವು ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಪೆಟ್ರೋಲ್‌ನಲ್ಲಿ ಶೇ. 30 ರವರೆಗೆ ದೇಶೀಯವಾಗಿ ಉತ್ಪಾದಿಸುವ ಎಥನಾಲ್ ಮಿಶ್ರಣ ಮಾಡುವುದರಿಂದ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗಲಿದೆ.
ಪರಿಸರ ಮಾಲಿನ್ಯ ನಿಯಂತ್ರಣ: ಎಥನಾಲ್ ಒಂದು ಜೈವಿಕ ಇಂಧನವಾಗಿದ್ದು, ಇದು ಸಾಂಪ್ರದಾಯಿಕ ಪೆಟ್ರೋಲ್‌ಗಿಂತ ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು (Carbon Emissions) ಹೊಂದಿರುತ್ತದೆ. ಇದು ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರೈತರಿಗೆ ಅನುಕೂಲ: ಎಥನಾಲ್ ಅನ್ನು ಹೆಚ್ಚಾಗಿ ಕಬ್ಬು, ಹಾಳಾದ ಧಾನ್ಯಗಳು ಮತ್ತು ಕೃಷಿ ತ್ಯಾಜ್ಯಗಳಿಂದ ಉತ್ಪಾದಿಸಲಾಗುತ್ತದೆ. ಹೀಗಾಗಿ ಎಥನಾಲ್ ಬಳಕೆ ಹೆಚ್ಚಾದಂತೆ ದೇಶದ ರೈತರ ಆದಾಯವೂ ವೃದ್ಧಿಯಾಗಲಿದೆ.
⮞ ಮುಂದಿನ ಸವಾಲು ಮತ್ತು ಸಿದ್ಧತೆಗಳು :
E20 ನಿಂದ E30 ಇಂಧನ ಬಳಕೆಗೆ ಪರಿವರ್ತನೆಯಾಗಲು ದೇಶದ ವಾಹನ ಉದ್ಯಮದಲ್ಲಿ (Automobile Industry) ಕೆಲವು ಬದಲಾವಣೆಗಳ ಅಗತ್ಯವಿದೆ. ವಾಹನಗಳ ಎಂಜಿನ್‌ಗಳು ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣವನ್ನು ತಡೆದುಕೊಳ್ಳುವಂತೆ (Ethanol-compliant engines) ಇರಬೇಕಾಗುತ್ತದೆ. ಸರ್ಕಾರದ ಈ ಹೊಸ ನಾರ್ಮ್ಸ್ ಬೆನ್ನಲ್ಲೇ ವಾಹನ ತಯಾರಕ ಕಂಪನಿಗಳು ಮತ್ತು ತೈಲ ಸಂಸ್ಕರಣಾ ಘಟಕಗಳು (Refineries) ತಮ್ಮ ತಂತ್ರಜ್ಞಾನವನ್ನು ನವೀಕರಿಸಲು ಸಜ್ಜಾಗುತ್ತಿವೆ.
⮞ ಭಾರತದಲ್ಲಿ "ಎಥೆನಾಲ್ 20%' ಜಾರಿ ವಿವಾದ:
1.ಗ್ರಾಹಕರಲ್ಲಿ ಅರಿವಿನ ಕೊರತೆ ಮತ್ತು ಆಯ್ಕೆಯ ಅಭಾವ: 2025ರ ವೇಳೆಗೆ ದೇಶಾದ್ಯಂತ ಇ20 ಪೂರೈಸುವ ಗುರಿಯನ್ನು ಸರಕಾರ ಹೊಂದಿತ್ತು. ಆದರೆ, ಅನೇಕ ಪೆಟ್ರೋಲ್ ಬಂಕ್‌ಗಳಲ್ಲಿ ಇ20 ಇಂಧನ ನೀಡುತ್ತಿದ್ದರೂ ಗ್ರಾಹಕರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಅವರಲ್ಲಿ ಅರಿವು ಮೂಡಿಸದೇ ಇರುವುದು ಹಿನ್ನಡೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
2.ಮೈಲೇಜ್ ಮತ್ತು ಮೌಲ್ಯದ ಕಡಿತ: ಇ20 ಬಳಸುವುದರಿಂದ ವಾಹನಗಳ ಮೈಲೇಜ್ ಸಾಮಾನ್ಯ ಪೆಟ್ರೋಲ್‌ಗಿಂತ ಸುಮಾರು ಶೇ. 6-8ರಷ್ಟು ಕಡಿಮೆಯಾಗುತ್ತದೆ. ಇಂಧನ ಬೆಲೆ ಕಡಿಮೆಯಾಗದಿದ್ದರೂ, ಮೈಲೇಜ್ ಕಡಿತದಿಂದಾಗಿ ಗ್ರಾಹಕರು ಪರೋಕ್ಷವಾಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
3.ಮೆಕ್ಯಾನಿಕಲ್ ದೂರುಗಳು: 2023ಕ್ಕೂ ಮುನ್ನ ತಯಾರಾದ ವಾಹನಗಳು ಇ20ಗೆ ಹೊಂದಾಣಿಕೆಯಾಗುವ ಗುಣಗಳನ್ನು ಹೊಂದಿಲ್ಲ. ಇದರಿಂದ ಸಾವಿರಾರು ವಾಹನಗಳ ಎಂಜಿನ್ ಬಿಡಿ ಭಾಗಗಳು, ಇಂಧನ ಫಿಲ್ಟರ್‌ಗಳು ಬೇಗನೆ ಹಾಳಾಗುತ್ತಿವೆ ಎಂಬುದು ಆಟೋಮೊಬೈಲ್ ತಜ್ಞರ ಮತ್ತು ಗ್ರಾಹಕರ ಪ್ರಮುಖ ಆರೋಪವಾಗಿದೆ.
4.ಹಳೆಯ ವಾಹನ ಮಾಲಕರಿಗೆ ಸಂಕಷ್ಟ: ಭವಿಷ್ಯದಲ್ಲಿ ಇಂಧನ ಮಾರುಕಟ್ಟೆಯಲ್ಲಿ ಇ85 ಅಥವಾ ಕೇವಲ ಇ20 ಇಂಧನ ಮಾತ್ರ ಲಭ್ಯವಿದ್ದಲ್ಲಿ, ಹಳೆಯ ವಾಹನ ಮಾಲಕರು (ಬಿಎಸ್ 3, ಬಿಎಸ್ 4 ಮತ್ತು ಹಳೆಯ ಬಿಎಸ್ 6 ವಾಹನಗಳು) ಭಾರೀ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ವಾಹನ ಸ್ಟಾರ್ಟ್, ದಾರಿ ಮಧ್ಯೆ ಸ್ಥಗಿತ, ಬೆಂಕಿ ಹೊತ್ತಿಕೊಳ್ಳುವುದು ಸೇರಿ ಇನ್ನಿತರ ಸಮಸ್ಯೆಗಳನ್ನು ಎದುರಿಸಬಹುದು.

