'ನಾನು ನಿಕೊಬಾರ್ ಅರಣ್ಯ ಪ್ರದೇಶದಲ್ಲಿದ್ದೇನೆ. ಜೀವಿತಾವಧಿಯಲ್ಲೇ ನಾ ನೋಡಿದ ಅತ್ಯಂತ ಸುಂದರ ಅರಣ್ಯ. ಸಾವಿರಾರು ಎಕರೆ ಮಳೆ ಕಾಡು ಇದು. ಇಲ್ಲಿರುವ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತದೆ. ಅದು ಕೇವಲ ಒಬ್ಬ ಉದ್ಯಮಿಯ ಬಯಕೆಯನ್ನು ಈಡೇರಿಸುವುದಕ್ಕಾಗಿ. ಬುಡಕಟ್ಟು ಜನರ ಜೀವನ, ಪರಿಸರ ವ್ಯವಸ್ಥೆಯೇ ಧೂಳಿಪಟವಾಗಲಿದೆ.
ಈ ದ್ವೀಪದಲ್ಲಿ ಸಾಕಷ್ಟು ಬುಡಕಟ್ಟು ಪಂಗಡಗಳು ಇಲ್ಲಿವೆ. ಯಾರೊಬ್ಬರೂ, ಈ ಯೋಜನೆಗಾಗಿ ಕೇಳಿಲ್ಲ. ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏನು ಪರಿಹಾರ ಸಿಗಲಿದೆ ಎಂಬುದು ಕೂಡ ಇಲ್ಲಿನ ಯಾರಿಗೂ ಗೊತ್ತಿಲ್ಲ. ಇಲ್ಲಿನ ಒಂದೊಂದು ಮರವೂ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ. ನಾನೀಗ, ಕಾಡಿನ ಒಂದು ಭಾಗದಲ್ಲಿದ್ದೇನೆ ಅಷ್ಟೇ. ಒಳಗೆ ಪ್ರವೇಶಿಸುವುದೂ ಕಷ್ಟವಾಗುವಷ್ಟು ದಟ್ಟವಾದ ಅರಣ್ಯವಿದು. ಸರ್ಕಾರ ಇಲ್ಲಿಗೆ ಬರುತ್ತಿರುವುದಾದರೂ ಏಕೆ? ಗುಟ್ಟಾಗಿ ಇದನ್ನೆಲ್ಲ ಮಾಡಲಾಗುತ್ತಿದೆ. ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ. ಇಡೀ ದೇಶಕ್ಕೆ; ಅದರಲ್ಲೂ ಮುಖ್ಯವಾಗಿ ಯುವಜನರಿಗೆ ಇದರ ಬಗ್ಗೆ ತಿಳಿಸಬೇಕಾದ ಅಗತ್ಯವಿದೆ. ಏಕೆಂದರೆ ಇದು ನಿಮ್ಮ ಭವಿಷ್ಯ. ದೇಶದ ಅತಿದೊಡ್ಡ ಹಗರಣ ಹಾಗೂ ಪರಿಸರ ವ್ಯವಸ್ಥೆಯ ಅತಿದೊಡ್ಡ ಕಳ್ಳತನ ಇದಾಗಲಿದೆ'
____
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ನಿಕೋಬಾರ್ ದ್ವೀಪದ ಅರಣ್ಯ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ವೇಳೆ ಹೇಳಿರುವ ಮಾತುಗಳಿವು. ಅವರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕೇಂದ್ರ ಸರ್ಕಾರದ ಉದ್ದೇಶಿತ 'ಗ್ರೇಟ್ ನಿಕೋಬಾರ್ ದ್ವೀಪ್ ಅಭಿವೃದ್ಧಿ ಯೋಜನೆ' ಕುರಿತು ಚರ್ಚೆ ಹುಟ್ಟುಹಾಕಿದೆ.
ಏನಿದು ನಿಕೋಬಾರ್ ಪ್ರಾಜೆಕ್ಟ್? ಸರ್ಕಾರ ಹೇಳುವುದೇನು?
ಗ್ರೇಟ್ ನಿಕೋಬಾರ್ ದ್ವೀಪ್ ಅಭಿವೃದ್ಧಿ ಯೋಜನೆಯನ್ನು ನಿಕೋಬಾರ್‌ನ ಗಲಾಥಿಯಾ ಕೊಲ್ಲಿ ಸಮೀಪ, ಆರಂಭಿಸಲು ಉದ್ದೇಶಿಸಲಾಗಿದ್ದು, ₹ 72,000 ಕೋಟಿಯಿಂದ ₹ 92,000 ಕೋಟಿವರೆಗೆ ಅಂದಾಜು ವೆಚ್ಚ ಆಗಲಿದೆ ಎನ್ನಲಾಗುತ್ತಿದೆ.
ಈ ದ್ವೀಪವನ್ನು ಹಡಗು ಸಂಚಾರ ಹಾಗೂ ಕಾರ್ಯತಂತ್ರದ ಪ್ರಮುಖ ಕೇಂದ್ರವಾಗಿ ಪರಿವರ್ತಿಸುವ ಗುರಿ ಹಾಕಿಕೊಳ್ಳಲಾಗಿದೆ.
ಸರಕು ಸಾಗಣೆ ಬಂದರು, ಪಟ್ಟಣ, ಗ್ಯಾಸ್ & ಸೋಲಾರ್ ಪವರ್ ಘಟಕ, ನಾಗರಿಕ & ಸೇನಾ ವಿಮಾನ ನಿಲ್ದಾಣ ಸೇರಿದಂತೆ ಹಲವು ಮೂಲಸೌಕರ್ಯಗಳು ಇಲ್ಲಿ ನಿರ್ಮಾಣಗೊಳ್ಳಲಿವೆ.
ದೇಶದ ಆರ್ಥಿಕತೆ ಹಾಗೂ ಕಾರ್ಯತಂತ್ರಗಳ ಹಿತಾಸಕ್ತಿಯ ದೃಷ್ಟಿಯಿಂದ ಈ ಯೋಜನೆಯು ಅತ್ಯಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಿಶ್ವದಲ್ಲೇ ಅತಿಹೆಚ್ಚು ಹಡಗು ಸಂಚಾರವಿರುವ ಜಲಸಂಧಿಗಳಲ್ಲಿ ಒಂದಾದ ಮಲಕ್ಕಾ ಬಳಿಯೇ ಈ ದ್ವೀಪವಿದೆ. ದೇಶದ ಸರಕು ಸಾಗಣೆಯಲ್ಲಿ ಹೆಚ್ಚಿನ ಭಾಗವು ಕೊಲೊಂಬೊದಂತಹ ವಿದೇಶಿ ಬಂದರುಗಳ ಮೂಲಕವೇ ನಡೆಯುತ್ತಿದೆ. ಹೊಸ ಬಂದರಿನ ನಿರ್ಮಾಣವು ವಿದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು, ರಾಷ್ಟ್ರೀಯ ಭದ್ರತೆಯನ್ನು ಬಲಗೊಳಿಸಲು ನೆರವಾಗಲಿದೆ. ಅಷ್ಟೇ ಅಲ್ಲ. ಈ ಅಭಿವೃದ್ಧಿ ಕಾರ್ಯದಂತೆ ಬರೋಬ್ಬರಿ 1.28 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಪ್ರತಿಪಾದಿಸಿದೆ.
ಎನ್‌ಜಿಟಿ ಅನುಮತಿ
'ರಾಷ್ಟ್ರೀಯ ಹಸಿರು ನ್ಯಾಯಮಂಡಳಿ'ಯು ಈ ಯೋಜನೆಗೆ ಫೆಬ್ರುವರಿಯಲ್ಲೇ ಅನುಮತಿ ನೀಡಿದೆ. 'ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಮಗೆ ಸಕಾರಣಗಳೇ ಸಿಗುತ್ತಿಲ್ಲ' ಎಂದು ಸ್ಪಷ್ಟಪಡಿಸಿದೆ.
'ಪ್ರತಿಯೊಂದು ಅಭಿವೃದ್ಧಿ ಚಟುವಟಿಕೆಯೂ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಆದರೆ, ಅಂತಹ ಪರಿಣಾಮಗಳನ್ನು ತಗ್ಗಿಸಲು ಹಾಗೂ ಸಮಾಜಕ್ಕೆ ಹೆಚ್ಚಿನ ಪ್ರಯೋಜನಗಳನ್ನು ಉಂಟುಮಾಡಬಹುದು ಎಂದಾದಲ್ಲಿ, ಅಂತಹ ಯೋಜನೆಗಳಿಗೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅನುಮತಿ ನೀಡಬೇಕಾಗುತ್ತದೆ' ಎಂದಿದೆ.
ಮಾತ್ರವಲ್ಲ, 'ಯೋಜನೆ ಆರಂಭವಾದ ಬಳಿಕ ಕಾಮಗಾರಿ ನಡೆಯುವವರೆಗೂ ಪರಿಸರ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯ' ಎಂಬ ಸೂಚನೆಯನ್ನೂ ನೀಡಿದೆ.
ಅನುಮತಿ ಪಡೆಯುವ ಸಲುವಾಗಿ ಸರ್ಕಾರವು ಹಲವು ಭರವಸೆಗಳನ್ನು ಎನ್‌ಜಿಟಿ ಮುಂದಿಟ್ಟಿದೆ. ಹವಳ, ಆಮೆಗಳು ಹಾಗೂ ಮೆಗಾಪಾಡ್‌ಗಳಿಗೆ (ಹಕ್ಕಿ) ಹೊಸ ಆವಾಸಸ್ಥಾನ ಕಲ್ಪಿಸುವ ಹೊಸ ವನ್ಯಜೀವಿಧಾಮಗಳು, ಜೀವವೈವಿಧ್ಯತೆಯ ಮೇಲೆ ನಿಗಾ ಇಡಲು ಸಂಶೋಧನಾ ಕೇಂದ್ರಗಳನ್ನು ತೆರೆಯುವುದು, ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿಗಳನ್ನು ರಚಿಸಲಾಗುವುದು. ಆಮೆಗಳು ಗೂಡು ಕಟ್ಟಲು ಬಳಸುವ ಕಡಲತೀರಗಳನ್ನು ರಕ್ಷಿಸಲಾಗುವುದು ಎಂದು ಸರಕಾರ ಎನ್‌ಜಿಟಿಗೆ ಭರವಸೆ ನೀಡಿದೆ.
ಗ್ರೇಟ್ ನಿಕೋಬಾರ್ ಯೋಜನೆ ಹೆಸರಲ್ಲಿ ಅತಿ ದೊಡ್ಡ ಹಗರಣ: ರಾಹುಲ್ ಆರೋಪಆಳ-ಅಗಲ | ಗ್ರೇಟ್ ನಿಕೋಬಾರ್ ಯೋಜನೆ: ಅಭಿವೃದ್ಧಿಯೇ, 'ಅಪರಾಧ'ವೇ?ತಜ್ಞರ ವಾದವೇನು?
ಇದೊಂದು ಗಂಭೀರ ಹಾಗೂ ಕಳವಳಕಾರಿ ವಿಚಾರ. ಪರಿಸರಕ್ಕೆ ಆಗುವ ಹಾನಿಯನ್ನು ಸರಿಪಡಿಸಲಾಗದು. ಇದು ರಾಜಕೀಯಕ್ಕೆ ಸೀಮಿತವಾದ ಸಂಗತಿಯಲ್ಲ. ಜೀವವೈವಿದ್ಧಯ, ಸ್ಥಳೀಯ ಸಮುದಾಯಗಳು ಮತ್ತು ನೈಸರ್ಗಿಕ ವ್ಯವಸ್ಥೆಯು ದೀರ್ಘಕಾಲದ ವರೆಗೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿ ಭರ್ವೀನ್ ಕಂಧಾರಿ ಎಚ್ಚರಿಸಿದ್ದಾರೆ.
'ಭಾರತದ ತುತ್ತ ತುರಿಯಲ್ಲಿರುವ ಅಖಂಡ ಉಷ್ಣವಲಯದ ಮಳೆಕಾಡಿನಲ್ಲಿ ಸುಮಾರು ನೂರು ಚದರ ಕಿ.ಮೀ. ಅರಣ್ಯ ನಾಶದ ಬಗ್ಗೆ ಮಾತನಾಡುತ್ತಿದ್ದೇವೆ. ಇದು, ಹವಳ ಹಾಗೂ ನಿರ್ಣಾಯಕ ವನ್ಯ ಜೀವಿಗಳ ಆವಾಸ ಸ್ಥಾನ ಇದಾಗಿದೆ. ಪರಿಸರ ಸೂಕ್ಷ್ಮ ದ್ವೀಪದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಯೋಜನೆ ಆರಂಭಿಸುವುದು ಸರಿಪಡಿಸಲು ಸಾಧ್ಯವೇ ಆಗದಷ್ಟು ಹಾನಿಯನ್ನುಂಟು ಮಾಡಲಿದೆ. ಅಲ್ಲಿ ಭೂ ಪರಿಸರ ವ್ಯವಸ್ಥೆಯನ್ನು ಶತಮಾನಗಳಿಂದಲೂ ರಕ್ಷಿಸಿಕೊಂಡು ಬಂದಿರುವ, ಅಲ್ಲಿನ ಬುಡಕ್ಕಟ್ಟು ಸಮುದಾಯಗಳು ಭಾರಿ ಬೆಲೆ ತೆರಬೇಕಾಗುತ್ತದೆ' ಎಂದು ಆತಂಕಗೊಂಡಿದ್ದಾರೆ.
ವಕೀಲ, ಪರಿಸರ ವಾದಿ ಆಕಾಶ್ ವಶಿಷ್ಠ ಅವರೂ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 'ಪ್ರತಿಯೊಂದು ಯೋಜನೆಗೂ ಅದರದ್ದೇ ಮಹತ್ವವಿರುತ್ತದೆ. ಆದರೆ, ಆ ಪ್ರದೇಶವು ಇದುವರೆಗೆ ದೇಶಕ್ಕೆ ನೀಡಿದ ಪರಿಸರ ಸೇವೆಗಳೊಂದಿಗೆ ಆ ಯೋಜನೆಯನ್ನು ಯಾರಾದರೂ ಹೋಲಿಕೆ ಮಾಡಿದ್ದಾರಾ ಎಂಬುದು ಮುಖ್ಯವಾದ ವಿಚಾರ. ಇಂಗಾಲದ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತಿರುವ ಆ ಪ್ರದೇಶವು, ಅಪಾರ ಮೌಲ್ಯವನ್ನು ಹೊಂದಿದೆ. ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ರಾಜಕೀಯವನ್ನೂ ಮೀರಿ ಈ ವಿಚಾರದ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿರುವ ಅವರು, 'ರಾಹುಲ್ ಗಾಂಧಿ ಅಥವಾ ಇನ್ಯಾರೋ ಈ ಬಗ್ಗೆ ಮಾತನಾಡಿದ್ದಾರೆ ಎಂಬುದಲ್ಲ. ಸರಿಯಾದ ವಿಚಾರಗಳು ಎಲ್ಲಿಂದಲೇ ಬಂದರೂ ಅವನ್ನು ಪರಿಗಣಿಸಬೇಕು. 'ರಾಷ್ಟ್ರ ಮೊದಲು' ಎಂಬುದು ಅಥವಾ 'ರಾಷ್ಟ್ರೀಯತೆ'ಯು ಬಿಜೆಪಿ ಹಾಗೂ ಅದರ ಮಾತೃಸಂಸ್ಥೆ ಆರ್‌ಎಸ್‌ಎಸ್‌ನ ಆದರ್ಶವಾಗಿದೆ. ಯಾವುದೇ ಬೆಲೆ ತೆತ್ತಾದರೂ ಅದನ್ನು ಉಳಿಸಿಕೊಳ್ಳಬೇಕು ಮತ್ತು ಪಾಲಿಸಬೇಕು. ದೇಶದ ಪರಂಪರೆಯನ್ನು ಶ್ರೀಮಂತಗೊಳಿಸುವ ಸಂಪನ್ಮೂಲಗಳನ್ನು ಸಂರಕ್ಷಿಸಿ, ಮುಂದಿನ ತಲೆಮಾರುಗಳಿಗೆ ವರ್ಗಾಯಿಸಬೇಕು' ಎಂದು ಆಗ್ರಹಿಸಿದ್ದಾರೆ.
ನೆಲೆ ಹಾಗೂ ಜೀವನೋಪಾಯ ಕಳೆದುಕೊಳ್ಳಬೇಕಾದೀತು. ಹೊರಗಿನವರ ಸಂಪರ್ಕದಿಂದ ಕಾಯಿಲೆಗಳು ಬರಬಹುದು. ದ್ವೀಪದಲ್ಲಿರುವ ಅಪರೂಪದ ಸಸ್ಯ, ಪ್ರಾಣಿ ಸಂಕುಲ ನಾಶವಾಗಬಹುದು ಎಂಬುದು ಸ್ಥಳೀಯ ನಿವಾಸಿಗಳು ಮತ್ತು ಪರಿಸರಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.

