Share With Friends
ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವಾದ ಯುಐಡಿಎಐ (UIDAI)ಗೆ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (CEO) ಸೌರಭ್ ವಿಜಯ್ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಮೇ 18ರಂದು ಅಧಿಕೃತವಾಗಿ ಹುದ್ದೆ ವಹಿಸಿಕೊಂಡಿದ್ದಾರೆ.
ಹಿಂದಿನ ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು.
ಬಳಿಕ ಯುಐಡಿಎಐ ಉಪ ಮಹಾನಿರ್ದೇಶಕ ವಿವೇಕ್ ಚಂದ್ರ ವರ್ಮಾ ಅವರಿಗೆ ಏಪ್ರಿಲ್ 23ರಂದು ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು.
ಸೌರಭ್ ವಿಜಯ್ ಯಾರು..?
ಸೌರಭ್ ವಿಜಯ್ ಅವರು 1998ರ ಮಹಾರಾಷ್ಟ್ರ ಕೇಡರ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದಾರೆ. ಇವರು ಐಐಟಿ ದೆಹಲಿಯಿಂದ (IIT Delhi) ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ (B.Tech) ಪದವಿ ಪಡೆದಿದ್ದಾರೆ. ಯುಐಡಿಎಐಗೆ ಸೇರುವ ಮೊದಲು ಮಹಾರಾಷ್ಟ್ರ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ (ವೆಚ್ಚ) ಆಗಿ ಸೇವೆ ಸಲ್ಲಿಸುತ್ತಿದ್ದರು.
ಇದರ ಜೊತೆಗೆ, ಅವರು ಕೇಂದ್ರ ಸರ್ಕಾರದ ವಿವಿಧ ಮಹತ್ವದ ಹುದ್ದೆಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಿರ್ದೇಶಕರಾಗಿ ಹಾಗೂ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ವಿಶ್ವ ಬ್ಯಾಂಕ್‌ನಲ್ಲಿ ಭಾರತ, ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾ ದೇಶಗಳಿಗೆ ಕಾರ್ಯನಿರ್ವಾಹಕ ನಿರ್ದೇಶಕರ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಯುಐಡಿಎಐ (UIDAI) ಎಂದರೇನು?
ಭಾರತ ಸರ್ಕಾರವು ಆಧಾರ್ ಕಾಯ್ದೆ 2016ರ ಅಡಿಯಲ್ಲಿ 2016ರ ಜುಲೈ 12ರಂದು ಯುಐಡಿಎಐ ಅನ್ನು ಕಾನೂನುಬದ್ಧ ಸಂಸ್ಥೆಯಾಗಿ ಸ್ಥಾಪಿಸಿತು. ಇದು ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.
ಆಧಾರ್ ಸಂಖ್ಯೆಯನ್ನು ದೇಶದ ಪ್ರತಿಯೊಬ್ಬ ನಿವಾಸಿಗೂ ನೀಡುವ ಉದ್ದೇಶದಿಂದ ಯುಐಡಿಎಐ ಸ್ಥಾಪಿಸಲಾಯಿತು. ಸಂಸ್ಥೆಯ ಪ್ರಧಾನ ಕಚೇರಿ ನವದೆಹಲಿಯಲ್ಲಿದ್ದು, ಬೆಂಗಳೂರು ಸೇರಿದಂತೆ ದೇಶದ ಎಂಟು ಪ್ರಾದೇಶಿಕ ಕಚೇರಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಬೆಂಗಳೂರು ಹೆಬ್ಬಾಳದಲ್ಲಿ ಹಾಗೂ ಹರಿಯಾಣದ ಮನೇಸರ್‌ನಲ್ಲಿ ಯುಐಡಿಎಐ ಡೇಟಾ ಕೇಂದ್ರಗಳನ್ನು ಹೊಂದಿದೆ.
ಆಧಾರ್ ಬಗ್ಗೆ :
ಆಧಾರ್ ಒಂದು 12 ಅಂಕಿಯ ವಿಶಿಷ್ಟ ಗುರುತು ಸಂಖ್ಯೆ. ಹೆಸರು, ಜನ್ಮ ದಿನಾಂಕ, ವಿಳಾಸ, ಬೆರಳಚ್ಚು, ಕಣ್ಣುಗಳ ಐರಿಸ್ ಮಾಹಿತಿ ಹಾಗೂ ಮುಖದ ಛಾಯಾಚಿತ್ರದ ಆಧಾರದ ಮೇಲೆ ವ್ಯಕ್ತಿಯನ್ನು ಗುರುತಿಸಲಾಗುತ್ತದೆ.
ಆಧಾರ್ ಗುರುತಿನ ಪ್ರಮಾಣಪತ್ರವಾಗಿದ್ದು, ಅದು ಭಾರತೀಯ ನಾಗರಿಕತ್ವದ ದಾಖಲೆ ಅಲ್ಲ. ಆಧಾರ್ ನೋಂದಣಿ, ದೃಢೀಕರಣ ಹಾಗೂ ಮಾಹಿತಿಯ ಭದ್ರತೆ ನಿರ್ವಹಣೆ ಜವಾಬ್ದಾರಿ ಯುಐಡಿಎಐಗೆ ಸೇರಿದೆ. ಪ್ರಥಮ ಆಧಾರ್ ಸಂಖ್ಯೆ 2010ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ನಂದೂರ್ಬಾರ್ ನಿವಾಸಿಗೆ ನೀಡಲಾಗಿತ್ತು.

