ನ್ಯೂಯಾರ್ಕ್: 'ಭಯೋತ್ಪಾದನೆ ವಿರುದ್ದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಭಾರತ ಹೊಂದಿದೆ. ಭಯೋತ್ಪಾದನೆ ಹಾಗೂ ಸ್ನೇಹ ಬಾಂಧವ್ಯ ಒಟ್ಟಿಗೆ ಸಾಗಲು ಸಾಧ್ಯವಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಭಯೋತ್ಪಾದನೆ ವಿರುದ್ಧ ಆತ್ಮರಕ್ಷಣೆಯ ಹಕ್ಕು ಚಲಾಯಿಸುವ ಕುರಿತು ಮಾತನಾಡಿರುವ ಜೈಶಂಕರ್, ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೇ ತಿರುಗೇಟು ನೀಡಿದ್ದಾರೆ.
'ಭಯೋತ್ಪಾದನೆಯನ್ನು ಪೋಷಿಸಿಕೊಂಡು ಬಂದಿರುವ ದೇಶವೊಂದು ಈ ವೇದಿಕೆಯಲ್ಲಿ ಸತ್ಯವನ್ನು ತಿರುಚಿದೆ. ಭಯೋತ್ಪಾದನೆಯನ್ನು ಸಹಜ ವಿದ್ಯಮಾನ ಎಂಬಂತೆ ಬಿಂಬಿಸಲು ಮತ್ತು ಅದರ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ವಾದ ಮಂಡಿಸಲಾಗಿದೆ. ಆದರೆ ಇಂತಹ ವಾದಗಳು ಎಂದಿಗೂ ನಡೆಯುವುದಿಲ್ಲ' ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
'ಸೌಹಾರ್ದತೆಯ ನೆಪದಲ್ಲಿ ಭಯೋತ್ಪಾದನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವವರೇ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕಿದೆ' ಎಂದಿದ್ದಾರೆ.
'ಜಾಗತಿಕ ಶಾಂತಿಗೆ ಭಯೋತ್ಪಾದನೆ ನಿರಂತರ ಬೆದರಿಕೆಯಾಗಿದೆ. ಭಯೋತ್ಪಾದನೆ ವಿರುದ್ಧದ 'ಶೂನ್ಯ ಸಹಿಷ್ಣುತೆ' ಧೋರಣೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಉಗ್ರರ ಜಾಲಕ್ಕೆ ಹರಿದುಬರುವ ಆರ್ಥಿಕ ಸಂಪನ್ಮೂಲಗಳನ್ನು ಬಯಲಿಗೆಳೆದು ಅದನ್ನು ಮಟ್ಟಹಾಕಬೇಕಿದೆ' ಎಂದು ಹೇಳಿದ್ದಾರೆ.
ಭಾರತವೇ ಮೊದಲು ಸ್ಪಂದನೆ:
'ನೇಪಾಳದ ಪ್ರವಾಹವಿರಲಿ ಅಥವಾ ವೆನೆಜುವೆಲಾದ ಭೂಕಂಪವೇ ಇರಲಿ, ನಾವು ಮೊದಲಿಗರಾಗಿ ನೆರವಿಗೆ ಧಾವಿಸಿದ್ದೇವೆ. ಆಹಾರ, ಔಷಧ, ಇಂಧನ, ರಸಗೊಬ್ಬರ ಕೊರತೆ ನೀಗಿಸುವುದು ಹಾಗೂ ಜೀವನೋಪಾಯ ಒದಗಿಸುವಲ್ಲಿ ಭಾರತ ನಿರಂತರವಾಗಿ ನೆರವು ನೀಡುತ್ತಾ ಬಂದಿದೆ. ಗ್ಲೋಬಲ್ ಸೌತ್, ಅದರಲ್ಲೂ ಮುಖ್ಯವಾಗಿ ಆಫ್ರಿಕಾ ರಾಷ್ಟ್ರಗಳಲ್ಲಿ ನಮ್ಮ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಗಮನಾರ್ಹ ಬದಲಾವಣೆ ತಂದಿವೆ' ಎಂದು ಅವರು ಉಲ್ಲೇಖಿಸಿದ್ದಾರೆ.
'ಗ್ಲೋಬಲ್ ಸೌತ್ ಜತೆಗಿನ ನಮ್ಮ ಪಾಲುದಾರಿಕೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮಹತ್ವದ ಪಾತ್ರ ವಹಿಸಲಿದೆ' ಎಂದು ಅವರು ತಿಳಿಸಿದ್ದಾರೆ.
'ಈ ಬಾರಿಯ ಅಧಿವೇಶನದ ಮುಕ್ತಾಯದ ವೇಳೆಗೆ ಸದಸ್ಯ ರಾಷ್ಟ್ರಗಳು ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯ ಬದ್ಧತೆಯನ್ನು ಬಲಪಡಿಸಿಕೊಳ್ಳಲಿವೆ ಎಂಬ ಆಶಯ ನನಗಿದೆ. ಶಾಂತಿಗೆ ಬೇರೆ ಮಾರ್ಗವಿಲ್ಲ, ಶಾಂತಿಯೇ ಏಕೈಕ ಮಾರ್ಗ' ಎಂದು ಅವರು ಪ್ರತಿಪಾದಿಸಿದ್ದಾರೆ.

