ಬೆಂಗಳೂರು: ಇತ್ತೀಚೆಗೆ ದೇಶದಾದ್ಯಂತ ತೀವ್ರ ಉಷ್ಣ ಅಲೆ (Heat Wave) ಎದುರಾಗಿದ್ದು, ಹಲವು ರಾಜ್ಯಗಳಲ್ಲಿ (State) ತಾಪಮಾನವು 43 ರಿಂದ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ಜನತೆಗೆ ಮತ್ತು ರೈತರಿಗೆ ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಅಂತರಾಷ್ಟ್ರೀಯ ಹವಾಮಾನ ಸಂಸ್ಥೆಗಳು ಇದೀಗ ಒಂದು ಸಿಹಿ ಸುದ್ದಿಯನ್ನು ನೀಡಿ ದೆ .
ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್‌ಕಾಸ್ಟ್ (ECMWF) ವರದಿಯ ಪ್ರಕಾರ, ಈ ಬಾರಿ ನೈಋತ್ಯ ಮುಂಗಾರು ಮಾರುತಗಳು ನಿಗದಿತ ಸಮಯಕ್ಕಿಂತ ಮೊದಲೇ ಭಾರತವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಮೇ ತಿಂಗಳ ಅಂತ್ಯದ ವೇಳೆಗೆ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ (2025) ಕೂಡ ಮುಂಗಾರು ಕೇರಳಕ್ಕೆ ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ ಮೇ 27 ಮತ್ತು 29ರ ನಡುವೆ ಆಗಮಿಸಿತ್ತು. ಅದೇ ರೀತಿ ಈ ವರ್ಷವೂ ಮಳೆ ಮಾರುತಗಳು ಬೇಗನೆ ಪ್ರವೇಶಿಸಲಿವೆ ಎಂದು ಅಂದಾಜಿಸಲಾಗಿದೆ.
ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಸಾಮಾನ್ಯಕ್ಕಿಂತ 30-60 ಮಿಮೀ ನಷ್ಟು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಮೇ 25 ರ ಸುಮಾರಿಗೆ ಮುಂಗಾರು ಕೇರಳದ ಕರಾವಳಿ ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಿಗೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳ ಪ್ರವೇಶಿಸಬೇಕಿದ್ದ ಮಳೆ, ಈ ಬಾರಿ ಒಂದು ವಾರ ಮುಂಚಿತವಾಗಿಯೇ ಬರಲಿದೆ.
ಇನ್ನು ಹವಾಮಾನ ತಜ್ಞರಾದ ದೇವೇಂದ್ರ ತ್ರಿಪಾಠಿ ಅವರ ಪ್ರಕಾರ, ಈ ಬಾರಿ 'ಎಲ್ ನಿನೋ' ಪ್ರಭಾವ ಕಡಿಮೆಯಾಗುತ್ತಿರುವುದರಿಂದ ಶೇಕಡಾ 92ರಷ್ಟು ಸಮೃದ್ಧ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಉಂಟಾಗಿರುವ ತೇವಾಂಶಭರಿತ ಗಾಳಿಯು ಮುಂಗಾರು ಮಾರುತಗಳನ್ನು ವೇಗವಾಗಿ ಭಾರತದ ಕಡೆಗೆ ತಳ್ಳುತ್ತಿದೆ. ಇದರಿಂದಾಗಿ ತೀವ್ರ ಬಿಸಿಲಿನಿಂದ ಬಳಲುತ್ತಿರುವ ಜನತೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದ್ದು, ಕೃಷಿ ಚಟುವಟಿಕೆಗಳು ಕೂಡ ಚುರುಕುಗೊಳ್ಳಲಿವೆ.

