ನವದೆಹಲಿ: ಭಾರತದಲ್ಲಿ ಟೆಲಿಗ್ರಾಮ್ ಮೆಸೇಜಿಂಗ್ ಆಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವುದರ ಹಿಂದೆ ರಿಲಯನ್ಸ್ ಹಾಗೂ ವಾಟ್ಸ್‌ಆಯಪ್ ಕೈವಾಡ ಇರಬಹುದು ಎಂದು ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡ್ಯುರೊವ್ ಬುಧವಾರ ಆರೋಪಿಸಿದ್ದಾರೆ.
ನೀಟ್-ಯುಜಿ 2026 ಮರುಪರೀಕ್ಷೆ ಜೂನ್ 21ರಂದು ನಡೆಯಲಿದ್ದು, ವಂಚನೆ ಜಾಲ ಹಾಗೂ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಜೂನ್ 22ರವರೆಗೆ ಟೆಲಿಗ್ರಾಮ್ ಮೆಸೇಜಿಂಗ್ ಆಯಪ್ ಬಳಕೆಯನ್ನು ಕೇಂದ್ರ ಸರ್ಕಾರವು ನಿರ್ಬಂಧಿಸಿ ಆದೇಶ ಹೊರಡಿಸಿತ್ತು.
'ಭಾರತದ ಟೆಲಿಕಾಂ ಸಂಸ್ಥೆಯಾದ ರಿಲಯನ್ಸ್, 'ಬಿಜಿಪಿ ಹೈಜಾಕಿಂಗ್' ಎಂಬ ದುರುದ್ದೇಶಪೂರಿತ ವಿಧಾನದ ಮೂಲಕ ಭಾರತದ ಹೊರಗಿನ (ಯುಎಇ ಒಳಗೊಂಡಂತೆ) ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಲಭ್ಯವಾಗದಂತೆ ವ್ಯವಸ್ಥಿತವಾಗಿ ಅಡ್ಡಿಪಡಿಸುತ್ತಿದೆ' ಎಂದು ಡ್ಯುರೊವ್ ದೂರಿದ್ದಾರೆ.
'ರಿಲಯನ್ಸ್ ಸಂಸ್ಥೆಯು ಈ ಹಿಂದಿನ ಹಲವು ವರದಿಗಳನ್ನು ನಿರ್ಲಕ್ಷಿಸಿರುವುದರಿಂದ, ಈ ಅಡ್ಡಿಪಡಿಸುವಿಕೆಯು ಉದ್ದೇಶಪೂರ್ವಕವಾಗಿಯೇ ನಡೆದಿರುವಂತೆ ತೋರುತ್ತಿದೆ. ಇದು ವಾಣಿಜ್ಯ ಲೋಕದ ಸ್ಪರ್ಧಾತ್ಮಕ ಸಮರದ ಭಾಗವಾಗಿರಬಹುದು, ಏಕೆಂದರೆ ವಾಟ್ಸ್‌ಆಯಪ್ ಮಾಲೀಕತ್ವ ಹೊಂದಿರುವ ಮೆಟಾ ಸಂಸ್ಥೆಯು ರಿಲಯನ್ಸ್‌ನಲ್ಲಿ ಭಾಗಶಃ ಪಾಲನ್ನು ಹೊಂದಿದೆ' ಎಂದು ಹೇಳಿದ್ದಾರೆ.
'ಹೈಜಾಕ್ ಆಗುವುದನ್ನು ತಡೆಯಲು ಮತ್ತು ತಮ್ಮ ಬಳಕೆದಾರರಿಗೆ ಸ್ಥಿರವಾದ ಇಂಟರ್ನೆಟ್ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು, ರಿಲಯನ್ಸ್ (AS18101) ಸಂಸ್ಥೆಯಿಂದ ಬರುವ ಇಂತಹ ಅನಧಿಕೃತ ಬಿಜಿಪಿ ಪ್ರಕಟಣೆಗಳನ್ನು ತಿರಸ್ಕರಿಸುವಂತೆ ನೆಟ್‌ವರ್ಕ್ ಆಪರೇಟರ್‌ಗಳಿಗೆ ಸಲಹೆ ನೀಡಲಾಗಿದೆ' ಎಂದು ಅವರು ತಿಳಿಸಿದ್ದಾರೆ.
'ಜಾಗತಿಕ ಇಂಟರ್ನೆಟ್ ರೂಟಿಂಗ್ ವ್ಯವಸ್ಥೆಯ ಇಂತಹ ದುರುಪಯೋಗವು ಆತಂಕಕಾರಿಯಾಗಿದೆ. ಇತ್ತೀಚೆಗೆ ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿರ್ಬಂಧಿಸಿರುವುದರ ಹಿಂದೆ ನಡೆದಿರುವ ಲಾಬಿ ಪ್ರಯತ್ನಗಳ ಹಿಂದೆ ರಿಲಯನ್ಸ್/ವಾಟ್ಸ್‌ಆಯಪ್ ಪಾತ್ರವಿದ್ದರೂ ಸಹ ನನಗೆ ಅಚ್ಚರಿಯಿಲ್ಲ' ಎಂದು ಹೇಳಿದ್ದಾರೆ.

