ಬೆಂಗಳೂರು: 'ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯನ್ನು ದುರುಪಯೋಪಡಿಸಿಕೊಂಡಿರುವ ಆರೋಪಗಳು ತೀವ್ರ ಕಳವಳಕಾರಿಯಾಗಿದೆ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರದ ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಡಿಕೆಶಿ, 'ಈ ಕಾಣಿಕೆಗಳನ್ನು ಲಕ್ಷಾಂತರ ಭಾರತೀಯರು ಅಪಾರ, ಶ್ರದ್ಧೆ ಹಾಗೂ ನಿಸ್ವಾರ್ಥ ಭಾವದಿಂದ ಸಮರ್ಪಿಸಿದ್ದಾರೆ.
ಪ್ರತಿಯೊಂದು ದೇಣಿಗೆಯು ಅಲ್ಲಿನ ಪವಿತ್ರ ಕಾರ್ಯದ ಮೇಲಿನ ನಂಬಿಕೆಯ ಪ್ರತೀಕವಾಗಿತ್ತು. ಆ ನಂಬಿಕೆಗೆ ದ್ರೋಹ ಬಗೆಯುವುದು ಕೇವಲ ಸಾರ್ವಜನಿಕ ವಿಶ್ವಾಸಕ್ಕೆ ಬಗೆದ ದ್ರೋಹ ಮಾತ್ರವಲ್ಲ. ಅಂತಹ ಧಾರ್ಮಿಕ ಸಂಸ್ಥೆಗಳು ಎತ್ತಿಹಿಡಿಯಬೇಕಾದ ಮೌಲ್ಯಗಳಿಗೂ ಮಾಡಿದ ಅಪಚಾರವಾಗಿದೆ' ಎಂದು ಹೇಳಿದ್ದಾರೆ.
'ಪೂಜಾ ಸ್ಥಳಗಳು ಹಾಗೂ ಸಾರ್ವಜನಿಕ ದೇಣಿಗೆಗಳಿಗೆ ಸಂಬಂಧಿಸಿದ ವಿಷಯಗಳು ಪಾರದರ್ಶಕತೆ, ಸಮಗ್ರತೆ ಹೊಣೆಗಾರಿಕೆಯಿಂದ ಕೂಡಿರಬೇಕು' ಎಂದು ಅವರು ಪ್ರತಿಪಾದಿಸಿದ್ದಾರೆ.
'ಈಗ ನಡೆಯುತ್ತಿರುವ ತನಿಖೆಯು ನ್ಯಾಯಯುತ, ಸಮಗ್ರ ಹಾಗೂ ನಿಷ್ಪಕ್ಷಪಾತವಾಗಿರಬೇಕು. ತಪ್ಪಿತಸ್ಥ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆಗೆ ಗುರಿಯಾಗಿಸಬೇಕು. ಆಗ ಮಾತ್ರ ಲಕ್ಷಾಂತರ ಭಕ್ತರಲ್ಲಿ ನಂಬಿಕೆ ಮೂಡಿಸಲು ಸಾಧ್ಯ. ಧಾರ್ಮಿಕ ನಂಬಿಕೆಯನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಬಾರದು' ಎಂದು ಹೇಳಿದ್ದಾರೆ.

