ಹೊರ್ಮುಜ್ ಜಲಸಂಧಿ ಬಳಿ ಭಾರತೀಯ ಸಿಬ್ಬಂದಿ ಇರುವ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಲು ಯತ್ನಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. ಇರಾನ್‌ನ ಈ ನಡೆ ಸ್ವೀಕಾರಾರ್ಹವಲ್ಲ ಎಂದು ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣ 'ಟ್ರೂಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಭಾರತೀಯ ಹಡಗುಗಳ ಮೇಲೆ ಶುಕ್ರವಾರ ರಾತ್ರಿ ಇರಾನ್ ಡ್ರೋನ್ ದಾಳಿ ನಡೆಸಲು ಯತ್ನಿಸಿದ್ದು, ದಾಳಿಯ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದಿದ್ದಾರೆ.
ಆದರೆ ಟ್ರಂಪ್ ಅವರ ಈ ಆರೋಪಗಳನ್ನು ಇರಾನ್ ತಳ್ಳಿಹಾಕಿದೆ. ಇವೆಲ್ಲವೂ ಆಧಾರರಹಿತ ಎಂದಿದೆ. ಇತ್ತೀಚೆಗೆ ಭಾರತದ ಸಿಬ್ಬಂದಿ ಇದ್ದ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಆರೋಪ ಮಾಡುತ್ತಿದೆ ಎಂದು ಹೇಳಿದೆ.
ಇತ್ತೀಚೆಗಷ್ಟೇ ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ 3 ತೈಲ ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು. ದಾಳಿಯಲ್ಲಿ 'ಸೆಟ್ಬೆಲ್ಲೊ' ಹಡಗಿನಲ್ಲಿದ್ದ ಮೂವರು ಭಾರತೀಯರು ಮೃತಪಟ್ಟಿದ್ದರು. ಈ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಭಾರತ ಪ್ರತಿಭಟನೆ ದಾಖಲಿಸಿತ್ತು. ಹಡಗುಗಳ ಮೇಲೆ ದಾಳಿ ನಡೆಸುವ ಬದಲು ರಾಜತಾಂತ್ರಿಕತೆ ಮೂಲಕ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿತ್ತು.
ಭಾರತದ ಸಿಬ್ಬಂದಿ ಇದ್ದ ಹಡಗಿನ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಬಂದರಿನ ಮೇಲೆ ಹೇರಿರುವ ದಿಗ್ಭಂಧನ ಉಲ್ಲಂಘಿಸಿ, ಅಲ್ಲಿಂದ ತೈಲ ಸಾಗಿಸುವುದನ್ನು ತಡೆಯಲು ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೇನೆ ಸಮರ್ಥಿಸಿಕೊಂಡಿತ್ತು.
ಶಾಂತಿ ಒಪ್ಪಂದ: ಮುಂದುವರಿದ ಅನಿಶ್ಚಿತತೆ
ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಕೊನೆಗಾಣಿಸುವ ಕುರಿತಂತೆ ಇರಾನ್ ಮುಂದಿಟ್ಟಿರುವ ಒಪ್ಪಂದದ ರೂಪವನ್ನು ಒಪ್ಪಲು ಸಾಧ್ಯ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹರಿಹಾಯ್ದಿದ್ದಾರೆ. ಇರಾನ್ ಈಗ ಮುಂದಿಟ್ಟಿರುವ ಒಪ್ಪಂದವು ಅದು ಈ ಮೊದಲು ಮಂಡಿಸಿದ್ದ ಪ್ರಸ್ತಾವಕ್ಕೆ ವ್ಯತಿರಿಕ್ತವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಇನ್ನೊಂದೆಡೆ, 'ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸುವ ಹಂತವನ್ನು ತಲುಪಿರಲೇ ಇಲ್ಲ' ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಎರಡೂ ದೇಶಗಳು ತಮ್ಮ ಭಿನ್ನ ನಿಲುವುಗಳನ್ನು ಸ್ಷಪ್ಟವಾಗಿ ಹೇಳಿರುವ ಕಾರಣ ಶಾಂತಿ ಒಪ್ಪಂದದ ವಿಚಾರವಾಗಿ ಮತ್ತೆ ಅನಿಶ್ಚಿತತೆ ಮೂಡಿದೆ.
'ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಕೈಬಿಡಬೇಕು ಎಂಬುದು ಅಮೆರಿಕದ ಒತ್ತಾಯವಾಗಿತ್ತು. ಇದಕ್ಕೆ ಇರಾನ್ ಸಮ್ಮತಿಸಿತ್ತು. ಆದರೆ, ಈಗ ಅದು ಮುಂದಿಟ್ಟಿರುವ ಪ್ರಸ್ತಾವವು ಇದಕ್ಕೆ ವ್ಯತಿರಿಕ್ತವಾಗಿದೆ' ಎಂದು ಟ್ರಂಪ್ ಅವರು ಸಾಮಾಜಿಕ ಜಾಲತಾಣ 'ಟ್ರೂಥ್ ಸೋಷಿಯಲ್'ನಲ್ಲಿ ಬರೆದುಕೊಂಡಿದ್ದಾರೆ.
ಹೊರ್ಮುಜ್ ಜಲಸಂಧಿ ಮೇಲೆ ತನ್ನ ನಿಯಂತ್ರಣ ಅಬಾಧಿತವಾಗಿರಲಿದೆ. ಯುರೇನಿಯಂ ಸಮೃದ್ಧೀಕರಣಗೊಳಿಸುವುದು ತನ್ನ ಹಕ್ಕು ಎಂಬುದಾಗಿ ಇರಾನ್ ಹೇಳಿದೆ.
ಆಧಾರ: ಎನ್‌ಡಿಟಿವಿ
ಇರಾನ್ ಮುಂದಿಟ್ಟ ಪ್ರಸ್ತಾವಕ್ಕೆ ಟ್ರಂಪ್ ಕಿಡಿ: ಶಾಂತಿ ಒಪ್ಪಂದ ಮತ್ತೆ ಅನಿಶ್ಚಿತ
