ಬೆಂಗಳೂರು : ಬೆಂಗಳೂರಿನ (Bengaluru) ಪ್ರಸಿದ್ಧ ತಾಣವಾದ ಲಾಲ್ಬಾಗ್ (Lalbagh) ನಲ್ಲಿ ಪ್ರಕೃತಿ ಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಮತ್ತೊಂದು ವಿನೂತನ ಅನುಭವ ನೀಡಲು ತೋಟಗಾರಿಕಾ ಇಲಾಖೆ ಸಜ್ಜಾಗಿದೆ.
ಹೌದು, ಸಿಂಗಾಪುರದ ಮರೀನಾ ಬೇ ಪ್ರದೇಶದಲ್ಲಿರುವ ಜಗತ್ಪ್ರಸಿದ್ಧ 'ಗಾರ್ಡನ್ಸ್ ಬೈ ದಿ ಬೇ' ಪರಿಕಲ್ಪನೆಯ ಮಾದರಿಯಲ್ಲಿ, ಇದೇ ಮೊದಲ ಬಾರಿಗೆ ಲಾಲ್ಬಾಗ್ನಲ್ಲಿ 'ಔಟ್ಡೋರ್ ಫಾಗ್ ಆಂಡ್ ಮಿಸ್ಟಿ ಶೇಡ್ ಗಾರ್ಡನ್' (ಹೊರಾಂಗಣ ನೆರಳು, ಮಂಜಿನ ಉದ್ಯಾನ) ನಿರ್ಮಾಣಗೊಳ್ಳುತ್ತಿದೆ.
ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ರೂಪಿಸಲಾಗುತ್ತಿರುವ ಈ ಉದ್ಯಾನವು ಪ್ರವಾಸಿಗರಿಗೆ ದಟ್ಟಾರಣ್ಯದ ತಂಪು ಅನುಭವವನ್ನು ಉಣಬಡಿಸಲಿದೆ. ಲಾಲ್ಬಾಗ್ ಬಂಡೆಯ ಸಮೀಪವಿರುವ ಬೋನ್ಸಾಯ್ ವೃತ್ತದಿಂದ ಹೊಸ ಮ್ಯೂಸಿಯಂ ಕಟ್ಟಡದವರೆಗಿನ ಎರಡೂವರೆ ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಈ ಮಂಜಿನ ಉದ್ಯಾನವು ರೂಪುಗೊಳ್ಳುತ್ತಿದೆ. ಈಗಾಗಲೇ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂಬರುವ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನದ ವೇಳೆಗೆ ಈ ಉದ್ಯಾನ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗುವ ಸಾಧ್ಯತೆ ಇದೆ. ನೆಲ ಸಿದ್ಧತೆ, ಸ್ಪ್ರಿಂಕ್ಲರ್ ಹಾಗೂ ನೈಸರ್ಗಿಕ ಕಲ್ಲುಗಳ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, ಮಂಜು ಹರಡುವ ಸುಮಾರು 300 ಫಾಗರ್ಗಳ ಅಳವಡಿಕೆ ಪ್ರಕ್ರಿಯೆ ಮುಂದುವರಿದಿದೆ. ಬಂಡೆಯ ಮೇಲಿಂದ ಹರಿದುಬರುವ ಮಳೆ ನೀರನ್ನು ಸಂರಕ್ಷಿಸಲು ಈ ಹಿಂದೆ ನಿರ್ಮಿಸಲಾಗಿದ್ದ ನೈಸರ್ಗಿಕ ಕಣಿವೆಗೆ ಈಗ ಹೊಸ ರೂಪ ನೀಡಲಾಗಿದೆ. ಈ ವ್ಯಾಲಿಗೆ ಅಡ್ಡಲಾಗಿ ಸುಮಾರು 12 ಕಡೆ ಸಣ್ಣ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಅಂದಾಜು 2.50 ರಿಂದ 3 ಕೋಟಿ ಲೀಟರ್ ಮಳೆ ನೀರು ಸಂಗ್ರಹವಾಗಲಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಕಣಿವೆಯ ಎರಡೂ ಬದಿಗಳಲ್ಲಿ ನೈಸರ್ಗಿಕ ಕಲ್ಲುಗಳಿಂದ ಸುಂದರವಾದ ಕಟ್ಟಡ ಮತ್ತು ಮೆಟ್ಟಿಲುಗಳನ್ನು ಆಕರ್ಷಕವಾಗಿ ಜೋಡಿಸಲಾಗಿದೆ. ಕಣಿವೆಯುದ್ದಕ್ಕೂ ಸುಮಾರು 200 ತಳಿಯ ಅಪರೂಪದ ಸಸ್ಯಗಳನ್ನು ನೆಡಲಾಗುತ್ತಿದೆ. ಇವುಗಳಲ್ಲಿ ಬಂಡೀಪುರ, ನಾಗರಹೊಳೆ ಹಾಗೂ ಕೆಮ್ಮಣ್ಣುಗುಂಡಿಯಂತಹ ಅರಣ್ಯಗಳಿಂದ ತರಲಾದ ಮಾಸಸ್ (ತೇವಾಂಶ ಭರಿತ ಪಾಚಿ) ಅನ್ನು ಸುಮಾರು 170 ಮರಗಳ ಕಾಂಡಗಳಿಗೆ ಸುತ್ತಿ ದಟ್ಟಾರಣ್ಯದ ಭಾವನೆ ಮೂಡಿಸಲಾಗುತ್ತಿದೆ. ಇದರೊಂದಿಗೆ 50 ರಿಂದ 75 ತಳಿಯ ಆರ್ಕಿಡ್ ಪುಷ್ಪಗಳು, ಪರಾವಲಂಬಿಯಲ್ಲದ ವೃಕ್ಷ ಸಸ್ಯಗಳು, ಏರ್ ಪ್ಲಾಂಟ್ಗಳು, ನಾನಾ ಬಗೆಯ ಜರೀಗಿಡಗಳು ಮತ್ತು ಬ್ರೊಮೆಲಿಯಾಡ್ಸ್ಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತಿದೆ. ಕೆಳಭಾಗದಲ್ಲಿ ನೆರಳಿನ ಹಸಿರು ಗಿಡಗಳು ಹಾಗೂ ಮೇಲ್ಭಾಗದಲ್ಲಿ ಕೃತಕ ಮಂಜಿನಿಂದ ಆವೃತವಾದ ವಾತಾವರಣವು ಪ್ರವಾಸಿಗರಿಗೆ ಬೇಸಿಗೆಯಲ್ಲೂ ತಂಪಾದ ಅನುಭವವನ್ನು ನೀಡಲಿದೆ. HASANAMBA TEMPLE: ರೈತರ ಸಂಕಷ್ಟದ ನಡುವೆ ಹಾಸನಾಂಬ ಜಾತ್ರೆಗೆ ದುಂದುವೆಚ್ಚ - ರೇವಣ್ಣ ಗರಂ

