ವಾಷಿಂಗ್ಟನ್: ಅಮೆರಿಕದಲ್ಲಿ ಅಕ್ರಮವಾಗಿ ಅಥವಾ ತಾತ್ಕಾಲಿಕವಾಗಿ ನೆಲಸಿರುವವರಿಗೆ ಜನಿಸುವ ಮಕ್ಕಳು ಇಲ್ಲಿನ ಪೌರರಾಗುವುದಿಲ್ಲ ಎಂದು ತಾವು ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ.
'ಜನ್ಮಸಿದ್ಧ ಪೌರತ್ವ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು ನಮ್ಮ ದೇಶಕ್ಕೆ ಅತ್ಯಂತ ಕಷ್ಟದ ಸಂಗತಿ ಎಂದೇ ಹೇಳಬಹುದು. ಆದರೆ, ಈ ಪ್ರಕ್ರಿಯೆಯಲ್ಲಿ ನಿರ್ಧರಿಸಲ್ಪಟ್ಟಿರುವಂತೆ ಅಧ್ಯಕ್ಷರ ಬೆಂಬಲದೊಂದಿಗೆ ಸಂಸತ್‌ನಲ್ಲಿ (ಕಾಂಗ್ರೆಸ್) ಶಾಸನದ ಮೂಲಕ ನಾವು ಇದನ್ನು ಸುಲಭವಾಗಿ ಸರಿಪಡಿಸಬಹುದು' ಎಂದು ಟ್ರಂಪ್ ಅವರು ಸಾಮಾಜಿಕ ಜಾಲತಾಣ 'ಟ್ರೂಥ್ ಸೋಷಿಯಲ್'ನಲ್ಲಿ ಬರೆದುಕೊಂಡಿದ್ದಾರೆ.
'ಯಾವುದೇ ದೀರ್ಘ ಮತ್ತು ಸಂಕೀರ್ಣವಾದ ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ. ನಮ್ಮ ದೇಶಕ್ಕೆ ದುಬಾರಿಯಾದ ಮತ್ತು ಅನ್ಯಾಯದಿಂದ ಕೂಡಿರುವ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸಲು ಸಂಸತ್ತು (ಕಾಂಗ್ರೆಸ್) ಇಂದಿನಿಂದಲೇ ಕೆಲಸ ಪ್ರಾರಂಭಿಸಬೇಕು. ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇರಲಿದೆ' ಎಂದು ಟ್ರಂಪ್ ತಿಳಿಸಿದ್ದಾರೆ.
'ಆಂತರಿಕ ಯುದ್ಧದ ಬಳಿಕ ಮಾಡಿಕೊಂಡ 14ನೇ ತಿದ್ದುಪಡಿ ಅನ್ವಯ, ಯಾರು ಈ ದೇಶದಲ್ಲಿ ಹುಟ್ಟುತ್ತಾರೊ ಅವರು ಈ ದೇಶದ ಪ್ರಜೆಗಳಾಗುತ್ತಾರೆ. ಇದರಲ್ಲಿ ಕೆಲವೇ ಕೆಲವು ವಿನಾಯಿತಿಗಳಿಗೆ ಅಷ್ಟೆ. ಆದರೆ, ಇಲ್ಲಿ ಹುಟ್ಟಿದವರು ಇಲ್ಲಿನ ನಾಗರಿಕರು ಎನ್ನುವುದರಲ್ಲಿ ಬೇರೆ ಮಾತಿಲ್ಲ. ಇದಕ್ಕಾಗಿ ಹಲವು ಕಾನೂನುಗಳೂ ಇವೆ' ಎಂದು ನ್ಯಾಯಾಲಯ ಹೇಳಿದೆ.
ದೇಶೀಯ ಮತ್ತು ವಿದೇಶಾಂಗ ನೀತಿಗಳಲ್ಲಿ ಅಧ್ಯಕ್ಷೀಯ ಅಧಿಕಾರದ ಮಿತಿಗಳನ್ನು ಪದೇ ಪದೇ ಪರೀಕ್ಷಿಸುತ್ತಾ ಬಂದಿರುವ ಟ್ರಂಪ್, ಕಾನೂನುಬದ್ಧ ಮತ್ತು ಅಕ್ರಮ ವಲಸೆಯನ್ನು ತಡೆಗಟ್ಟುವ ನೀತಿಗಳ ಭಾಗವಾಗಿ ಕಳೆದ ವರ್ಷ ತಾವು ಅಧಿಕಾರಕ್ಕೆ ಮರಳಿದ ಮೊದಲ ದಿನವೇ ಈ ಆದೇಶವನ್ನು ಹೊರಡಿಸಿದ್ದರು.
ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯಲ್ಲಿ ಜನಾಂಗೀಯ ಮತ್ತು ಧಾರ್ಮಿಕ ತಾರತಮ್ಯ ಎಸಗಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದರು.
ಸುಪ್ರೀಂ ಕೋರ್ಟ್ ಈಗಾಗಲೇ 1898ರ 'ಯುನೈಟೆಡ್ ಸ್ಟೇಟ್ಸ್ ವರ್ಸಸ್ ವಾಂಗ್ ಕಿಮ್ ಆರ್ಕ್' ಪ್ರಕರಣದಲ್ಲಿ ಜನ್ಮಸಿದ್ಧ ಪೌರತ್ವದ ಗೊಂದಲಗಳನ್ನು ಪರಿಹರಿಸಿದೆ. ಈ ತೀರ್ಪು ವಿದೇಶಿ ಪ್ರಜೆಗಳ ಮಕ್ಕಳೂ ಸೇರಿದಂತೆ ಅಮೆರಿಕದ ನೆಲದಲ್ಲಿ ಜನಿಸುವ ಯಾರಿಗಾದರೂ 14ನೇ ತಿದ್ದುಪಡಿಯು ಪೌರತ್ವವನ್ನು ನೀಡುತ್ತದೆ.
ಟ್ರಂಪ್ ಅವರ ಆದೇಶವು ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಕೆಲವು ಸಣ್ಣ ವಿನಾಯಿತಿಗಳನ್ನು ಹೊರತುಪಡಿಸಿ, ಅಮೆರಿಕದಲ್ಲಿ ಜನಿಸುವ ಪ್ರತಿಯೊಬ್ಬರಿಗೂ ಪೌರತ್ವವನ್ನು ಈ ತಿದ್ದುಪಡಿ ಖಾತರಿಪಡಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅಭಿಪ್ರಾಯಪಟ್ಟಿದ್ದಾರೆ.
ಜನ್ಮಸಿದ್ಧ ಪೌರತ್ವದ ಹಕ್ಕನ್ನು ಎತ್ತಿಹಿಡಿದ ಅಮೆರಿಕ SC: ಟ್ರಂಪ್‌ಗೆ ಹಿನ್ನಡೆಜನ್ಮಸಿದ್ಧ ಪೌರತ್ವ: ಭಾರತ, ಚೀನಾವನ್ನು 'ನರಕಕೂಪ' ಎಂದು ನಿಂದಿಸಿದ ಟ್ರಂಪ್
