ಫಿಲಡೆಲ್ಫಿಯಾ: ಅಮೆರಿಕದ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ಸೆಪ್ಟೆಂಬರ್ 4ರಿಂದ 6ರವರೆಗೆ ನಡೆಯಲಿರುವ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನ-2026ರ ಅಂಗವಾಗಿ ಕವನ ಹಾಗೂ ಸಣ್ಣಕಥೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಿರುವ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಇರುವ ಎಲ್ಲ ಕನ್ನಡಿಗರು ಭಾಗವಹಿಸಬಹುದು ಎಂದು ಅಕ್ಕ ಪ್ರಕಟಣೆಯಲ್ಲಿ ತಿಳಿಸಿದೆ.
ಕವನ ಸ್ಪರ್ಧೆ
ಸ್ಪರ್ಧಾಳುಗಳು ಒಂದು ಕವನವನ್ನು ಮಾತ್ರ ಕಳುಹಿಸಬಹುದು. ಕವನವು ಸ್ವರಚಿತವಾಗಿರಬೇಕು ಹಾಗೂ ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ವರ್ಡ್ ಡಾಕ್ಯುಮೆಂಟ್ (Word) ರೂಪದಲ್ಲಿ ಕಳುಹಿಸಬೇಕು. ಕವನದೊಂದಿಗೆ ಸ್ಪರ್ಧಿಯ ಪರಿಚಯ ಮತ್ತು ಭಾವಚಿತ್ರವನ್ನು ಪ್ರತ್ಯೇಕವಾಗಿ ಲಗತ್ತಿಸಬೇಕು. ಆಯ್ಕೆಯಾದ ಕವನಗಳನ್ನು ಅಕ್ಕ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.

ಸಣ್ಣಕಥೆ ಸ್ಪರ್ಧೆ
ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಕಥೆಯು ಸ್ವರಚಿತವಾಗಿದ್ದು, ಈ ಹಿಂದೆ ಪ್ರಕಟವಾಗಿರಬಾರದು. ಕಥೆಯು 1,500 ಪದಗಳ ಮಿತಿಯಲ್ಲಿರಬೇಕು. ವರ್ಡ್ ಡಾಕ್ಯುಮೆಂಟ್ ರೂಪದಲ್ಲಿ ಕಳುಹಿಸುವಂತೆ ಸೂಚಿಸಲಾಗಿದೆ. ಕಥೆಯೊಂದಿಗೆ ಸ್ಪರ್ಧಿಯ ಪರಿಚಯ ಮತ್ತು ಭಾವಚಿತ್ರವನ್ನು ಪ್ರತ್ಯೇಕವಾಗಿ ಸೇರಿಸಬೇಕು. ಆಯ್ಕೆಯಾದ ಕಥೆಗಳನ್ನೂ ಅಕ್ಕ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
ಆಸಕ್ತರು ತಮ್ಮ ಕವನ ಅಥವಾ ಸಣ್ಣಕಥೆಯೊಂದಿಗೆ ಪರಿಚಯ ಹಾಗೂ ಭಾವಚಿತ್ರವನ್ನು ಜುಲೈ 31ರೊಳಗೆ literary2026@akkaonline.org ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು ಎಂದು ಅಕ್ಕ ಸಾಹಿತ್ಯ ಸಮಿತಿ ತಿಳಿಸಿದೆ.
ಇತ್ತಿಹಾದ್ ರೈಲು: ಅಬುಧಾಬಿ-ಫುಜೈರಾ ನಡುವೆ ಕೇವಲ 90 ನಿಮಿಷಗಳ ಪ್ರಯಾಣ!

