Dailyhunt Logo
  • Light mode
    Follow system
    Dark mode
    • Play Story
    • App Story
ಅವನಿಲ್ಲದ ಜಗತ್ತು ಶೂನ್ಯ..: ಪ್ರಧಾನಿ ಮೋದಿಗೆ ಕೇತನ್ ತಾಯಿ ಭಾವುಕ ಪತ್ರ

ಅವನಿಲ್ಲದ ಜಗತ್ತು ಶೂನ್ಯ..: ಪ್ರಧಾನಿ ಮೋದಿಗೆ ಕೇತನ್ ತಾಯಿ ಭಾವುಕ ಪತ್ರ

ಪುಣೆ: ಕೇತನ್ ಅಗರವಾಲ್‌ ಕೊಲೆ ಪ್ರಕರಣದಲ್ಲಿ ತ್ವರಿತ ನ್ಯಾಯ ಒದಗಿಸುವಂತೆ ಕೋರಿ ಅವರ ತಾಯಿ ರಾಖಿ ಅಗರವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವುಕ ಪತ್ರ ಬರೆದಿದ್ದಾರೆ.

ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್‌ ಬಾಬುಲಾಲ್‌ ಚೌಧರಿ ಸೇರಿ ಕೇತನ್‌ನನ್ನು ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಒತ್ತಾಯಿಸಿದ್ದಾರೆ.

ಪತ್ರದಲ್ಲಿ ಅಳಲು ತೋಡಿಕೊಂಡ ತಾಯಿ

ರಾಖಿ ಅಗರವಾಲ್‌ ಮೋದಿಗೆ ಬರೆದ ಪತ್ರದಲ್ಲಿ ತಮಗಾದ ಅಪಾರ ನೋವಿನ ಬಗ್ಗೆ ಉಲ್ಲೇಖಿಸಿದ್ದಾರೆ.

'ನನ್ನ ಮಗನಿಗೆ ನ್ಯಾಯ ಕೋರಿ ನಿಮಗೆ ಪತ್ರ ಬರೆಯಬೇಕಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಪ್ರತಿಯೊಬ್ಬ ತಾಯಿಯಂತೆ ನಾನು ಕೂಡ, ಕೇತನ್ ಮದುವೆಯಾಗಿ, ಸುಂದರ ಜೀವನ ರೂಪಿಸಿಕೊಳ್ಳುವುದನ್ನು ನೋಡುವ ಕನಸು ಕಂಡಿದ್ದೆ. ಆದರೆ ನನ್ನ ಮಗನ ಚಿತೆಗೆ ನಾನೇ ಅಗ್ನಿ ಸ್ಪರ್ಶ ಮಾಡಬೇಕಾಗಿ ಬಂತು. ಒಬ್ಬ ತಾಯಿಗೆ ಇದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ' ಎಂದು ಬರೆದಿದ್ದಾರೆ.

ಮುಂದುವರಿದು, 'ನನ್ನ ಮಗನನ್ನು ಕ್ರೂರವಾಗಿ ಕೊಲ್ಲಲಾಯಿತು. ಅವನ ಸಾವಿನಿಂದಾಗಿ ನನ್ನ ಇಡೀ ಪ್ರಪಂಚವೇ ಶೂನ್ಯವಾಗಿದೆ. ನಮ್ಮ ಮನೆಯ ಪ್ರತಿಯೊಂದು ಮೂಲೆಯೂ ನನಗೆ ಅವನನ್ನು ನೆನಪಿಸುತ್ತದೆ. ಅವನ ಕೋಣೆ, ಬಟ್ಟೆಗಳು, ಫೋಟೊಗಳು ಮತ್ತು ಅವನ ನಗುವಿನ ಜಾಗದಲ್ಲಿ ಈಗ ಆವರಿಸಿರುವ ಮೌನ, ಅವನು ಇನ್ನು ಎಂದಿಗೂ ಮರಳಿ ಬರಲಾರ ಎಂಬುದನ್ನು ನೆನಪಿಸುತ್ತಲೇ ಇರುತ್ತದೆ' ಎಂದು ಉಲ್ಲೇಖಿಸಿದ್ದಾರೆ.

ಕೇತನ್ ಮೃತಪಟ್ಟ ಕೇವಲ 20 ದಿನಗಳ ಬಳಿಕ ನನ್ನ ಮಾವ ನಿಧನರಾದರು. ಇದರಿಂದ ನಮ್ಮ ಕುಟುಂಬವು ಮತ್ತೆ ಆಘಾತ ಅನುಭವಿಸಿತು. ಅವರು ಕೇತನ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಮೊಮ್ಮಗನನ್ನು ಕಳೆದುಕೊಂಡ ದುಃಖವನ್ನು ಸಹಿಸಲಾಗದೆ ಅವರು ಮೃತಪಟ್ಟರು ಎಂದು ರಾಖಿ ಅಗರವಾಲ್‌ ಬಹಿರಂಗಪಡಿಸಿದ್ದಾರೆ.

ಮೋದಿ ಅವರೇ, 'ನಾನು ಕೇವಲ ಒಬ್ಬ ತಾಯಿ. ನಾನು ನಿಮ್ಮಿಂದ ಯಾವುದೇ ಸಹಾನುಭೂತಿ ಅಥವಾ ವಿಶೇಷ ಸೌಕರ್ಯವನ್ನು ಕೇಳುತ್ತಿಲ್ಲ. ನಾನು ಕೇವಲ ನ್ಯಾಯವನ್ನು ಕೇಳುತ್ತಿದ್ದೇನೆ' ಎಂದಿದ್ದಾರೆ.

ಅವನು ನನ್ನ ಇಡೀ ಪ್ರಪಂಚ

'ಕೇತನ್ ಮರಳಿ ಬರಲು ಸಾಧ್ಯವಿಲ್ಲ, ಆದರೆ ಆತನ ಜೀವ ತೆಗೆದವರಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು. ಅವನು ಯಾರಿಗೋ ಒಬ್ಬರಿಗೆ ಮಗ, ಮೊಮ್ಮಗ, ಸಹೋದರನಾಗಿದ್ದಿರಬಹುದು. ಆದರೆ ಆದರೆ, ನನಗೆ ಅವನೇ ಪ್ರಪಂಚವಾಗಿದ್ದ. ಅನಗತ್ಯ ವಿಳಂಬವಿಲ್ಲದೆ ತ್ವರಿತ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕೆಂದು' ಅವರು ಮನವಿ ಮಾಡಿದ್ಧಾರೆ.

ಪ್ರತಿ ರಾತ್ರಿ ನಾನು ಅವನ ಭಾವಚಿತ್ರವನ್ನು ನೋಡಿ, 'ಮಗನೇ, ನಿನ್ನ ತಾಯಿ ನಿನಗಾಗಿ ಇನ್ನೂ ಹೋರಾಡುತ್ತಿದ್ದಾಳೆ' ಎಂದು ಹೇಳುತ್ತೇನೆ. ಒಂದು ದಿನ ನಾನು ಅವನಿಗೆ 'ಮಗನೇ... ನಿನಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ' ಎಂದು ಹೇಳುವಂತಾಗಲಿ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದರ ನಿರ್ದೇಶಕರಾಗಿದ್ದ ಕೇತನ್‌ ವಿಶಾಲ್‌ ಅಗರವಾಲ್‌ ಅವರನ್ನು ಭಾವಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಜೂನ್ 18 ರಂದು ಚಾರಣದ ನೆಪದಲ್ಲಿ ಐತಿಹಾಸಿಕ ಲೋಹಾಗಢ ಕೋಟೆಗೆ ಕರೆದೊಯ್ದ 400 ಅಡಿ ಆಳದ ಕಂದಕಕ್ಕೆ ನೂಕಿ ಕೊಲೆಗೈಯಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಸಿಯಾ ಗೋಯಲ್‌ ಹಾಗೂ ಆಕೆಯ ಪ್ರಿಯಕರ ಚೇತನ್‌ ಬಾಬುಲಾಲ್‌ ಚೌಧರಿ (22) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆಧಾರ: ಎನ್‌ಡಿಟಿವಿ, ಎಎನ್‌ಐ

ಭಾವಿ ಪತಿಯನ್ನು ಕಣಿವೆಗೆ ನೂಕಿ ಕೊಲೆ: ಭಾವಿಪತ್ನಿ, ಆಕೆಯ ಪ್ರಿಯಕರನ ಬಂಧನ
Dailyhunt
Disclaimer: This content has not been generated, created or edited by Dailyhunt. Publisher: Prajavani