ಕೋಲ್ಕತ್ತಾ: ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಅಚ್ಚರಿಯ ಹಾಗೂ ಆತಂಕಕಾರಿ ಘಟನೆಯೊಂದು ಸಂಭವಿಸಿದೆ. ನಿಲ್ದಾಣದ ಏಪ್ರನ್ ಪ್ರದೇಶದಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ (Indigo Flight) ಚಾಲಕನಿಲ್ಲದ (Unmanned) ವಾಹನವೊಂದು ಬಂದು ಜೋರಾಗಿ ಡಿಕ್ಕಿ ಹೊಡೆದಿದೆ.
ಈ ಘಟನೆಯ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಸೇವೆಯಿಂದ ಸ್ಥಗಿತಗೊಳಿಸಿ ತಪಾಸಣೆಗೆ ಒಳಪಡಿಸಲಾಗಿದೆ. ವಿಮಾನ ನಿಲ್ದಾಣದ ಪಾರ್ಕಿಂಗ್ ಬೇ 51ರಲ್ಲಿ ಸುಮಾರು ರಾತ್ರಿ 9.30 ಗಂಟೆಗೆ ಈ ಘಟನೆ ನಡೆದಿದೆ. ಅಲ್ಲಿ ನಿಂತಿದ್ದ ಇಂಡಿಗೋ ವಿಮಾನವು ತನ್ನ ನಿಗದಿತ ಪ್ರಯಾಣಕ್ಕಾಗಿ ಕಾಯುತ್ತಿದ್ದಾಗ, ಕ್ಯಾಟರಿಂಗ್ ವಾಹನವು ಅದರ ಇಂಜಿನ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಇಂಡಿಗೋ ಸಂಸ್ಥೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಏಪ್ರನ್ ಪ್ರದೇಶದಲ್ಲಿ ಚಾಲಕನಿಲ್ಲದ ವಾಹನವೊಂದು ಚಲಿಸಿ, ನಿಲುಗಡೆ ಮಾಡಲಾಗಿದ್ದ ಇಂಡಿಗೋ ವಿಮಾನಕ್ಕೆ ತಗುಲಿದೆ. ಈ ಕುರಿತು ತನಿಖೆ ನಡೆಸಲು ನಾವು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ಈ ವಿಮಾನವು ಕೋಲ್ಕತ್ತಾದಿಂದ ಗುವಾಹಟಿಗೆ (ಫ್ಲೈಟ್ 6E 6663) ಸಂಚರಿಸಬೇಕಿತ್ತು. ಪ್ರಯಾಣಿಕರಿಗಾಗಿ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ, ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಏಪ್ರನ್ ಎಂದರೆ ವಿಮಾನಗಳನ್ನು ನಿಲುಗಡೆ ಮಾಡುವ, ಸರಕು ತುಂಬುವ, ಇಂಧನ ಮರುಪೂರಣ ಮಾಡುವ ಮತ್ತು ನಿರ್ವಹಣೆ ಮಾಡುವ ಪ್ರದೇಶವಾಗಿದೆ. ವಿಮಾನವು ಮತ್ತೆ ಸೇವೆಗೆ ಮರಳುವ ಮೊದಲು ತಪಾಸಣೆ ಮತ್ತು ನಿರ್ವಹಣೆಗಾಗಿ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಘಟನೆಯ ಸಮಯದಲ್ಲಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಇರಲಿಲ್ಲ ಮತ್ತು ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಚಾಲಕನಿಲ್ಲದೆ ವಾಹನವು ಹೇಗೆ ಚಲಿಸಲು ಪ್ರಾರಂಭಿಸಿತು ಎಂಬುದು ಇನ್ನೂ ಅಸ್ಪಷ್ಟವಾಗಿದ್ದು, ಅಧಿಕಾರಿಗಳು ಈಗ ನೆಲದ ಸುರಕ್ಷತಾ ಕಾರ್ಯವಿಧಾನಗಳಲ್ಲಿನ ಸಂಭವನೀಯ ಲೋಪಗಳನ್ನು ಪರಿಶೀಲಿಸುತ್ತಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ನಡೆಯುತ್ತಿರೋ ಅಹಿತಕರ ಘಟನೆಯು ಮೊದಲಿನದ್ದೇನಲ್ಲ. ಫೆಬ್ರವರಿಯಲ್ಲಿ ಮುಂಬೈ ವಿಮಾನ ನಿಲ್ದಾಣದ ಟ್ಯಾಕ್ಸಿವೇನಲ್ಲಿ ಇಂಡಿಗೋದ 6E 791 ಮತ್ತು ಏರ್ ಇಂಡಿಯಾದ AI 2732 ಎಂಬ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿದ್ದವು, ಆದರೆ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು. ಕಳೆದ ಆಗಸ್ಟ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಪ್ರತಿಕೂಲ ಹವಾಮಾನದ ಕಾರಣ ಇಂಡಿಗೋ ಏರ್‌ಬಸ್ A321 ವಿಮಾನದ ಬಾಲವು ರನ್‌ವೇಗೆ ತಗುಲಿತ್ತು. ಇತ್ತೀಚೆಗಷ್ಟೇ 236 ಪ್ರಯಾಣಿಕರನ್ನು ಹೊತ್ತಿದ್ದ ಟರ್ಕಿಶ್ ಏರ್‌ಲೈನ್ಸ್ ವಿಮಾನವೊಂದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಕಠ್ಮಂಡುವಿಗೆ ಹೊರಟಿದ್ದ ವಿಮಾನವೊಂದರ ಬಲ ಇಂಜಿನ್‌ನಲ್ಲಿ ಆಕಾಶದಲ್ಲೇ ಬೆಂಕಿ ಕಾಣಿಸಿಕೊಂಡಿದ್ದರಿಂದ ಅದನ್ನು ಕೋಲ್ಕತ್ತಾದಲ್ಲಿ ಇಳಿಸಲಾಗಿತ್ತು. ಇದನ್ನೂಓದಿ: ಟೈಪಿಂಗ್ ಟೆಸ್ಟ್‌ನಲ್ಲಿ ಫೇಲ್, ಕ್ಲರ್ಕ್‌ನಿಂದ ಅಟೆಂಡರ್ ಹುದ್ದೆಗೆ ಇಳಿಕೆ

