ವ್ಯಾಂಕೋವರ್: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳ ಅಂತರದ ಜಯ ಸಾಧಿಸಿರುವ ಸ್ವಿಟ್ಜರ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಇದರೊಂದಿಗೆ 1954ರ ನಂತರ ಅಂದರೆ ಬರೋಬ್ಬರಿ 72 ವರ್ಷಗಳ ಬಳಿಕ ಸ್ವಿಟ್ಜರ್ಲೆಂಡ್ ಮೊದಲ ಬಾರಿಗೆ ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.
ಮತ್ತೊಂದೆಡೆ ಕೊಲಂಬಿಯಾದ ಕನಸು ಭಗ್ನಗೊಂಡಿತು.
ನಿಗದಿತ 90 ನಿಮಿಷ ಹಾಗೂ ಹೆಚ್ಚುವರಿ ಸಮಯದಲ್ಲಿ ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದರೂ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಬಳಿಕ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲಾಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಕೊಲಂಬಿಯಾದ ಡೇವಿನ್ಸನ್ ಸ್ಯಾಂಚೆಜ್ ಹೊಡೆದ ಚೆಂಡು ಕ್ರಾಸ್‌ಬಾರ್‌ಗೆ ಹೊಡೆದರೆ, ಕುಚೊ ಹೆರ್ನಾಂಡೆಜ್ ಅವರ ಪ್ರಯತ್ನವನ್ನು ಸ್ವಿಟ್ಜರ್ಲೆಂಡ್‌ನ ಗೋಲ್‌ಕೀಪರ್ ಗ್ರೆಗರ್ ಕೋಬೆಲ್ ಅದ್ಭುತವಾಗಿ ತಡೆದು ತಂಡದ ಹೀರೊ ಎನಿಸಿಕೊಂಡರು. ಅಂತಿಮವಾಗಿ ಸ್ವಿಸ್ ಪಡೆಯ ರುಬೆನ್ ವರ್ಗಾಸ್ ನಿರ್ಣಾಯಕ ಗೋಲು ಗಳಿಸುವ ಮೂಲಕ ತಂಡಕ್ಕೆ ಅಮೂಲ್ಯ ಗೆಲುವು ಒದಗಿಸಿಕೊಟ್ಟರು.
ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್ ತಂಡವು ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು ಎದುರಿಸಲಿದೆ.

