ಧಾರವಾಡ: ಮಾರ್ಚ್ 2026 ರಲ್ಲಿ ಸುರಿದ ಅಕಾಲಿಕ ಮಳೆ (Rain), ಗಾಳಿ ಹಾಗೂ ಆಲಿಕಲ್ಲು (Hailstorm) ಮಳೆಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು 'ಫ್ರೂಟ್ಸ್ ಐಡಿ' (FRUITS ID) ಹೊಂದುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ (DC) ಸ್ನೇಹಲ್ ಆರ್.
(Snehal .R) ಅವರು ತಿಳಿಸಿದ್ದಾರೆ.
ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯ ವರದಿಯ ಆಧಾರದ ಮೇಲೆ ಸರ್ಕಾರವು ಪರಿಹಾರ ನೀಡಲು ಆದೇಶಿಸಿದೆ. ಧಾರವಾಡ ಜಿಲ್ಲೆಯ ಕುಂದಗೋಳ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳಲ್ಲಿ ಒಟ್ಟು 1,980.05 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ 1,539 ರೈತರ 1,038.45 ಹೆಕ್ಟೇರ್ ಭೂಮಿಯ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ, ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. ಬಾಕಿ ಉಳಿದಿರುವ 552.99 ಹೆಕ್ಟೇರ್ ಪ್ರದೇಶದ 567 ರೈತರು ಇನ್ನೂ 'ಫ್ರೂಟ್ಸ್ ಐಡಿ' ಮಾಡಿಸಿಕೊಳ್ಳದ ಕಾರಣ ಅವರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ಐಡಿ ಮಾಡಿಸಿಕೊಳ್ಳದ ರೈತರು ಮುಂದಿನ 03 ದಿನಗಳ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಐಡಿ ಸೃಜಿಸಿಕೊಳ್ಳಲು ಸೂಚಿಸಲಾಗಿದೆ.
ಪರಿಹಾರ ಪಡೆಯಲು ಬಾಕಿ ಇರುವ ರೈತರು ತಮ್ಮ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ವಿವರ ಹಾಗೂ ಪಹಣಿ ಮಾಹಿತಿಯೊಂದಿಗೆ ಗ್ರಾಮ ಆಡಳಿತಾಧಿಕಾರಿಗಳನ್ನು ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ತಕ್ಷಣವೇ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂತಹ ರೈತರಿಗೆ ಪರಿಹಾರ ದೊರೆಯುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಇದನ್ನೂಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹರಿದುಬಂತು ಕೋಟಿ ಕೋಟಿ ಆದಾಯ
ಪ್ರತಿಯೊಬ್ಬ ನಾಗರಿಕರ ಭಾಗವಹಿಸುವಿಕೆ ಅಗತ್ಯ, ಜನಗಣತಿಯಲ್ಲಿ ನಿಮ್ಮ ಮಾಹಿತಿ ಸುರಕ್ಷಿತ: ಪ್ರಧಾನಿ ಮೋದಿ
ನವದೆಹಲಿ: ದೇಶದಲ್ಲಿ (India) ನಡೆಯಲಿರುವ ಮುಂಬರುವ ಜನಗಣತಿ (Census) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರೆ ನೀಡಿದ್ದಾರೆ. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ (Radio Programme) 'ಮನ್ ಕಿ ಬಾತ್' (Mann Ki Baat) ಮೂಲಕ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನಗಣತಿಯ ಸಂದರ್ಭದಲ್ಲಿ ಸಾರ್ವಜನಿಕರು ನೀಡುವ ಮಾಹಿತಿ ಅತ್ಯಂತ ಗೌಪ್ಯವಾಗಿ ಮತ್ತು ಸುರಕ್ಷಿತವಾಗಿರಲಿದೆ ಎಂದು ಭರವಸೆ ನೀಡಿದ್ದಾರೆ.
ಈ ಬಾರಿಯ ಜನಗಣತಿಯು ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳುತ್ತಿರುವುದು ವಿಶೇಷ. "ಇದು ದೇಶದ ಅತಿದೊಡ್ಡ ಅಭಿಯಾನಗಳಲ್ಲಿ ಒಂದಾಗಿದ್ದು, ಎಲ್ಲಾ ಮಾಹಿತಿಯನ್ನು ನೇರವಾಗಿ ಡಿಜಿಟಲ್ ವಿಧಾನಗಳ ಮೂಲಕ ದಾಖಲಿಸಲಾಗುವುದು," ಎಂದು ಪ್ರಧಾನಿ ತಿಳಿಸಿದರು. ಅಲ್ಲದೆ ಗಣತಿ ಕಾರ್ಯಕ್ಕಾಗಿ ಸಿಬ್ಬಂದಿಗಳಿಗೆ ವಿಶೇಷ ಮೊಬೈಲ್ ಅಪ್ಲಿಕೇಶನ್ ನೀಡಲಾಗಿದ್ದು, ಸ್ಥಳದಲ್ಲೇ ಮಾಹಿತಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ನಾಗರಿಕರು ತಾವಾಗಿಯೇ ಮಾಹಿತಿಯನ್ನು ದಾಖಲಿಸಲು 'ಸ್ವಯಂ-ಗಣತಿ' (Self-Enumeration) ಆಯ್ಕೆಯನ್ನು ನೀಡಲಾಗಿದೆ. ಅಧಿಕಾರಿಗಳು ಮನೆಗೆ ಭೇಟಿ ನೀಡುವ 15 ದಿನಗಳ ಮೊದಲೇ ಆನ್‌ಲೈನ್ ಮೂಲಕ ವಿವರಗಳನ್ನು ಭರ್ತಿ ಮಾಡಬಹುದು. ಮಾಹಿತಿ ನೀಡಿದ ನಂತರ ಮೊಬೈಲ್ ಅಥವಾ ಇಮೇಲ್‌ಗೆ ಬರುವ ಕೋಡ್ ಅನ್ನು ಅಧಿಕಾರಿಗಳಿಗೆ ತೋರಿಸಿದರೆ ಸಾಕು, ಇದರಿಂದ ಜನರ ಸಮಯ ಉಳಿತಾಯವಾಗಲಿದೆ ಎಂದು ಮೋದಿ ವಿವರಿಸಿದರು.
ಇದೇ ವೇಳೆ ದೇಶದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ, ಭಾರತವು ಪವನ ಶಕ್ತಿ (ಗಾಳಿ ಮೂಲಕ ವಿದ್ಯುತ್) ಉತ್ಪಾದನೆಯಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಪ್ರಸ್ತುತ ದೇಶದಲ್ಲಿ 56 ಗಿಗಾವ್ಯಾಟ್ ಪವನ ಶಕ್ತಿ ಉತ್ಪಾದನೆಯಾಗುತ್ತಿದ್ದು, ಕಳೆದ ವರ್ಷಕ್ಕಿಂತ 6 ಗಿಗಾವ್ಯಾಟ್ ಹೆಚ್ಚಳವಾಗಿದೆ. 2030ರ ವೇಳೆಗೆ 100 ಗಿಗಾವ್ಯಾಟ್ ಹಾಗೂ 2036ರ ವೇಳೆಗೆ 156 ಗಿಗಾವ್ಯಾಟ್ ಗುರಿ ತಲುಪುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

