ನವದೆಹಲಿ: ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿರುವ ವಾಯುದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ.
'ಪಾಕಿಸ್ತಾನದ ನಿರಂತರ ಬೇಜವಾಬ್ದಾರಿ ವರ್ತನೆ ಹಾಗೂ ಆಂತರಿಕ ವೈಫಲ್ಯಗಳನ್ನು ಗಡಿಯಾಚೆಗಿನ ಹಿಂಸಾಚಾರದ ಮೂಲಕ ಹೊರಗಿನವರ ಮೇಲೆ ಹೇರುವ ಹತಾಶೆಯ ಪ್ರಯತ್ನವನ್ನು ಈ ದಾಳಿ ಪ್ರತಿಬಿಂಬಿಸುತ್ತದೆ' ಎಂದು ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.
'ಅಫ್ಗಾನ್ ಭೂಪ್ರದೇಶದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿ ವೇಳೆ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ನಾಗರಿಕರು ಮೃತಪಟ್ಟಿದ್ದಾರೆ. ಪಾಕಿಸ್ತಾನ ನಡೆಸಿರುವ ಈ ಸ್ಪಷ್ಟ ಆಕ್ರಮಣಕಾರಿ ಕೃತ್ಯವು ಅಫ್ಗಾನಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ. ಇದು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ನೇರ ಬೆದರಿಕೆಯಾಗಿದೆ' ಎಂದೂ ದೂರಿದೆ.
ಪ್ರೀತಿಪಾತ್ರರನ್ನು ಕಳೆದುಕೊಂಡ ಅಫ್ಗಾನ್ ಕುಟುಂಬಗಳಿಗೆ ಭಾರತ ಸಂತಾಪ ಸೂಚಿಸುತ್ತದೆ. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಲಾಗಿದ್ದು, ಅಫ್ಗಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ 'ಅಚಲ ಬೆಂಬಲ'ವನ್ನೂ ಪುನರುಚ್ಚರಿಸಲಾಗಿದೆ.
ಅಫ್ಗಾನ್ ಉಗ್ರತಾಣಗಳ ಮೇಲೆ ಪಾಕ್ ದಾಳಿ:ತೆಹ್ರೀಕ್-ಎ-ತಾಲಿಬಾನ್ ನಿಯಂತ್ರಣ ಸಾಧ್ಯವೇ?ಶೋಯಬ್ ಅಖ್ತರ್‌ಗೂ ಲಷ್ಕರ್‌ಗೂ ಉಂಟಾ ನಂಟು? ಪಾಕ್ ಕ್ರಿಕೆಟ್ ಮೇಲೆ ಉಗ್ರರ ನೆರಳು?ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ಪರಸ್ಪರ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆಸಿ ಪ್ರತಿಭಟನೆ ದಾಖಲಿಸಿದ್ದವು. ಅದಾದ ನಂತರ ಅಫ್ಗಾನ್ ಭೂಪ್ರದೇಶ ಹಾಗೂ ಗಡಿಯಲ್ಲಿ ನಡೆಸಿದ ಸೇನಾ ಕಾರ್ಯಾಚರಣೆ ವೇಳೆ 29 ಉಗ್ರರನ್ನು ಕೊಂದಿರುವುದಾಗಿ ಪಾಕಿಸ್ತಾನ ಸೋಮವಾರ ಹೇಳಿಕೆ ನಿಡಿತ್ತು.
ಏತನ್ಮಧ್ಯೆ, ಅಫ್ಗಾನಿಸ್ತಾನ ವಿದೇಶಾಂಗ ಸಚಿವಾಲಯವು ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡು ಪಾಕ್ ವಿರುದ್ಧ ಕಿಡಿಕಾರಿದೆ. ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿ ವೇಳೆ ಮಹಿಳೆಯರು, ಮಕ್ಕಳು ಸೇರಿದಂತೆ 36 ನಾಗರಿಕರು ಹತ್ಯೆಯಾಗಿದ್ದಾರೆ. 163 ಜನರು ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ. ಈ ದಾಳಿಯು ಅಂತರರಾಷ್ಟ್ರೀಯ ಕಾನೂನು, ಮಾನವೀಯ ನೀತಿ ಹಾಗೂ ಅಫ್ಗಾನಿಸ್ತಾನದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದೆ.
ಅಫ್ಗಾನ್ ಆರೋಪಗಳಿಗೆ ಪಾಕಿಸ್ತಾನ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

